ಬುಧವಾರ, ಡಿಸೆಂಬರ್ 11, 2019
21 °C

ಬಾಸ್ ಸೆಂಚುರಿ!

Published:
Updated:
ಬಾಸ್ ಸೆಂಚುರಿ!

* ದರ್ಶನ್ ನಾಯಕರಾಗಿ ನಟಿಸಿರುವ ‘ಬಾಸ್’ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ತೆರೆಕಾಣುತ್ತಿದೆ.

* 125ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ‘ಬಾಸ್’ ತೆರೆಕಾಣುತ್ತಿದೆ. ಈ ಮೂಲಕ ‘ಜಾಕಿ’, ‘ಸೂಪರ್’, ‘ಮೈಲಾರಿ’ ಚಿತ್ರಗಳ ಹಾದಿಯಲ್ಲಿ ‘ಬಾಸ್’ ಕೂಡ ನಡೆದಿದೆ.

* ಸಿನಿಮಾ ತೆರೆಕಾಣುವುದರಲ್ಲಿ ವಿಳಂಬವಾಗಿದೆ ಎನ್ನುವುದು ನಿಜ. ಆದರೆ ಒಂದು ಸಿನಿಮಾ ಯಾವಾಗ ಶುರುವಾಯಿತು, ಅದು ಮುಗಿದದ್ದು ಯಾವಾಗ ಎನ್ನುವುದು ಮುಖ್ಯವಲ್ಲ. ಆ ಸಿನಿಮಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ಮುಖ್ಯ.

* ಬಿಡುಗಡೆಗೆ ವಿತರಕರಾದ ಕುಮಾರ್ ನೆರವಿಗೆ ನಿಂತಿದ್ದಾರೆ. ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಿಸಲು ಧೈರ್ಯ ತುಂಬಿರುವುದು ಅವರೇ.

-‘ಬಾಸ್’ ಚಿತ್ರದ ಬಿಡುಗಡೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಾಪಕ ರಮೇಶ್ ಯಾದವ್ ಮಾತಿನ ಮುಖ್ಯಾಂಶಗಳಿವು.

ತೆಲುಗು, ತಮಿಳುಗಳಲ್ಲಿ ಕೆಲವು ಯಶಸ್ವಿ ಚಿತ್ರಗಳನ್ನು ರೂಪಿಸಿರುವ ನಿರ್ದೇಶಕ ರಘುರಾಜ್, ‘ಬಾಸ್’ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಅವರು ಚಿತ್ರದ ಬಗ್ಗೆ ಹೇಳಿದ್ದು:

‘ಮಾಸ್ ಮತ್ತು ಕ್ಲಾಸ್  ಪ್ರೇಕ್ಷಕರ ನಿರೀಕ್ಷೆಗಳಿಗೆ ತಕ್ಕಂತೆ ಚಿತ್ರವಿದೆ. ಕಲಾವಿದರ ಅತ್ಯುತ್ತಮ ನಟನೆಯೊಂದಿಗೆ, ತಾಂತ್ರಿಕವಾಗಿಯೂ ಇದು ಶ್ರೀಮಂತ ಚಿತ್ರ. ಕ್ಲೈಮ್ಯಾಕ್ಸ್‌ನ ಒಂದು ಷಾಟ್‌ಗಾಗಿ ಎರಡೂವರೆ ತಿಂಗಳು ತೆಗೆದುಕೊಂಡಿದ್ದೇವೆ. ಇದೊಂದು ರೀತಿಯಲ್ಲಿ ‘ಥ್ರೀಡಿ’ ಸಿನಿಮಾ ಇದ್ದಂತೆ. ಕನ್ನಡಕ ಇಲ್ಲದೆಯೇ ‘ಥ್ರೀಡಿ’ ಪರಿಣಾಮ ಸೃಷ್ಟಿಸುವ ಪ್ರಯತ್ನ ನಡೆಸಿದ್ದೇವೆ’.

ಅಂದಹಾಗೆ, ರಘುರಾಜ್ ವೃತ್ತಿಯಿಂದ ಪತ್ರಕರ್ತರು. ಈಗಲೂ ಪತ್ರಿಕೆಗಳಿಗಾಗಿ ಬರೆಯುತ್ತಿರುವ ಅವರು, ಒಂದು ಕಾಲದಲ್ಲಿ ಹದಿನೇಳಕ್ಕೂ ಹೆಚ್ಚು ಪತ್ರಿಕೆಗಳಿಗೆ ನಿಯಮಿತವಾಗಿ ಬರೆಯುತ್ತಿದ್ದರಂತೆ. ಕನ್ನಡದ ‘ಬಾಸ್’ ಸೇರಿದಂತೆ ಈ ತಿಂಗಳು ಅವರ ನಿರ್ದೇಶನದ ಮೂರು ಸಿನಿಮಾ ತೆರೆಕಾಣುತ್ತಿವೆ. ಎರಡು ಹೊಸ ಸಿನಿಮಾ ಸೆಟ್ಟೇರಿವೆ.

ರಘುರಾಜ್ ಪ್ರತಿಭೆಯ ಬಗ್ಗೆ ರಮೇಶ್ ಯಾದವ್ ಅವರಿಗೆ ಅಪರಿಮಿತ ವಿಶ್ವಾಸ. ಆ ಕಾರಣದಿಂದಲೇ, ಇದೇ ನಿರ್ದೇಶಕರೊಂದಿಗೆ ‘ಪೆಟ್ರೋಲ್’ ಎಂಬ ಸಿನಿಮಾ ಮಾಡುತ್ತಿದ್ದಾರಂತೆ. ಚಿತ್ರಕಥೆ ಸಿದ್ಧತೆ ಹಂತದಲ್ಲಿದೆಯಂತೆ.

ಕೊನೆಯದಾಗಿ ಮಾತಿಗೆ ನಿಂತದ್ದು ವಿತರಕ ಕುಮಾರ್. ‘ಕನ್ನಡ ಸಿನಿಮಾ ಮಾರುಕಟ್ಟೆಯಲ್ಲಿ ಈಚಿನ ದಿನಗಳಲ್ಲಿ ತಂಗಾಳಿ ಬೀಸುತ್ತಿದೆ. ನಿರ್ಮಾಪಕರ ವಲಯದಲ್ಲಿ ಸಹಕಾರ ಮನೋಭಾವ ಕಾಣಿಸುತ್ತಿದೆ’ ಎಂದು ಕುಮಾರ್ ಸಂತಸ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)