ಬುಧವಾರ, ನವೆಂಬರ್ 20, 2019
24 °C

ಬಾಸ್ಟನ್ ಸ್ಫೋಟ: ಸಹೋದರರ ಕೃತ್ಯ

Published:
Updated:
ಬಾಸ್ಟನ್ ಸ್ಫೋಟ: ಸಹೋದರರ ಕೃತ್ಯ

ಬಾಸ್ಟನ್ (ಪಿಟಿಐ): ಈಚೆಗೆ ಇಲ್ಲಿ ನಡೆದ ಮ್ಯಾರಥಾನ್ ಸಂದರ್ಭ ನಡೆದ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆಚನ್ಯಾ ಮೂಲದ ಶಂಕಿತ ಇಬ್ಬರು ಸಹೋದರರು ಎಂದು ಪತ್ತೆ ಮಾಡಲಾಗಿದೆ. ಈ ಪೈಕಿ ಒಬ್ಬ  ಪೊಲೀಸ್ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ. ಮತ್ತೊಬ್ಬನಿಗಾಗಿ ಶೋಧಕಾರ್ಯ ನಡೆದಿದೆ.ಶಂಕಿತ ಈ ಸಹೋದರರು ಗುಂಡಿನ ದಾಳಿ ನಡೆಸಿದಾಗ ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ. ಮೃತ ಈ ಶಂಕಿತ ವ್ಯಕ್ತಿಯನ್ನು ರಷ್ಯಾದಲ್ಲಿ ಜನಿಸಿದ ಟಮೆರ‌್ಲಾನ್ ಸರ್ನೆವ್ (26) ಎಂದು ಗುರುತಿಸಲಾಗಿದ್ದರೆ ಈತನ ಸಹೋದರ 19 ವರ್ಷದ ಝೋಕರ್ ಸರ್ನೆವ್ ಕಿರ್ಜಿಸ್ತಾನ್‌ನಲ್ಲಿ ಜನಿಸಿದ್ದಾನೆ. ರಷ್ಯಾ ಪ್ರಾಂತದ ಚೆಚನ್ಯಾ ಈ ಸಹೋದರ ಮೂಲವಾಗಿದ್ದು ಈ ಭಾಗ ಇಸ್ಲಾಮ್ ಬಂಡುಕೋರರ ಬಾಂಬ್ ದಾಳಿಯಿಂದಾಗಿ ನಲುಗಿಹೋಗಿದೆ.ಈ ಸಹೋದರರು ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಯೂರುವುದಕ್ಕಿಂತ ಮೊದಲು ಹಲವು ವರ್ಷಗಳ ಹಿಂದೆ ಕಜಕಸ್ತಾನಕ್ಕೆ ತೆರಳಿದ್ದರು ಎಂದು ಅಮೆರಿಕದ ಮಾಧ್ಯಮಗಳು ತಿಳಿಸಿವೆ. ತಪ್ಪಿಸಿಕೊಂಡಿರುವ ಮತ್ತೊಬ್ಬನ ಪತ್ತೆಗೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದು ಆತ ಶಸ್ತ್ರಸಜ್ಜಿತನಾಗಿದ್ದು ಬಹಳ ಅಪಾಯದ ವ್ಯಕ್ತಿಯಾಗಿದ್ದಾನೆ ಎಂದು ತಿಳಿಸಲಾಗಿದೆ.ಘಟನೆಯ ಹಿನ್ನೆಲೆಯಲ್ಲಿ ಎಲ್ಲ ಸಾರ್ವಜನಿಕ ಸಂಚಾರಿ ಸೇವೆಗಳನ್ನು ನಿರ್ಬಂಧಿಸಿ ಗವರ್ನರ್ ಡೆವಲ್ ಪ್ಯಾಟ್ರಿಕ್ ಆದೇಶ ಹೊರಡಿಸಿದ್ದಾರೆ. ವಾಟರ್‌ಟೌನ್, ನ್ಯೂಟಾನ್, ವಾಲ್ತ್ಯಾಮ್ ಹಾಗೂ ಕೇಂಬ್ರಿಡ್ಜ್ ಪಟ್ಟಣಗಳ ನಿವಾಸಿಗಳಿಗೆ ಮನೆ ಬಿಟ್ಟು ಹೊರ ಬಾರದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.`ಪರಿಸ್ಥಿತಿ ಗಂಭೀರವಾಗಿದ್ದು ಸಾರ್ವಜನಿಕರ ರಕ್ಷಣೆಗಾಗಿ ನಾವಿಲ್ಲಿ ಇದ್ದೇವೆ. ಘಟನೆಗೆ ಇದೇ ಸಹೋದರರೇ ಕಾರಣರಾಗಿದ್ದಾರೆ ಎಂದು ನಾವು ನಂಬಿದ್ದೇವೆ' ಎಂದು ಮೆಸಾಚ್ಯುಯೇಟ್ಸ್ ರಾಜ್ಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಸೋಮವಾರ ಬಾಸ್ಟನ್‌ನಲ್ಲಿ ಕೊನೆಗೊಂಡ ಮ್ಯಾರಥಾನ್ ಸಂದರ್ಭ ಸಂಭವಿಸಿದ ಅವಳಿ ಸ್ಫೋಟದಲ್ಲಿ ಮೂವರು ಮೃತಪಟ್ಟು 170ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಘಟನೆಗೆ ಕಾರಣರಾದ ಶಂಕಿತರ ಚಿತ್ರ ಹಾಗೂ ವಿಡಿಯೊಗಳನ್ನು ಎಫ್‌ಬಿಐ ಬಿಡುಗಡೆ ಮಾಡಿತ್ತು.

ಪ್ರತಿಕ್ರಿಯಿಸಿ (+)