ಬುಧವಾರ, ಏಪ್ರಿಲ್ 21, 2021
32 °C

ಬಾಹ್ಯ ಅಭ್ಯರ್ಥಿಗಳು ಸೇರ್ಪಡೆ, ಕೇಸರಹಟ್ಟಿ ಅನರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಗಿರಿ: ಇಲ್ಲಿನ ರುದ್ರಸ್ವಾಮಿ ಪ್ರೌಢಶಾಲೆಯ ಮೈದಾನದಲ್ಲಿ ಮಂಗಳವಾರ ನಡೆದ ಕನಕಗಿರಿ ವಲಯ  ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಕೇಸರಹಟ್ಟಿ ಗ್ರಾಮದ ಸರ್ಕಾರಿ  ಪ್ರೌಢಶಾಲೆಯ ಬಾಲಕರ ತಂಡವನ್ನು ಕೊಕ್ಕೊ ಪಂದ್ಯದಿಂದ ಅನರ್ಹಗೊಳಿಸಲಾಯಿತು.ವಿವಿಧ ತಂಡಗಳನ್ನು ಸೋಲಿಸಿ ಅಂತಿಮ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದ್ದ ಕೇಸರಹಟ್ಟಿ ಸರ್ಕಾರಿ ಪ್ರೌಢಶಾಲೆಯ ಕೊಕ್ಕೊ ತಂಡದಲ್ಲಿ ಬಾಹ್ಯ ವಿದ್ಯಾರ್ಥಿಗಳು ಸೇರ್ಪಡೆಗೊಂಡು ಆಟವಾಡುತ್ತಿದ್ದಾರೆ ಎಂದು ಎದುರಾಳಿ ಹೇರೂರು ತಂಡದವರು ದೂರಿದರು.ಹೇರೂರು ತಂಡದವರು ಬಾಹ್ಯ ಅಭ್ಯರ್ಥಿಗಳ ಬಗ್ಗೆ ಸಾಕ್ಷಿ ಸಮೇತ ಕ್ರೀಡೆ ಆರಂಭವಾಗುವ ಮುಂಚೆ ದೂರಿದ ಹಿನ್ನೆಲೆಯಲ್ಲಿ ಕೇಸರಹಟ್ಟಿ ಶಾಲೆಯ ದೈಹಿಕ ಶಿಕ್ಷಕ ಚಂದ್ರಶೇಖರ ರಾಠೋಡ್ ಅವರು ಬಾಹ್ಯ ವಿದ್ಯಾರ್ಥಿಗಳನ್ನು ಹೊರಗಡೆ ಕಳಿಸಿದರು, ನಿರ್ಣಾಯಕರು ಕೂಡ ವಿದ್ಯಾರ್ಥಿಗಳ ಗುರುತಿನ ಚೀಟಿ ಪರಿಶೀಲಿಸಿ ಕ್ರೀಡೆಯ ನಿಯಮ ಅನುಸಾರವಾಗಿ ಕೇಸರಹಟ್ಟಿ ತಂಡಕ್ಕೆ ಅನರ್ಹ ಪಟ್ಟ ನೀಡಿ ಮೈದಾನದಿಂದ ಹೊರಹಾಕಿದರು.ಅನರ್ಹ ಗೊಳಿಸಿದ ಸಾಕ್ಷಿಗೆ ದೈಹಿಕ ಶಿಕ್ಷಕರು ಬಿಳಿ ಹಾಳೆಯ ಮೇಲೆ ಸಹಿ ಹಾಕಿ ಹೇರೂರು ಸರ್ಕಾರಿ ಪ್ರೌಢಶಾಲೆಯ ತಂಡ ಕೊಕ್ಕೊ ಪಂದ್ಯದಲ್ಲಿ ಜಯ ಸಾಧಿಸಿದೆ ಎಂದು ತೀರ್ಮಾನಿಸಿದರು.ನಿರಾಶೆ: ಕೇಸರಹಟ್ಟಿ ಸರ್ಕಾರಿ ಪ್ರೌಢಶಾಲೆಯವರು ಬಾಲಕರ ಕೊಕ್ಕೊ ಪಂದ್ಯದಲ್ಲಿ ಬಾಹ್ಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಆಟವಾಡಿದ್ದರಿಂದ ತಾವು ಫೈನಲ್‌ಗೆ ಹೋಗುವುದು ತಪ್ಪಿತು ಎಂದು ಸೆಮಿ ಫೈನಲ್‌ನಲ್ಲಿ ಕೇಸರಹಟ್ಟಿಯಿಂದ ಸೋಲುಂಡ ಕನಕಗಿರಿ ತಂಡದವರು ದೂರಿದರು.ಬಾಹ್ಯ ವಿದ್ಯಾರ್ಥಿಗಳು ಆಟವಾಡಿದ ಕಾರಣ ತಾವು ಸೆಮಿ ಫೈನಲ್‌ನಲ್ಲಿ ಸೋಲಬೇಕಾಯಿತು ಎಂದು ಕೊಕ್ಕೊ ಆಟಗಾರರಾದ ಹನುಮಂತ, ಫಕೀರಗೌಡ, ಹನುಮೇಶ ಹಾಗೂ ಮಲ್ಲಿಕಾರ್ಜುನ ಅವರು  ನಿರಾಶೆಯಿಂದ `ಪ್ರಜಾವಾಣಿ~ಗೆ ತಿಳಿಸಿದರು.ವಿದ್ಯಾರ್ಥಿಗಳಿಗೆ ಉತ್ತಮವಾಗಿ ತರಬೇತಿ ನೀಡಲಾಗಿತ್ತು, ಅಂತಿಮ ಪಂದ್ಯದಲ್ಲಿ ಜಯ ಸಾಧಿಸುವ ವಿಶ್ವಾಸ ಇತ್ತು, ಬಾಹ್ಯ ವಿದ್ಯಾರ್ಥಿಗಳ ಸೇರ್ಪಡೆಯಿಂದ ತಮ್ಮ ವಿದ್ಯಾರ್ಥಿಗಳು ಪರಾಜಿತರಾದರೆಂದು ದೈಹಿಕ ಶಿಕ್ಷಕರಾದ ಶಂಕರ ಸೋಮನಕಟ್ಟಿ, ಶಾಮೀದಸಾಬ ಲೈನದಾರ ಅಸಮಾಧಾನ ವ್ಯಕ್ತಪಡಿಸಿದರು.ಎಚ್ಚರಿಕೆ ಗಂಟೆ: ಬಾಹ್ಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಆಟವಾಡಿದ ಪರಿಣಾಮ ಕೇಸರಹಟ್ಟಿ ತಂಡವನ್ನು ಅನರ್ಹಗೊಳಿಸಿದ ಕ್ರಮವನ್ನು ಅನೇಕ ಶಾಲೆಗಳ ಶಿಕ್ಷಕರು ಹರ್ಷ ವ್ಯಕ್ತಪಡಿಸಿ ಅನರ್ಹ ಘೋಷಣೆ ಪತ್ರಕ್ಕೆ ಸಹಿ ಹಾಕಿದರು.ತಮ್ಮ ಶಾಲೆಯ ಮಕ್ಕಳೆ ಬಹುಮಾನ ಪಡೆಯಬೇಕೆಂಬ ದುರಾಸೆಯಿಂದ ಶಿಕ್ಷಕರು ಬಾಹ್ಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಆಟವಾಡುವುದು ಅಪರಾಧ, ಅನರ್ಹತೆ ಮಾಡಿರುವುದು ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಾಲೆಯ ಶಿಕ್ಷಕರಿಗೆ ಇದೊಂದು ಎಚ್ಚರಿಕೆ ಗಂಟೆಯಾಗಿದೆ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.