ಬಾಹ್ಯಾಕಾಶದಲ್ಲಿ ಭಗ್ನಾವಶೇಷಗಳ ಸಮಸ್ಯೆ
ಮೈಸೂರು: ಕೋಟ್ಯಂತರ ಡಾಲರ್ಗಳನ್ನು ಬಾಹ್ಯಾಕಾಶ ಯೋಜನೆಗಳಿಗೆ ಖರ್ಚು ಮಾಡಲಾಗುತ್ತಿದ್ದರೂ ಅಂತರಿಕ್ಷದಲ್ಲಿ ಉಳಿದುಬಿಟ್ಟಿರುವ ಭಗ್ನಾವಶೇಷಗಳ ತೆರವಿಗೆ ಯಾವುದೇ ಯೋಜನಾಬದ್ಧ ಪ್ರಯತ್ನ ನಡೆಯದಿರುವುದು ವಿಜ್ಞಾನಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮೈಸೂರಿನ ಇನ್ಫೋಸಿಸ್ನಲ್ಲಿ ನಡೆಯುತ್ತಿರುವ ಬಾಹ್ಯಾಕಾಶ ಸಂಶೋಧನಾ ಸಮಿತಿ (ಕಾಸ್ಪರ್) ಜಾಗತಿಕ ಸಮ್ಮೇಳನದಲ್ಲಿ ಗುರುವಾರ ಬಾಹ್ಯಾಕಾಶ ವಿಜ್ಞಾನಿಗಳು ಈ ವಿಷಯದ ಕುರಿತು ಚರ್ಚೆ ನಡೆಸಿದಾಗ ಹಲವು ರೋಚಕ ಅಂಶಗಳು ಬೆಳಕಿಗೆ ಬಂದವು.
`6,300 ಮೆಟ್ರಿಕ್ ಟನ್ನಷ್ಟು ಭಗ್ನಾವಶೇಷ ರಾಶಿಯು ಲಿಯೋ (ಲೋವರ್ ಅರ್ಥ್ ಆರ್ಬಿಟ್) ಮತ್ತು ಜಿಯೋ (ಜಿಯೋಸ್ಟೇಷನರಿ ಆರ್ಬಿಟ್) ನಡುವೆ ಇದೆ. ಈ ಅವಶೇಷಗಳ ರಾಶಿಯು ಮುಂದೊಂದು ದಿನ ಉಪಗ್ರಹ ಮತ್ತು ಬಾಹ್ಯಾಕಾಶ ಯೋಜನೆಗಳಿ ಕಂಟಕವಾಗುವ ಅಪಾಯವಿದೆ~ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಾಸಾ ವಿಜ್ಞಾನಿ ಜೆ.ಸಿ. ಲಿಯು ಅವರು, `ಭಗ್ನಾವಶೇಷ ತೆರವಿಗೆ ನಾಸಾ ಬಜೆಟ್ನಲ್ಲಿ ಒಂದೇ ಒಂದು ಪೈಸೆ ಹಣವನ್ನೂ ಇಟ್ಟಿಲ್ಲ~ ಎಂದು ಹೇಳಿದ್ದು ಕೇಳಿ ವಿಜ್ಞಾನಿಗಳ ಸಮೂಹ ಚಕಿತಗೊಂಡಿತು.
ಸುಮಾರು 16,400 ಭಗ್ನಾವಶೇಷಗಳಿವೆ.
ಅದರಲ್ಲಿ ರಾಕೆಟ್ನ ಹೊರಮೈ ಚೂರುಗಳು, ಅಂತರಿಕ್ಷ ನೌಕೆಯ ಭಾಗಗಳು ಸೇರಿವೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಪಿಎಸ್ಎಲ್ವಿ ಸಿ -18 ಅನ್ನು ಉಡಾವಣೆ ಮಾಡುವಾಗ ನಿಗದಿತ ಅವಧಿಗಿಂತ ಒಂದು ನಿಮಿಷ ವಿಳಂಬ ಆಗಲು ಈ ಭಗ್ನಾವಶೇಷಗಳ ಸಮಸ್ಯೆಯೇ ಕಾರಣವಾಗಿತ್ತು.
ಸಭೆಯಲ್ಲಿ ಮಾತನಾಡಿದ ಅಮೆರಿಕದ ವಿಮಾನಯಾನ ಸಂಶೋಧನಾ ಪ್ರಯೋಗಾಲಯದ ಮೊರಿಬಾ ಜಾ, `ಬಾಹ್ಯಾಕಾಶ ಪರಿಸರದಿಂದ ನಿಶ್ಚಲ ಭಗ್ನಾವಶೇಷಗಳನ್ನು ತೆರವುಗೊಳಿಸಲು ಒಂದು ಸಮಗ್ರ ಯೋಜನೆ ಮಾಡುವ ಬಗ್ಗೆ ನಮಗೆ ಅಲ್ಪಜ್ಞಾನವಿದೆ. ಈ ಕುರಿತು ಮಾಹಿತಿ ಸಂಗ್ರಹಿಸುವ ಬಗೆಯನ್ನು ಮೊದಲು ಸಂಶೋಧಿಸಬೇಕಾದ ಅವಶ್ಯಕತೆ ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ಕಾರ್ಯಾರಂಭವಾಗಬೇಕು~ ಎಂದು ಹೇಳಿದರು.
`ಈ ಸಮಸ್ಯೆಯನ್ನು ಹೀಗೆಯೇ ಬಿಟ್ಟರೆ ಮುಂದೊಂದು ದಿನ ಬಾಹ್ಯಾಕಾಶಕ್ಕೆ ಉಡಾವಣೆಗೊಂಡ ಉಪಗ್ರಹಗಳು ಮತ್ತು ಗಗನನೌಕೆಗಳ ನಡುವೆ ಅಪಘಾತಗಳು ಹೆಚ್ಚಬಹುದು~ ಎಂದು ಕಾರ್ಸ್ಟನ್ ವೀಡಮನ್ ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.