ಗುರುವಾರ , ಮೇ 28, 2020
27 °C

ಬಾವಲಿಗಳ ತವರೂರು ಹಿರೇಬಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ಗ್ರಾಮದ ದೇವತೆ, ಶಾಲೆ, ದನಕರುಗಳು, ಚಾವಡಿ, ಅರಳಿಕಟ್ಟೆ ಮುಂತಾದವು ಗ್ರಾಮದ ಭಾಗವಾಗಿರುವಂತೆ ಅಸಂಖ್ಯಾತ ಬಾವಲಿಗಳು ತಾಲ್ಲೂಕಿನ ಹಿರೇಬಲ್ಲ ಗ್ರಾಮದ ಒಂದು ಭಾಗವಾಗಿದ್ದು ಸಂರಕ್ಷಣೆಗೆ ಒಳಪಟ್ಟಿವೆ.  ತೆಲುಗಿನಲ್ಲಿ ಸೀಕರೇವುಲು, ತೋಲುಜಿಬ್ಬಾಳ್ಳು ಎಂದೆಲ್ಲಾ ಕರೆಯುವ ಬಾವಲಿಗಳು ಈ ಗ್ರಾಮದ ಅತಿ ದೊಡ್ಡ ಮರಗಳಾದ ಆಲ, ಅರಳಿ ಹಾಗೂ ಹಿಪ್ಪೆ ಮರಗಳಲ್ಲಿ ವಾಸಿಸುತ್ತಿವೆ. ಗ್ರಾಮದ ಬಿ.ವಿ.ನಾರಾಯಣಸ್ವಾಮಿ ಅವರಿಗೆ ಸೇರಿದ ಜಮೀನಿನಲ್ಲಿರುವ ಬೃಹದಾಕಾರದ ವೃಕ್ಷಗಳಲ್ಲಿ ನೂರಾರು ಬಾವಲಿಗಳು ಹಲವಾರು ವರ್ಷಗಳಿಂದ ಜೀವಿಸುತ್ತಿವೆ. ಹಕ್ಕಿಗಳಂತೆ ಸ್ವತಂತ್ರವಾಗಿ ಹಾರಬಲ್ಲ ಏಕಮಾತ್ರ ಸಸ್ತನಿಯಾದ ಬಾವಲಿಯು ಸಂಘಜೀವಿ. ಅವುಗಳ ವಾಸಸ್ಥಾನವನ್ನು ತೊಂದರೆಗೊಳಪಡಿಸದಿದ್ದರೆ ನೂರಾರು ವರ್ಷಗಳು ಒಂದೇ ನೆಲೆಯಲ್ಲಿ ಜೀವಿಸುತ್ತವೆ. ರಾತ್ರಿಯೆಲ್ಲಾ ಆಹಾರದ ಬೇಟೆಯನ್ನಾಡಿ ಬೆಳಗಿನ ಜಾವ ರೆಂಬೆಗಳಿಗೆ ನೇತು ಬಿದ್ದು ನಿದ್ರಿಸುವ ನಿಶಾಚರ ಜೀವಿಗಳಿವು.  ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ರೋಗಗಳಿಗೆ ಬಾವಲಿಗಳ ಮಾಂಸ ಮದ್ದೆಂಬ ನಂಬಿಕೆಯಿಂದ ಬೇಟೆಯಾಡುತ್ತಾರೆ. ಇದಕ್ಕೆ ಅಪವಾದವೆಂಬಂತೆ ಇಲ್ಲಿ ಯಾರೂ ಬೇಟೆಯಾಡುವುದಿಲ್ಲ ಮತ್ತು ಹೊರಗಿನಿಂದಲೂ ಯಾರನ್ನು ಬೇಟೆಯಾಡಲು ಬಿಡುವುದಿಲ್ಲ. ಹೀಗಾಗಿ ಮರಕ್ಕೆ ನೇತು ಹಾಕಿಕೊಂಡು ಗ್ರಾಮಸ್ಥರ ಮನದೊಳಗೂ ಕೊಂಡಿ ಬೆಸೆದಿವೆ.‘ನಾನು ಸಣ್ಣವನಿದ್ದಾಗ ಯಾರಾದರೂ ಬಾವಲಿಯ ಬೇಟೆಗೆಂದು ಬಂದರೆ ನಮ್ಮ ತಾತ ಅಟ್ಟಿಸಿಕೊಂಡು ಹೋಗುತ್ತಿದ್ದುದು ನೆನಪಿದೆ. ಬಾವಲಿಗಳಿಂದ ನಮಗ್ಯಾರಿಗೂ ತೊಂದರೆಯಿಲ್ಲ.ಅದಕ್ಕೆ ನಾವ್ಯಾಕೆ ತೊಂದರೆ ಮಾಡಬೇಕು. ನಮಗೆ ಇಲ್ಲಿ ಜೀವಿಸಲು ಹಕ್ಕಿರುವಂತೆ ಬಾವಲಿಗಳಿಗೂ ಇದೆ. ನಮ್ಮ ಗ್ರಾಮದ ವಿಶೇಷತೆ’ ಎಂದು ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.