ಗುರುವಾರ , ನವೆಂಬರ್ 21, 2019
21 °C

ಬಾಸ್ಟನ್ ಸ್ಫೋಟ: ಪರಿಸ್ಥಿತಿ ಅವಲೋಕಿಸಿದ ಅಧ್ಯಕ್ಷ ಒಬಾಮ

Published:
Updated:

ವಾಷಿಂಗ್ಟನ್ (ಪಿಟಿಐ): ಬಾಸ್ಟನ್ ಅವಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಬರಾಕ್ ಒಬಾಮ ಅವರು ಉನ್ನತ ಭದ್ರತಾ ಸಿಬ್ಬಂದಿ ಜತೆ ಶನಿವಾರ ಸುಮಾರು 90 ನಿಮಿಷಗಳ ಕಾಲ ಸಮಾಲೋಚನೆ ನಡೆಸಿ ಪರಿಸ್ಥಿತಿ ಅವಲೋಕಿಸಿದರು.ಪ್ರಕರಣದ ಎರಡನೆಯ ಶಂಕಿತ ಆರೋಪಿಯನ್ನು ಬಂಧಿಸಿದ ಮರುದಿನ ಈ ಸಭೆ ನಡೆಸಿದ ಒಬಾಮ, ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಎದ್ದಿರುವ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸಿದರು. ಭಯೋತ್ಪಾದನೆ ನಿಗ್ರಹಕ್ಕೆ ಕೈಗೊಳ್ಳಲಾದ ಕ್ರಮಗಳನ್ನು ಈ ಸಂದರ್ಭದಲ್ಲಿ ಹಿರಿಯ ಗುಪ್ತಚರ ಹಾಗೂ ತನಿಖಾ ಅಧಿಕಾರಿಗಳು ಒಬಾಮಗೆ ಮನವರಿಕೆ ಮಾಡಿಕೊಟ್ಟರು.ವಿಡಿಯೊ ಕಾನ್ಪ್‌ರೆನ್ಸ್ ಮೂಲಕ ಉಪಾಧ್ಯಕ್ಷ ಜೊ ಬಿಡೆನ್ ಅವರೂ ಸಮಾಲೋಚನೆಯಲ್ಲಿ ಪಾಲ್ಗೊಂಡರು ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.ರಿಪಬ್ಲಿಕನ್ ಸಂಸದರು ಆಗ್ರಹಿಸಿದಂತೆ ಬಾಸ್ಟನ್ ಸ್ಫೋಟ ಪ್ರಕರಣದಲ್ಲಿ ಬಂಧಿತ ವ್ಯಕ್ತಿಯನ್ನು `ವೈರಿ ಹೋರಾಟಗಾರ' ಎಂದು ಪರಿಗಣಿಸಲು ಒಬಾಮ ಆಡಳಿತ ಒಪ್ಪದೆ ಇರುವುದನ್ನು ಸೆನೆಟ್ ಆರ್ಮಡ್ ಸೇವಾ ಸಮಿತಿಯ ಅಧ್ಯಕ್ಷ ಕಾರ್ಲ್ ಲೆವಿನ್ ಬೆಂಬಲಿಸಿದ್ದಾರೆ.

ಪ್ರತಿಕ್ರಿಯಿಸಿ (+)