ಭಾನುವಾರ, ನವೆಂಬರ್ 17, 2019
23 °C

ಬಾಸ್ಟನ್ ಸ್ಫೋಟಕ್ಕೆ ಪಾಕ್ ಉಗ್ರರ ನಂಟು?

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್/ಪಿಟಿಐ): ಬಾಸ್ಟನ್ ಸ್ಫೋಟದ ಶಂಕಿತ ಸಹೋದರರಿಬ್ಬರು ಪಾಕಿಸ್ತಾನದ ವಜೀರಿಸ್ತಾನ ಮೂಲದ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿರುವ ಶಂಕೆಯ ಹಿನ್ನಲೆಯಲ್ಲಿ ಆ ಬಗ್ಗೆ ಅಮೆರಿಕದ ಎಫ್‌ಬಿಐ ತನಿಖೆ ನಡೆಸುತ್ತಿದೆ.ಚೆಚನ್ಯ ಬಂಡುಕೋರ ಸಹೋದರರಾದ ಟೆಮರ್‌ಲ್ಯಾನ್ ಮತ್ತು ಝೋಕರ್ ಸರ್ನೆವ್ ಅವರು ಇಸ್ಲಾಮಿಕ್ ಜಿಹಾದ್ ಯೂನಿಯನ್  (ಐಜೆಯು) ಜತೆ ಸಂಪರ್ಕ ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಎಫ್‌ಬಿಐ ಆ ಸಂಘಟನೆಯ ಚಲನವಲನಗಳ ಮೇಲೆ ತೀವ್ರ ನಿಗಾ ಇಟ್ಟಿದೆ.ಆಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೇನಾಪಡೆಗಳ ವಿರುದ್ಧ ಹೋರಾಡಲು ಎಸ್‌ಜೆಯು ಚೆಚನ್ಯ, ಉಜ್ಬೇಕಿಸ್ತಾನ ಬಂಡುಕೋರರು ಹಾಗೂ ಇತರ ರಾಷ್ಟ್ರಗಳ ಉಗ್ರ ಸಂಘಟನೆಗಳ ಸದಸ್ಯರಿಗೆ ತರಬೇತಿ ನೀಡುತ್ತಿರುವ ಹಿನ್ನೆಲೆಯಲ್ಲಿ ಎಫ್‌ಬಿಐ ತನಿಖೆ ಚುರುಕುಗೊಳಿಸಿದೆ ಎಂದು ಅಮೆರಿಕದ ಮಾಧ್ಯಮವನ್ನು ಉಲ್ಲೇಖಿಸಿ `ನ್ಯೂಸ್ ಇಂಟರ್‌ನ್ಯಾಷನಲ್' ವರದಿ ಮಾಡಿದೆ.ಏಪ್ರಿಲ್ 15ರಂದು ಬಾಸ್ಟನ್‌ನಲ್ಲಿ  ನಡೆದ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿ, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಎನ್‌ಕೌಂಟರ್‌ನಲ್ಲಿ ಟೆಮರ್‌ಲ್ಯಾನ್ ಸಾವನ್ನಪ್ಪಿದ್ದರೆ, ಸರ್ನೆವ್‌ನನ್ನು ಜೀವಂತವಾಗಿ ಬಂಧಿಸುವಲ್ಲಿ ಅಮೆರಿಕದ ಪೊಲೀಸರು ಯಶಸ್ವಿಯಾಗಿದ್ದರು.ಶ್ರದ್ಧಾಂಜಲಿ: ಬಾಸ್ಟನ್ ಸ್ಫೋಟದಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಕೋರಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಶ್ವೇತಭವನದಲ್ಲಿ ಕ್ಷಣಕಾಲ ಮೌನ ಆಚರಿಸಿದರು. ಬಾಸ್ಟನ್‌ನಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನಗರದ ಮೇಯರ್ ಥಾಮಸ್ ಮೆನಿನೊ ಮತ್ತು ಮೆಸಾಚುಸೆಟ್ಸ್ ಗವರ್ನರ್ ಡೇವಲ್ ಪ್ಯಾಟ್ರಿಕ್ ಪಾಲ್ಗೊಂಡಿದ್ದರು.

ಸೆಲ್‌ಫೋನ್ ಬಳಕೆ

ವಾಷಿಂಗ್ಟನ್ (ಪಿಟಿಐ):
ಬಾಸ್ಟನ್ ಸ್ಫೋಟದ ಶಂಕಿತ ಆರೋಪಿ ಝೋಕರ್ ಸರ್ನೆವ್ ತನ್ನ ಸೆಲ್‌ಫೋನ್ ಮೂಲಕ `ಫ್ರೆಜರ್ ಕುಕ್ಕರ್ ಬಾಂಬ್' ಸ್ಫೋಟಿಸಿರುವ ಸಾಧ್ಯತೆ ಇದೆ ಎಂದು ಎಫ್‌ಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ತಿಳಿಸಿದೆ. `ಸ್ಫೋಟದ ಬಳಿಕ ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು.ಆದರೆ, ಸರ್ನೆವ್ ಮಾತ್ರ ಬಹಳ ಶಾಂತವಾಗಿದ್ದ. ಸ್ಫೋಟ ಸಂಭವಿಸಿದ ಕೇವಲ 5 ನಿಮಿಷಗಳ ಮೊದಲಷ್ಟೇ ಸರ್ನೆವ್ ಆ ಸ್ಥಳಕ್ಕೆ ಆಗಮಿಸಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ' ಎಂದು ಆರೋಪ ಪಟ್ಟಿಯಲ್ಲಿ ವಿವರಿಸಿದೆ.

ಪ್ರತಿಕ್ರಿಯಿಸಿ (+)