ಬಾವಲಿಗಳ ನೆಮ್ಮದಿ ಕೆಡಿಸಿದ ಪಟಾಕಿ

ಭಾನುವಾರ, ಮೇ 26, 2019
27 °C

ಬಾವಲಿಗಳ ನೆಮ್ಮದಿ ಕೆಡಿಸಿದ ಪಟಾಕಿ

Published:
Updated:

ಶ್ರೀನಿವಾಸಪುರ: ಪಟ್ಟಣದಲ್ಲಿನ ಬಾವಲಿ ಮರಗಳ ಕೆಳಗೆ ಜನ ವಿವೇಚನಾ ರಹಿತವಾಗಿ ಸಿಡಿಸುವ ಪಟಾಗಿಗಳ ಶಬ್ದ ಬಾವಲಿಗಳ ನೆಮ್ಮದಿ ಕೆಡಿಸಿದೆ.ಪಟಾಕಿ ಸಿಡಿಸಿದಾಗ ಉಂಟಾಗುವ ಭಾರಿ ಶಬ್ದ ಮತ್ತು ಹೊಗೆಯಿಂದ ಕಂಗೆಟ್ಟ ಬಾವಲಿಗಳು ಭಯದಿಂದ ಕೊಂಬೆಗಳನ್ನು ಬಿಟ್ಟು ಬಾನೆತ್ತರದಲ್ಲಿ ಚೀರುತ್ತಾ ಹಾರುವ ದೃಶ್ಯ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.

ಈ ಮರಗಳು ಬಸ್ ನಿಲ್ದಾಣದ ಸಮೀಪ ವೃತ್ತದ ಅಂಚಿನಲ್ಲಿವೆ. ಈ ವೃತ್ತದಲ್ಲಿ ಪಟಾಕಿ ಸಿಡಿಸುವುದು ಮಾಮೂಲಾಗಿದೆ.ಪಟಾಕಿ ಸಿಡಿಸಲು ಬಲವಾದ ಕಾರಣವೊಂದು ಬೇಕಾಗಿಲ್ಲ. ಒಂದು ಪಕ್ಷದ ರಾಜಕಾರಣಿ ಚುನಾವಣೆಯಲ್ಲಿ ಗೆದ್ದಾಗ,ಇಲ್ಲಿನ ರಾಜಕಾರಣಿಯೊಬ್ಬರಿಗೆ ಯಾವುದಾದರೂ ಹುದ್ದೆ ಸಿಕ್ಕಾಗ, ತಮಗೆ ಬೇಡವಾದ ವ್ಯಕ್ತಿ ಸೋತಾಗ, ಭಾರತ ಕ್ರಿಕೆಟ್‌ನಲ್ಲಿ ಗೆದ್ದಾಗ, ಎದುರಾಳಿ ಬಿದ್ದಾಗ, ಪಟ್ಟಣದಲ್ಲಿ ಉತ್ಸವ ಅಥವಾ ಉದ್ಘಾಟನೆಗಳಾದಾಗ ಹೀಗೆ ಏನೇ ವಿಶೇಷ ನಡೆದರೂ ಜನರ ಗಮನ ಸೆಳೆಯಲು ಬಸ್ ನಿಲ್ದಾಣದ ಸಮೀಪ ಇರುವ ವೃತ್ತದಲ್ಲಿ ಕಿವಿಯ ತಮಟೆ ಹರಿಯುವಂತೆ ಪಟಾಕಿ ಸಿಡಿಸುವುದು ವಾಡಿಕೆ.ಮಹಾತ್ಮಾಗಾಂಧಿ ರಸ್ತೆಯಲ್ಲಿ  ನಡೆಯುತ್ತಿರುವ ಗಣೇಶ ವಿಗ್ರಹ ಮೆರವಣಿಗೆ ಸಂದರ್ಭದಲ್ಲಿ ಸಿಡಿಸುವ ಪಟಾಕಿ ಶಬ್ದ ಅವುಗಳ ನೆಮ್ಮದಿ ಕೆಡೆಸಿದೆ.ಬೆಕ್ಕಿಗೆ ಚಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬ ಗಾದೆಯಂತೆ, ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟಾಕಿ ಸಿಡಿಸಿ, ಗೂಗಿ ಅಬ್ಬರಿಸಿ, ಕುಣಿದು ಕುಪ್ಪಳಿಸಿ ಸಂತೋಷಪಡುತ್ತಾರೆ. ಆದರೆ ಅಲ್ಲಿನ ಎತ್ತರದ ಮರಗಳಲ್ಲಿ ಮನೆ ಮಾಡಿಕೊಂಡಿರುವ ಬಾವಲಿಗಳು ಸಿಡಿ ಮದ್ದಿನ ಶಬ್ದ, ಹೊಗೆ ಮತ್ತು ವಾಸನೆ ಯಿಂದ ಬಳಲಿ ರೆಕ್ಕೆ ಬಿಚ್ಚಿ ಚೀರುತ್ತ ಹಾರಿ ಮನುಷ್ಯನ ವಿವೇಚನಾ ರಹಿತ ಕೃತ್ಯದ ಬಗ್ಗೆ ಸಾರುತ್ತವೆ.ಇಷ್ಟಾದರೂ ಈ ಅಪರೂಪದ ಹಾರಾಡುವ ಸಸ್ತನಿಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನಷ್ಟು ಪಟಾಕಿ ಸಿಡಿಸಿ ಅವುಗಳ ನೆಮ್ಮದಿಗೆ ಭಂಗ ಉಂಟುಮಾಡುತ್ತಾರೆ.  ಬಾವಲಿಗಳು ಪಟ್ಟಣದ ಹೆಮ್ಮೆ. ಹಗಲು ಹೊತ್ತಿನಲ್ಲಿ ಮರಗಳಿಗೆ ತಲೆ ಕೆಳಗಾಗಿ ಜೋತು ಬಿದ್ದಿರುವ ಸಾವಿ ರಾರು ಬಾವಲಿಗಳು ಹೊರ ಊರು ಗಳಿಂದ ಬರುವ ಪ್ರಯಾಣಿಕರ ಗಮನ ಸೆಳೆಯುತ್ತವೆ.ಸಂಜೆ ಕತ್ತಲೆಯಾಗು ವುದರೊಂದಿಗೆ ಆಹಾರಕ್ಕೆ ಹೊರಡುತ್ತವೆ. ಬೆಳಗಾಗುವುದರೊಳಗೆ ಮತ್ತೆ ಮರಗಳಲ್ಲಿ ನೇತಾಡುತ್ತಿರುತ್ತವೆ. ಜನಸಂದಣಿಯಿಂದಾಗಿ ರಕ್ಷಣೆ ದೊರೆ ಯುವುದರಿಂದ ಅವು ಕೆಲವು ದಶಕ ಗಳಿಂದ ಈ ಮರಗಳನ್ನು ಆಶ್ರಯಿಸಿವೆ.ಬಾವಲಿ ಮರಗಳ ಕೆಳಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕು. ಅವು ವಾಸಿಸುವ ಪ್ರದೇಶವನ್ನು ರಕ್ಷಿತ ಪ್ರದೇಶ ಎಂದು ಘೋಷಿಸಬೇಕು ಎಂಬುದು ಪರಿಸರವಾದಿಗಳ ಆಶಯ. ಇದಕ್ಕೆ ಪುರಸಭೆ ಕ್ರಮಕೈಗೊಳ್ಳಬೇಕು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry