ಬಾಷಾ, ಬಾಲರಾಜ್: ಯಾರಿವರು?

7

ಬಾಷಾ, ಬಾಲರಾಜ್: ಯಾರಿವರು?

Published:
Updated:

ಬೆಂಗಳೂರು: ಮುಖ್ಯಮಂತ್ರಿಯ ವಿರುದ್ಧವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಮೂಲಕ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿನ ಕುಣಿಕೆಯಲ್ಲಿ ಸಿಲುಕಿಸಿರುವ ವಕೀಲರಾದ ಸಿರಾಜಿನ್ ಬಾಷಾ ಮತ್ತು ಕೆ.ಎನ್.ಬಾಲರಾಜ್ ಕುರಿತು ಇಡೀ ರಾಜ್ಯದಾದ್ಯಂತ ಕುತೂಹಲ ಸೃಷ್ಟಿಯಾಗಿದೆ.ಸುದೀರ್ಘ 25 ವರ್ಷಗಳಿಂದ ಗೆಳೆಯರಾಗಿರುವ ಇವರು ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ಕಟ್ಟಾ ಅನುಯಾಯಿಗಳು. ಒಟ್ಟಾಗಿಯೇ ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಇಳಿದಿದ್ದಾರೆ. ಅವರ ಪರಿಚಯ ಇಲ್ಲಿದೆ.ಸಿರಾಜಿನ್ ಬಾಷಾ: ಇವರು ಮೂಲತಃ ತೀರ್ಥಹಳ್ಳಿಯವರಾಗಿದ್ದು, ಸದ್ಯ ಶಿವಮೊಗ್ಗ ನಿವಾಸಿ. ಶಾಂತವೇರಿ ಗೋಪಾಲಗೌಡ ಅವರ ಮನೆಯ ಎದುರಿನಲ್ಲೇ ಇವರ ಮನೆಯೂ ಇತ್ತು. ಪರಿಣಾಮವಾಗಿ ಚಿಕ್ಕಂದಿನಿಂದಲೇ ಸಮಾಜವಾದಿಗಳ ಪ್ರಭಾವಕ್ಕೆ ಒಳಗಾಗಿದ್ದರು.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲೇ ಪೂರ್ಣಗೊಳಿಸಿದ ಬಾಷಾ, ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಬಳಿಕ ಶಿವಮೊಗ್ಗದಲ್ಲೇ ಕಾನೂನು ಪದವಿ ಅಧ್ಯಯನ ಮಾಡಿದ್ದರು. ನಂತರದ ದಿನಗಳಲ್ಲಿ ‘ಸಮುದಾಯ’ ಸಾಂಸ್ಕೃತಿಕ ಸಂಘಟನೆಯಲ್ಲಿದ್ದರು.ಕೆ.ಎನ್.ಬಾಲರಾಜ್: ಇವರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಕೋಣಕೆರೆಯವರು. ಈಗ ಶಿವಮೊಗ್ಗ ನಗರದ ನಿವಾಸಿ. ಹಳ್ಳಿಯಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿದ್ದ ಬಾಲರಾಜ್, ಶಿವಮೊಗ್ಗದಲ್ಲಿ ಕಾನೂನು ಪದವಿ ಪಡೆದಿದ್ದರು. 25 ವರ್ಷಗಳಿಂದಲೂ ಸಿರಾಜಿನ್ ಬಾಷಾ ಅವರೊಂದಿಗೆ ವಕೀಲಿ ವೃತ್ತಿಯಲ್ಲಿದ್ದಾರೆ. ಇವರು ರಾಮಮನೋಹರ ಲೋಹಿಯಾ, ಶಾಂತವೇರಿ ಗೋಪಾಲಗೌಡ, ಕಡಿದಾಳ್ ಮಂಜಪ್ಪ ಮತ್ತಿತರ ಮುತ್ಸದ್ದಿಗಳ ವಿಚಾರಧಾರೆಯಿಂದ ಪ್ರಭಾವಿತರಾದವರು.ಹಣಕ್ಕಾಗಿ ಹೋರಾಟವಲ್ಲ: ಮೊಕದ್ದಮೆ ದಾಖಲಿಸಿದ ಬಳಿಕ ‘ಪ್ರಜಾವಾಣಿ’ ಜೊತೆ ಮಾತನಾಡಿದ ಬಾಲರಾಜ್, ‘ಇದು ತತ್ವ ಆಧರಿಸಿ ನಾವು ಆರಂಭಿಸಿರುವ ಹೋರಾಟ. ನಾವು ಯಾವುದೇ ರಾಜಕೀಯ ಪಕ್ಷಗಳ ಜೊತೆಗೂ ಇಲ್ಲ. ಹಣಕ್ಕಾಗಿ ಇಂತಹ ಹೋರಾಟವನ್ನು ಆಯ್ಕೆ ಮಾಡಿಕೊಂಡಿಲ್ಲ’ ಎಂದರು.  ‘ಈ ಸರ್ಕಾರದ ಭ್ರಷ್ಟಾಚಾರವನ್ನು ಸಹಿಸಲು ಅಸಾಧ್ಯವಾದ ಪರಿಸ್ಥಿತಿಗೆ ಜನರು ತಲುಪಿದ್ದಾರೆ. ಇಂತಹ ಸಂದರ್ಭದಲ್ಲಿ ಕಾನೂನಿನ ಅಡಿಯಲ್ಲಿ ಲಭ್ಯವಿರುವ ಅವಕಾಶ ಬಳಸಿಕೊಂಡು ಮುಖ್ಯಮಂತ್ರಿ ವಿರುದ್ಧ ಹೋರಾಟ ಆರಂಭಿಸಿದ್ದೇವೆ. ಈ ಹೋರಾಟಕ್ಕೆ ಸಮಾಜದ ಎಲ್ಲ ವರ್ಗದ ಜನರ ಬೆಂಬಲವೂ ಅಗತ್ಯ’ ಎಂದು ಹೇಳಿದರು.ಬೆದರಿಕೆ ಇತ್ತು: ‘ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ ಬಳಿಕ ಕೆಲವರು ಪರೋಕ್ಷವಾಗಿ ನಮ್ಮನ್ನು ಬೆದರಿಸಿದರು. ಈ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೆವು. ಅದರ ಪ್ರತಿಯನ್ನು ಪೊಲೀಸ್ ಇಲಾಖೆಯ ಮುಖ್ಯಸ್ಥರಿಗೂ ಕಳುಹಿಸಿದ್ದೆವು. ಇನ್ನೂ ಭದ್ರತೆ ಒದಗಿಸಿಲ್ಲ. ಮುಂದಿನ ದಿನಗಳಲ್ಲಿ ಒದಗಿಸಬಹುದು’ ಎಂದರು.‘ಎಲ್ಲ ಬಗೆಯ ಸವಾಲುಗಳನ್ನು ಎದುರಿಸಲು ಸಿದ್ದರಾಗಿಯೇ ಭ್ರಷ್ಟಾಚಾರದ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಇಳಿದಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry