ಬಾಳ ಸಂಗಾತಿಗಳಾದಎಚ್‌ಐವಿ ಸೋಂಕಿತರು

7

ಬಾಳ ಸಂಗಾತಿಗಳಾದಎಚ್‌ಐವಿ ಸೋಂಕಿತರು

Published:
Updated:

 ಬೆಳಗಾವಿ: ಬದುಕಿನ ಬಗೆಗೆ ಬಣ್ಣ ಬಣ್ಣದ ಕನಸು ಕಟ್ಟಿಕೊಂಡಿದ್ದ ಅವರಿಬ್ಬರಿಗೂ ಎಚ್‌ಐವಿ ಸೋಂಕು ತಗುಲಿತ್ತು. ಈ ಸಂಗತಿ ಗೊತ್ತಾಗುತ್ತಿದ್ದಂತೆಯೇ ಇನ್ನೇನು ತಮ್ಮ ಬದುಕು ಮುಗಿಯಿತು ಎಂದು ಚಿಂತಾಕ್ರಾಂತರಾಗಿದ್ದವರ ಬಾಳಿನಲ್ಲಿ ಬೆಳಗಾವಿಯ `ಸ್ಪಂದನ~ ಸಂಸ್ಥೆ ಬೆಳಕು ಮೂಡಿಸಿದೆ.ಸ್ಪಂದನ ನೆಟವರ್ಕ್ ಆಫ್ ಪಾಜಿಟಿವ್ ಪೀಪಲ್ ಗುರುವಾರ ನಗರದಲ್ಲಿ ಏರ್ಪಡಿಸಿದ್ದ ಎಚ್‌ಐವಿ ಪೀಡಿತರ ವಧು-ವರರ ಸಮಾವೇಶದಲ್ಲಿ ಭಾಗವಹಿಸಿದ್ದವರ ಪೈಕಿ ಏಳು ಜೋಡಿ ಮದುವೆಗೆ ಒಪ್ಪಿಗೆ ಸೂಚಿಸಿವೆ. ಈ ಪೈಕಿ ಎರಡು ಮದುವೆಗಳು ಮಾರನೇ ದಿನವೇ (ಶುಕ್ರವಾರ) ಅನಸೂರಕರಗಲ್ಲಿಯಲ್ಲಿರುವ ಗಣೇಶ ಮಂದಿರದಲ್ಲಿ ಆ ಕುಟುಂಬಗಳ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ನಡೆಯಿತು. ಎರಡೂ ಕುಟುಂಬದವರು ನವ ಜೋಡಿಗಳನ್ನು ಮನಸಾರೆ ಹರಿಸಿದರು.ಬಾಗಲಕೋಟೆಯ  ಅಮಿತ್ (28), ಬೆಳಗಾವಿಯ  ನಮಿತಾ  (23) (ಊರು ಹಾಗೂ ಹೆಸರನ್ನು ಬದಲಾಯಿಸಲಾಗಿದೆ) ಎಚ್‌ಐವಿಯಿಂದ ಬಳಲುತ್ತಿದ್ದರು. ಮದುವೆಯಾಗದ ಇವರಿಗೆ ಮುಂದಿನ ಜೀವನ ಹೇಗೆಂಬ ಚಿಂತೆ ಕಾಡುತ್ತಿತ್ತು. ಈ ನಡುವೆಯೇ ವಧು-ವರರ ಸಮಾವೇಶಕ್ಕೆ ಹೊಸ ಕನಸುಗಳೊಂದಿಗೆ ಆಗಮಿಸಿದ್ದರು.ಪರಸ್ಪರ ಮೆಚ್ಚಿಕೊಂಡ ಇವರು, ಮುಂದಿನ ಜೀವನವನ್ನು ಒಟ್ಟಾಗಿ ಸಾಗಿಸಲು ನಿರ್ಧರಿಸಿ, ಮದುವೆಯಾದರು.

ಸಂಜಯ್ ಹಾಗೂ ಅನುರಾಧಾ (ಹೆಸರು ಬದಲಾಯಿಸಲಾಗಿದೆ) ಅವರಿಗೆ ಹಿಂದೆಯೇ  ಮದುವೆಯಾಗಿತ್ತು. ಸಂಜಯ್ ಮೊದಲ ಪತ್ನಿ ಮತ್ತು ಅನುರಾಧಾ ಮೊದಲ ಪತಿ ನಿಧನರಾಗಿದ್ದಾರೆ. ಆರೋಗ್ಯ ಏರು-ಪೇರಾದಾಗ  ಸಂಗಾತಿಗಳಿರಬೇಕು ಎನ್ನುವ ಕಾರಣದಿಂದ ಇಬ್ಬರೂ ಹೊಸ ಜೀವನಕ್ಕೆ ಕಾಲಿರಿಸಿದ್ದೇವೆ ಎನ್ನುತ್ತಾರೆ ಅವರು.

`ಎಚ್‌ಐವಿ ಪೀಡಿತರಾದವರು ಹೆದರಬೇಕಿಲ್ಲ. ಅವರೂ ಉತ್ತಮ ಜೀವನ ನಡೆಸಬಹುದು. ಸಂಗಾತಿಗಳಿದ್ದರೆ ಇನ್ನಷ್ಟು ಉತ್ತಮ.ಜೊತೆಗೆ ಹೀಗೆ ಮದುವೆ ಮಾಡುವ ಮೂಲಕ ಎಚ್‌ಐವಿ ಹರಡುವುದನ್ನೂ ತಡೆಯಬಹುದು ಎಂಬ ಉದ್ದೇಶದಿಂದ ವಧು-ವರರ ಸಮಾವೇಶ ನಡೆಸಲಾಗುತ್ತಿದೆ ಎನ್ನುತ್ತಾರೆ ಸ್ಪಂದನ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಮಾಳಿ. ಪ್ರೊ. ದಾನೋಜಿ ಅವರು ಮದುವೆ ವೆಚ್ಚಭರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry