ಬಾ ಇಲ್ಲಿ ಸಂಭವಿಸು...

7

ಬಾ ಇಲ್ಲಿ ಸಂಭವಿಸು...

Published:
Updated:

ಗಾಂಧೀಜಿಯ ಪ್ರಯೋಗಶಾಲೆಗೆ ಸಾಕ್ಷಿಯಾದ ಸಬರಮತಿ ನದಿಯ ಹೆಸರನ್ನೇ ತನ್ನದಾಗಿಸಿಕೊಂಡಿರುವ ಹೆಣ್ಣುಮಗಳು ಒಡಿಶಾದ ಬಂಜರು ನೆಲದಲ್ಲಿ ಕಾಡು ಬೆಳೆಸಿರುವ ಕಥನ, ‘ಯಾವುದೂ ಅಸಂಭವವಲ್ಲ’ ಎನ್ನುವ ಮಾತಿಗೆ ಜೀವಂತ ಸಾಕ್ಷಿಯಂತಿದೆ. ಒಡಿಶಾದ ಆದಿವಾಸಿಗಳ ಜತೆ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಬದುಕುತ್ತಿರುವ ಸಬರಮತಿ, ಈಗ ಅಲ್ಲಿನವರೇ ಆಗಿದ್ದಾರೆ. ಅವರ ಕಾಳಜಿಯಿಂದಾಗಿ ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶ ದಟ್ಟ ಅರಣ್ಯವಾಗಿ ರೂಪುಗೊಂಡಿದೆ. ಬೆಳೆ ವೈವಿಧ್ಯವನ್ನು ಮರೆತಿದ್ದ ಅಲ್ಲಿನ ರೈತರಿಗೆ ಈಗ ಊಟಕ್ಕೆ ಬೇಕಾದ್ದೆಲ್ಲ ಅವರ ತುಂಡು ಜಮೀನಿನಲ್ಲಿ ಬೆಳೆಯುತ್ತಿದೆ. ‘ಸಂಭವ’ ಎನ್ನುವುದು ಸಬರಮತಿ ಅವರ ಬದುಕಿನ ಜೀವಮಂತ್ರವೂ ಅವರು ಸ್ಥಾಪಿಸಿದ ಸಂಸ್ಥೆಯ ಹೆಸರೂ ಹೌದು.ಕಗ್ಗತ್ತಲನ್ನು ಭೇದಿಸಿ ಬಸ್ ಮುನ್ನುಗ್ಗುತ್ತಿತ್ತು. ಒಡಿಶಾದ ರಾಜಧಾನಿಯಿಂದ ಬರೀ ನೂರೈವತ್ತು ಕಿಲೋಮೀಟರ್ ದೂರದ ಊರು. ಥೇಟ್ ಕೊಳಚೆಗುಂಡಿಯಂತಿದ್ದ ಭುವನೇಶ್ವರ ಬಸ್ ನಿಲ್ದಾಣದಲ್ಲಿ ರಾತ್ರಿ ಬಸ್‌ನಲ್ಲಿ ಕುಳಿತಾಗ, ‘ಕೊಹಾಂ?’ ಎಂಬ ಕಂಡಕ್ಟರ್ ಪ್ರಶ್ನೆಗೆ ‘ಸಂಭವ ಆಶ್ರಮ್’ ಎಂದು ಹೇಳಿ ಟಿಕೆಟ್ ಪಡೆದಿದ್ದೆವು. ಐದು ತಾಸು ಪಯಣಿಸಿದರೂ ಆ ಸ್ಥಳ ಬಂದಿರಲಿಲ್ಲ. ಡ್ರೈವರ್ - ಕಂಡಕ್ಟರ್ ಬಳಿ ಹತ್ತಾರು ಸಲ ಕೇಳಿದರೂ ‘ಇನ್ನೂ ಬಂದಿಲ್ಲ... ಇರಿ’ ಎಂಬರ್ಥದ ಸನ್ನೆ ಮಾಡುತ್ತಿದ್ದರು. ನಡುರಾತ್ರಿ ಒಂದೂವರೆ ಗಂಟೆಗೆ ಡ್ರೈವರ್ ದಿಢೀರ್ ಬ್ರೇಕ್ ಹಾಕಿದಾಗ, ಒಬ್ಬ ವ್ಯಕ್ತಿ ಟಾರ್ಚ್ ಹಿಡಿದುಕೊಂಡು ಬಸ್‌ನೊಳಗೆ ಎರಡು ಮೆಟ್ಟಿಲು ಹತ್ತಿ ‘ಕರ್ನಾಟಕಾ..?’ ಎಂದ ಕೂಡಲೇ ಲಗೇಜ್‌ನೊಂದಿಗೆ ಧಡಬಡ ಇಳಿದೆವು. ಬಸ್ ಮುಂದೆ ಹೋಗಿ, ಕಣ್ಮರೆಯಾದ ತಕ್ಷಣ ಮತ್ತೆ ಕಗ್ಗತ್ತಲು. ಟಾರ್ಚ್‌ನ ಕ್ಷೀಣ ಬೆಳಕಿನಲ್ಲಿ ಹೊರಟಾಗ, ಅಕ್ಕಪಕ್ಕ ಕಾಡು. ‘ಎಂಥ ಕಡೆ ಬಂದ್ ಇದ್ದಾರಲ್ಲ ಮಾರಾಯ!’ ಎಂಬ ಉದ್ಗಾರ ಹೊರಟಿತು.ಮೂರ್ನಾಲ್ಕು ತಾಸು ನಿದ್ದೆ ಮಾಡಿ ಎದ್ದಾಗ ಕೇಳಿಸಿದ್ದು ನವಿಲು, ಮಂಗಗಳ ಕೂಗು. ಕೊಠಡಿ ಹಿಂದೆಯೇ ಹತ್ತಾರು ಜಿಂಕೆಗಳು ಓಡಿಹೋದ ಸದ್ದು. ನಾನಾ ಪಕ್ಷಿಗಳ ಕಲರವ. ‘ಹ್ಹಾ ಒಳ್ಳೇ ಜಾಗ!’ ಎಂಬ ಮೆಚ್ಚುಗೆ ಎಲ್ಲರದೂ. ‘ಅರ್ಧ - ಒಂದು ಅಡಿ ಎತ್ತರದ ಹುಲ್ಲು ಬಿಟ್ಟರೆ ಬೇರೇನೂ ಬೆಳೆಯದ ಈ ಜಾಗ ಇಂದು ಈ ಸ್ಥಿತಿಗೆ ಬಂದಿದೆ’ ಎಂಬ ದನಿ ಕೇಳಿ ಹಿಂದೆ ನೋಡಿದಾಗ, ಸಬರಮತಿ ಮುಗುಳ್ನಗುತ್ತ ನಿಂತಿದ್ದರು.* * * * *ಆಂಧ್ರಪ್ರದೇಶದ ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಮಗಳು ಒಡಿಶಾದ ಮೂಲೆಯೊಂದರಲ್ಲಿ ಬುಡಕಟ್ಟು ಸಮುದಾಯದವರ ಜತೆ ಸೇರಿಕೊಂಡು, ಜೀವ ವೈವಿಧ್ಯ ರಕ್ಷಣೆಗೆ ಶ್ರಮಿಸುತ್ತಿರುವ ಬಗ್ಗೆ ಮಿತ್ರ ಜಿ. ಕೃಷ್ಣಪ್ರಸಾದ್ ಹೇಳಿದಾಗ ಹಲವು ಪ್ರಶ್ನೆಗಳು ಮೂಡಿದ್ದವು. ತಿರುಪತಿಯಲ್ಲಿ ನಡೆದ ‘ಬೀಜ ಸಂರಕ್ಷಕರ ಮೇಳ’ಕ್ಕೆ ತನ್ನೂರಿನ ವೈಶಿಷ್ಟ್ಯಪೂರ್ಣ ಭತ್ತದ ತೆನೆಗಳನ್ನು ಹೊತ್ತು ತಂದಿದ್ದ ಸಬರಮತಿ ತಮ್ಮ ಕೆಲಸದ ಬಗ್ಗೆ ಹೆಚ್ಚೇನೂ ಹೇಳದೇ, ‘ನಮ್ಮೂರಿಗೆ ಬನ್ನಿ’ ಎಂದು ಆಹ್ವಾನಿಸಿದ್ದರು.ನಂತರ ಭುವನೇಶ್ವರದಲ್ಲಿ ನಡೆದ ‘ಭತ್ತ ಉಳಿಸಿ ಆಂದೋಲನ’ದ ಕಾರ್ಯಕ್ರಮದಲ್ಲಿ, ಒಡಿಶಾದ ಮೂಲ ತಳಿಗಳ ಅವನತಿ ಹಾಗೂ ಕೃಷಿಯಲ್ಲಿ ಮಹಿಳೆಯರ ಪಾತ್ರದ ಕಣ್ಮರೆ ಕುರಿತು ಅವರು ಕಳವಳದಿಂದಲೇ ಮಾತಾಡಿದ್ದರು. ‘ಒಬ್ಬೊಬ್ಬ ರೈತ ಒಂದೊಂದು ತಳಿ ದತ್ತು ಪಡೆದು, ಪೋಷಿಸುತಾ್ತ ಹೋದರೆ ಸಾವಿರಾರು ತಳಿಗಳು ರೈತರ ಹೊಲದಲ್ಲೇ ಸುರಕ್ಷಿತವಾಗಿರುತ್ತವಲ್ಲ?’ ಎಂದಿದ್ದರು. ತಾವು ಮಾಡುತ್ತಿರುವುದು ಅಂಥ ವಿನೂತನ ಪ್ರಯತ್ನವನ್ನೇ ಎಂದೂ ಹೇಳಿದ್ದರು. ಅದನ್ನು ನೋಡಲೆಂದು ಕರ್ನಾಟಕದ ರೈತರೊಂದಿಗೆ ರೋಹಿಬಂಕಾ ಗ್ರಾಮಕ್ಕೆ ಬಂದಿಳಿದಿದಾಗ ಕಂಡಿದ್ದು- ಸುತ್ತ ಕುರುಚಲು ಕಾಡು, ಬುಡಕಟ್ಟು ಹಳ್ಳಿಗಳು. ಉನ್ನತ ಪದವಿ ಪಡೆದ ಯುವತಿಯೊಬ್ಬಳು ಏಕಾಂಗಿಯಾಗಿ ಇಂಥ ಪ್ರದೇಶಕ್ಕೆ ಬಂದು, ಅವರೊಂದಿಗೇ ಇದ್ದು, ಪರಿವರ್ತನೆಯ ದಾರಿಯಲ್ಲಿ ಜನರನ್ನು ಕೊಂಡೊಯ್ಯುವುದು ಸುಲಭವೇನೂ ಅಲ್ಲವಲ್ಲ?ಇದು ಅಸಂಭವ...

ರಾಧಾಮೋಹನ್- ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿ. ಪರಿಸರ ಹಾಗೂ ಕೃಷಿಕರ ಬಗೆಗೆ ಅವರು ಮಾಡುತ್ತಿದ್ದ ಚಿಂತನೆ ಹಾಗೂ ಅನುಷ್ಠಾನದ ಪ್ರಯತ್ನಗಳು ಅವರ ಪುತ್ರಿ ಸಬರಮತಿ ಮೇಲೆ ಪ್ರಭಾವ ಬೀರಿದವು. ಆರ್ಥಿಕ ಶಾಸ್ತ್ರದಲ್ಲಿ ಪದವಿ, ನಂತರ ಗ್ರಾಮೀಣಾಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಬರಮತಿ ತಮ್ಮ ಮುಂದಿನ ಗುರಿಯನ್ನು ಅದಾಗಲೇ ನಿರ್ಧರಿಸಿದ್ದರು. ಕಾರ್ಮಿಕರ ಕುರಿತು ಅವರು ಪಿಎಚ್.ಡಿ ಮಾಡುವಾಗ ವ್ಯಾಪಕ ಅಧ್ಯಯನ ನಡೆಸುತ್ತಿದ್ದ ಸಂದರ್ಭದಲ್ಲಿ ಕೃಷಿ ಒಳನೋಟಗಳು ಅವರನ್ನು ಕಂಗೆಡಿಸಿದವು. ನಯಾಗಢ ಜಿಲ್ಲೆಯ ರೋಹಿಬಂಕಾ ಎಂಬ ಹಳ್ಳಿಯನ್ನು ಆಯ್ದುಕೊಂಡು, ತಂದೆಯ ನೆರವಿನೊಂದಿಗೆ ಕೃಷಿ ಹಾಗೂ ಪರಿಸರ ಸಂರಕ್ಷಣೆಗೆ ಹಲವು ಯೋಜನೆಗಳನ್ನು ಅನುಷ್ಠಾನ ಮಾಡಲು ಅಲ್ಲಿಗೆ ಬಂದಿಳಿದರು.ಅದು 1988ರ ಜನವರಿ ತಿಂಗಳ ಒಂದು ದಿನ. ಸುತ್ತಲಿನ ಹಳ್ಳಿಗಳಲ್ಲಿ ಕೆಲಸ ಮಾಡುತ್ತಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘಟನೆಗಳ ಸದಸ್ಯರನ್ನು ಒಗ್ಗೂಡಿಸಿ ರೋಹಿಬಂಕಾದಲ್ಲಿ ಸಭೆ ನಡೆಸಿದರು. ನಾಲ್ಕಡಿ ಎತ್ತರದ ಹುಲ್ಲು - ಗರಿಕೆ ಬಿಟ್ಟರೆ ಬೇರೇನೂ ಇಲ್ಲದ ನೆಲ ಅದು. ರಾಸಾಯನಿಕಗಳ ಅಬ್ಬರದಲ್ಲಿ ಕೃಷಿ ಆಗ ಕವಲು ದಿಕ್ಕಿನಲ್ಲಿ ಸಾಗುತ್ತಿತ್ತು. ರಾಸಾಯನಿಕ ಕೃಷಿಯ ಅಪಾಯಗಳೇನು? ಸುಸ್ಥಿರ- ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವುದು ಹೇಗೆ? ಇತ್ಯಾದಿ ಮಾಹಿತಿ ನೀಡಿದ ಸಬರಮತಿ, ರೋಹಿಬಂಕಾ ಗ್ರಾಮವನ್ನು ಜೀವ ವೈವಿಧ್ಯ ರಕ್ಷಣೆ ತಾಣವನ್ನಾಗಿ ಮಾಡುವ ಕನಸು ಮುಂದಿಟ್ಟರು. ಎಲ್ಲೆಡೆ ಸಿಗುವಂತೆ, ನಿರಾಶೆಯ ಪ್ರತಿಕ್ರಿಯೆಗಳೇ ಸಾಕಷ್ಟಿದ್ದವು. ಎಲ್ಲಕ್ಕೂ ಕೊನೆಯೆಂಬಂತೆ, ಅಲ್ಲಿದ್ದ ವೃದ್ಧನೊಬ್ಬ ನಿರಾಸಕ್ತಿಯಿಂದ ನುಡಿದ: ‘ಇಲ್ಲ... ಇದು ಅಸಂಭವ’.‘‘ಅಂದೇ ನಮ್ಮ ಸಂಸ್ಥೆಯ ಹೆಸರು ‘ಸಂಭವ’ ಎಂಬುದಾಗಿ ನಾಮಕರಣ ಮಾಡಿದೆವು. ಅಸಂಭವ ಎನ್ನುವುದನ್ನೇ ಸವಾಲಾಗಿ ತೆಗೆದುಕೊಂಡು, ಅದೇ ಮನೋಭಾವದ ರೈತರ ಜತೆ ಸೇರಿ ಕೆಲಸ ಆರಂಭಿಸಿದೆವು. ನೀವೀಗ ನೋಡುತ್ತಿರುವುದು ಎರಡು ದಶಕಗಳ ಸತತ ಪರಿಶ್ರಮದ ಫಲಿತಾಂಶ’’ ಎಂದು ಹೇಳಿದರು ಸಬರಮತಿ.1988ರ ಮಾರ್ಚ್ 8ರಂದು (ಮಹಿಳಾ ದಿನಾಚರಣೆಯಂದು) ‘ಸಂಭವ’ ನೋಂದಣಿಯಾಯಿತು.ಬೊಗಸೆ ತುಂಬ ಬೀಜ

ಅನುಪಯುಕ್ತ ಎಂದು ಪರಿಗಣಿಸುವ ಜಮೀನನ್ನು ಬೇರೆಯವರಿಗೆ ಅಲ್ಪ- ಅಥವಾ ದೀರ್ಘಾವಧಿ ಗುತ್ತಿಗೆ ಮೇಲೆ ಕೊಡಬಹುದಾದ ಅವಕಾಶ ಒರಿಸ್ಸಾದಲ್ಲಿದೆ. ಆ ಭೂಮಿಯಲ್ಲಿ ಏನಾದರೂ ಬೆಳೆದುಕೊಳ್ಳಬಹುದೇ ಹೊರತೂ ಒಡೆತನ ಸಾಧಿಸುವಂತಿಲ್ಲ. ಇದನ್ನೇ ಬಳಸಿಕೊಂಡು, 22 ಎಕರೆ ಜಮೀನು (ಪ್ರತಿ ಎಕರೆಗೆ ಐನೂರು ರೂಪಾಯಿ) ಪಡೆದ ‘ಸಂಭವ’ ಸಂಸ್ಥೆ, ಅಲ್ಲಿ ವಿವಿಧ ಸಸಿ ನಾಟಿ ಮಾಡಿತು. ಪಕ್ಕದಲ್ಲೇ ಒಂದೂವರೆ ಎಕರೆ ಗದ್ದೆ ಖರೀದಿಸಿ, ಸಾಂಪ್ರದಾಯಿಕ ಭತ್ತ ಸಂರಕ್ಷಣೆಗೆ ಮುಂದಾಯಿತು. ನಮಿತಾ ಎಂಬ ಕಾರ್ಯಕರ್ತೆ ಜತೆ ಹಳ್ಳಿ-ಹಳ್ಳಿಗಳಲ್ಲಿ ತಿರುಗಾಡಿದ ಸಬರಮತಿ, ಮನೆಗಳ ಅಟ್ಟಗಳಲ್ಲಿ ಅಡಗಿಸಿಟ್ಟಿದ್ದ ಬೊಗಸೆ ಬೀಜಗಳನ್ನು ತಂದು ಜತನದಿಂದ ಊರಿದರು. ‘ಸದ್ಯ ನಮ್ಮಲ್ಲಿ ನಾನ್ನೂರಕ್ಕೂ ಹೆಚ್ಚು ತಳಿಗಳಿವೆ; ನೀವು ಇನ್ನೊಂದಷ್ಟು ತಳಿ ಕೊಟ್ಟರೆ ಆ ಸಂಖ್ಯೆ ಇನ್ನಷ್ಟಾಗುತ್ತದೆ’ ಎಂದು ನಗುತ್ತಲೇ ಕೋರಿಕೆ ಇಟ್ಟರು ಸಬರಮತಿ.ಭತ್ತದ ಲೋಕ ಅರಳಿದ ಜಾಗ ಅಚ್ಚರಿ ಮೂಡಿಸಿತು. ಒಂದೊಂದು ತಳಿಗೂ ಒಂದೊಂದು ವಿಶೇಷ ಗುಣ. ಎತ್ತರ, ಗಿಡ್ಡ. ಹೆಚ್ಚು ತೆಂಡೆ, ಉದ್ದನೆಯ ಕಾಳು, ಸುವಾಸಿತ... ಒಣಗುತ್ತಿದ್ದ ಭತ್ತದ ಪೈರು ನೋಡಿದ ನಮ್ಮ ರೈತನೊಬ್ಬ ‘ಇದಕ್ಕ ಒಂದಷ್ಟು ಗಂಜಲ ಸ್ಪ್ರೇ ಮಾಡಿದ್ರ ಬೆಳೆ ಬೆಸ್ಟ್ ಬರ್ತದ’ ಎಂಬ ಸಲಹೆ ನೀಡಿದ. ‘ಇಲ್ಲ, ಇಲ್ಲ. ಈ ಭಾಗದಲ್ಲಿ ಕ್ಷಾರ ನೆಲದಲ್ಲಿ ಬೆಳೆಯುವ ನಾಲ್ಕು ತಳಿ ಹಾಕಿದ್ದೇವೆ. ಅದರಲ್ಲಿ ಯಾವುದು ಸದೃಢವಾಗಿ ಬೆಳೆಯುತ್ತದೆ ಎಂಬ ಪರೀಕ್ಷೆ ನಡೆದಿದೆ. ಇಂಥ ಸ್ವಭಾವದ ಮಣ್ಣಿಗೆ ಹೊಂದಿ ಬೆಳೆಯುವ ತಳಿ ಆಯ್ದು, ನಂತರ ಅದನ್ನು ರೈತರಿಗೆ ವಿತರಿಸುವ ಯೋಜನೆ ನಮ್ಮದು’ ಎಂದು- ಅಧ್ಯಯನದ ವಿವರ ನೀಡಿದರು ಸಬರಮತಿ.ಸಾಂಪ್ರದಾಯಿಕ ತಳಿಗಿಂತ ಹೈಬ್ರಿಡ್ ಅಧಿಕ ಇಳುವರಿ ಕೊಡುತ್ತದೆ ಎಂಬ ಆಧುನಿಕ ಕೃಷಿ ವಿಜ್ಞಾನದ ‘ಕಥೆ’ಯನ್ನು ಸಬರಮತಿ ಸಾರಾಸಗಟಾಗಿ ತಳ್ಳಿ ಹಾಕುತ್ತಾರೆ. ‘ನಮ್ಮಲ್ಲಿ ಇರುವ ತಳಿಯೊಂದು ಹೆಕ್ಟೇರ್‌ಗೆ 8 ಟನ್ ಇಳುವರಿ ಕೊಡುತ್ತದೆ; ಅದೂ ಹೆಚ್ಚಿನ ಒಳಸುರಿಯಿಲ್ಲದೇ. ಇನ್ನು ಕೆಲವು ತಳಿಗಳಿವೆ; ಜವಳು ನೆಲದಲ್ಲಿ ಬೆಳೆಯುವುದು, ಆಳನೀರಿನಲ್ಲಿ ಮುಳುಗಿದರೂ ಬದುಕಿ ಇಳುವರಿ ಕೊಡುವಂಥದು, ಉಪ್ಪುನೀರಿನ ಭತ್ತ... ಹೀಗೆ ಸಾವಿರಾರು ವರ್ಷಗಳಿಂದಲೂ ಆಯಾ ಪ್ರದೇಶಕ್ಕೆ ಹೊಂದಿಕೊಂಡು, ಕಡಿಮೆ ಖರ್ಚಿನಲ್ಲಿ ಸದೃಢವಾಗಿ ಬೆಳೆಯುವ ತಳಿ ಸಂರಕ್ಷಿಸದೇ ಹೆಚ್ಚು ರಾಸಾಯನಿಕ ಬಳಕೆಯಾಗುವ ಹೈಬ್ರಿಡ್ ತಳಿಗೇಕೆ ಮನ್ನಣೆ? ಕೋಟ್ಯಂತರ ರೂಪಾಯಿ ವೆಚ್ಚದ ಕುಲಾಂತರಿ ತಳಿಯತ್ತ ಯಾಕಷ್ಟು ಆದ್ಯತೆ?’ ಎಂದವರು ಪ್ರಶ್ನಿಸುತ್ತಾರೆ.ಕಾಡುವ ಕಾಡು

ಗುತ್ತಿಗೆ ಆಧಾರದ ಮೇಲೆ ಸರ್ಕಾರ ನೀಡಿದ ಹಾಗೂ ಸಂಸ್ಥೆಯ ವತಿಯಿಂದ ಖರೀದಿಸಿದ ಜಮೀನು ಸೇರಿದಂತೆ ಒಟ್ಟು 90 ಎಕರೆ ಪ್ರದೇಶ ಪರಿಸರಪೂರಕ ಚಟುವಟಿಕೆಗಳ ತಾಣ. ಒಂದೆಡೆ ಭತ್ತ ಸಂರಕ್ಷಣೆ, ಇನ್ನೊಂದೆಡೆ ಬಹುಮಹಡಿ ಕೃಷಿ ವಿಧಾನ, ಸಾಂಪ್ರದಾಯಿಕ ಕೃಷಿ ಪದ್ಧತಿ ಅಳವಡಿಕೆ. ಮತ್ತೊಂದೆಡೆ ಆಸಕ್ತರಿಗೆ ಮಾಹಿತಿ ನೀಡಲು ತರಬೇತಿ ಸಭಾಂಗಣ. ಮಳೆಗೆ ಮೇಲ್ಮಣ್ಣು ಸಂಪೂರ್ಣ ಕೊಚ್ಚಿ ಹೋಗಿ ಬರಡಾಗಿದ್ದ ಜಮೀನು ಈಗಂತೂ ದಟ್ಟ ಕಾಡು.ಹೀಗಾಗಿದ್ದು ಹೇಗೆ?

‘ಅರಣ್ಯ ಇಲಾಖೆ ಕೊಟ್ಟ ಸಸಿ ತಂದು ಹಚ್ಚಿದೆವು. ನಾಲ್ಕಾರು ಅಡಿ ಎತ್ತರಕ್ಕೆ ಬೆಳೆಯುತ್ತಿದ್ದ ಕುರುಚಲು ಹುಲ್ಲು ಕತ್ತರಿಸಿ ಅಲ್ಲೇ ಬಿಡುತ್ತಿದ್ದೆವು. ಮಳೆಗಾಲದಲ್ಲಿ ಅದು ಕಳೆತು ಗಿಡಗಳಿಗೆ ಗೊಬ್ಬರವಾಗುತ್ತಿತ್ತು. ಏಳೆಂಟು ವರ್ಷಗಳ ಬಳಿಕ ಅಪರಿಚಿತ ಗಿಡಗಳು ಬೆಳೆಯುತ್ತಿರುವುದು ಗಮನಕ್ಕೆ ಬಂತು. ವೃದ್ಧ ರೈತರನ್ನು ಕರೆಸಿ ಅವುಗಳ ಬಗ್ಗೆ ಕೇಳಿದಾಗ, ಅವು ನಾಲ್ಕಾರು ದಶಕಗಳ ಹಿಂದೆ ಬೆಳೆಯುತ್ತಿದ್ದ ಕರ್ಪೂರ, ರುದ್ರಾಕ್ಷಿ ಗಿಡ ಎಂಬ ಕುತೂಹಲದ ಮಾಹಿತಿ ಸಿಕ್ಕಿತು.ಹಾಗೆ ನೋಡಿದರೆ, ಅಪರೂಪದ ಗಿಡಗಳನ್ನು ನಾವು ಹಚ್ಚಿಯೇ ಇಲ್ಲ. ಪಕ್ಷಿಗಳಿಗೆ ಆಶ್ರಯ ಕೊಟ್ಟಿದ್ದಕ್ಕೆ ಅವು ಪ್ರತಿಯಾಗಿ ನಮಗೆ ಇಂಥ ಉಪಕಾರ ಮಾಡಿವೆ’.ಕಾಡು ರೂಪುಗೊಳ್ಳುತ್ತಲೇ ಮೊದಲು ಇಲ್ಲಿಗೆ ಬಂದಿದ್ದು ಜಿಂಕೆಗಳ ಹಿಂಡು. ಅವುಗಳಿಗೆ ಬೇಕಾದ ಮೇವು ಇಲ್ಲಿ ಧಾರಾಳ ಇತ್ತು. ಅವುಗಳ ಹಿಂದೆಯೇ ಹಣ್ಣು ತಿನ್ನಲು ಮಂಗಗಳ ದಾಳಿ! ಈಗಂತೂ ಕರಡಿ, ನರಿ, ತೋಳ ಬರುತ್ತಿವೆ. ‘ಇಲ್ಲಿ ನೋಡಿ... ಆನೆ ಲದ್ದಿ. ನಿನ್ನೆಯಷ್ಟೇ ಈ ಕಡೆ ಬಂದಿರಬಹುದೆಂದು ಕಾಣುತ್ತದೆ’ ಎಂದು ಸಬರಮತಿ ತೋರಿಸಿದಾಗ ಕೊಂಚ ಭಯವಾಯಿತು!ಹಣ್ಣು ಕೀಳಲು ಮೊದಲು ಎಲ್ಲ ಕಡೆ ಹೋಗುತ್ತಿದ್ದ ಕಾರ್ಮಿಕರಿಗೆ ಈಗ ಒಂದಷ್ಟು ನಿರ್ಬಂಧ. ಅರಣ್ಯದ ಒಂದು ಭಾಗವನ್ನು ಮೀಸಲಿಟ್ಟು, ಅಲ್ಲಿ ಯಾರೂ ಸುಳಿಯದ ಹಾಗೆ ನೋಡಿಕೊಳ್ಳಲಾಗುತ್ತಿದೆ. ಕಾಡುಪ್ರಾಣಿಗಳಿಗಷ್ಟೇ ಅದು ಮೀಸಲು. ಅಲ್ಲಿಂದ ಏನನ್ನೂ ತೆಗೆದುಕೊಳ್ಳುವ ಹಾಗಿಲ್ಲ. ಅಲ್ಲಿಂದಲೇ ಕೆಲವೊಮ್ಮೆ ಬೆಳೆಗಳತ್ತ ಧಾವಿಸುವ ನವಿಲು, ಮಂಗ, ಜಿಂಕೆಗಳು ಸಿಕ್ಕಿದ್ದನ್ನೆಲ್ಲ ತಿನ್ನುತ್ತವೆ; ಅದಕ್ಕಿಂತ ಹೆಚ್ಚು ಹಾಳು ಮಾಡುತ್ತವೆ! ಈ ಹಾವಳಿಗೆ ತಡೆ ಹೇಗೆ? ‘ಓಡಿಸುತ್ತೇವೆ ಅಷ್ಟೇ’– - ಚುಟುಕು ಪ್ರತಿಕ್ರಿಯೆ ಅವರದು.ಅಂದಹಾಗೆ, ಸರ್ಕಾರದ ಅನುದಾನಕ್ಕಾಗಿ ‘ಸಂಭವ’ ಎಂದೂ ಕೈಯೊಡ್ಡಿಲ್ಲ. ಸಂಘ-ಸಂಸ್ಥೆಗಳ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು, ಅಲ್ಲಿ ಪಡೆಯುವ ಹಣದಿಂದಲೇ ‘ಸಂಭವ’ ಕಾರ್ಯನಿರ್ವಹಿಸುತ್ತಿದೆ. ಅರಣ್ಯದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಹಣ್ಣುಗಳ ಮಾರಾಟದಿಂದ ಸಾಕಷ್ಟು ಆದಾಯ ಸಿಗುತ್ತಿದೆ. ಇಲ್ಲಿನ ಐವತ್ತಕ್ಕೂ ಹೆಚ್ಚು ತಳಿಗಳ ಮಾವಿನ ಹಣ್ಣಿಗೆ ಸಾಕಷ್ಟು ಬೇಡಿಕೆಯಿದೆ. ಕಡಿಮೆ ನೀರು- ಬಿತ್ತನೆ ಬೀಜ ಬಳಸಿ ಭತ್ತ ಬೆಳೆಯುವ ‘ಎಸ್‌ಆರ್‌ಐ’ (ಮಡಗಾಸ್ಕರ್) ವಿಧಾನದಲ್ಲಿ ‘ಸಂಭವ’ದ ಕಾರ್ಯಕರ್ತೆ ನಮಿತಾ ಪರಿಣಿತೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಿಗಳಿಗೆ ಸರಿಸಮನಾಗಿ ಪ್ರಬಂಧ ಮಂಡಿಸುವಷ್ಟರ ಮಟ್ಟಿಗೆ ಅವರು ಸಾಮರ್ಥ್ಯ ಪಡೆದಿದ್ದಾರೆ! ಅರಣ್ಯ ಪುನರುತ್ಥಾನ, ಸಾವಯವ ಕೃಷಿ, ಬಹುಬೆಳೆ ವಿಧಾನದ ತರಬೇತಿ ‘ಸಂಭವ’ದಲ್ಲಿ ಲಭ್ಯ. ಇಂಥ ಕಾರ್ಯಾಗಾರಗಳಿಗೆಂದು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧೆಡೆಗಳಿಂದ ಕೃಷಿ ಸಂಸ್ಥೆಗಳು ಇಲ್ಲಿಗೆ ಕೃಷಿಕರನ್ನು ಕಳಿಸಿ ತರಬೇತಿ ಕೊಡಿಸುತ್ತಿವೆ.ರೈತರು,- ಆದಿವಾಸಿಗಳ ಜತೆ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಬದುಕುತ್ತಿರುವ ಸಬರಮತಿ, ಈಗ ಅಲ್ಲಿನವರೇ ಆಗಿಬಿಟ್ಟಿದ್ದಾರೆ. ಅರಣ್ಯದ ಬಗ್ಗೆ ಮೂಡಿದ ಜಾಗೃತಿಯಿಂದ ಸುತ್ತಲಿನ ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶ ದಟ್ಟ ಅರಣ್ಯವಾಗಿದೆ. ಬೆಳೆ ವೈವಿಧ್ಯವನ್ನು ಮರೆತಿದ್ದ ರೈತರಿಗೆ ಈಗ ಊಟಕ್ಕೆ ಬೇಕಾದ್ದೆಲ್ಲ ಅವರ ತುಂಡು ಜಮೀನಿನಲ್ಲಿ ಬೆಳೆಯುತ್ತಿದೆ. ‘ಸಂಭವ’ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಈ ಅನುಭವಿ ರೈತರೇ!

ಜೀವ ವೈವಿಧ್ಯ, ಅರಣ್ಯ ರಕ್ಷಣೆ, ಸಾಂಪ್ರದಾಯಿಕ ಕೃಷಿಯನ್ನೇ ಸದಾ ಧ್ಯಾನಿಸುವ ಸಬರಮತಿ, ವೈಯಕ್ತಿಕ ಜೀವನಕ್ಕೆ ಮಹತ್ವವನ್ನು ಕೊಟ್ಟೇ ಇಲ್ಲ. ಅದರ ಬಗ್ಗೆ ಮಾತಾಡಲೂ ಬಯಸುವುದಿಲ್ಲ. ಇಲ್ಲಿರುವ ರೈತರೇ ತನ್ನ ಕುಟುಂಬದ ಸದಸ್ಯರು ಎನ್ನುತ್ತಾರೆ.ಕಳೆದ ವಾರವಷ್ಟೇ ಫೋನ್‌ನಲ್ಲಿ ಮಾತನಾಡಿದಾಗ– ನೈಸರ್ಗಿಕ ಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಕುರಿತು ಪಿಎಚ್‌.ಡಿ ಪದವಿ ಸ್ವೀಕರಿಸಲು ನೆದರ್‌ಲ್ಯಾಂಡಿನ ವ್ಯಾಗನಿಂಗ್ ಯೂನಿವರ್ಸಿಟಿಗೆ ತೆರಳುವ ಸಿದ್ಧತೆಯಲ್ಲಿ ಸಬರಮತಿ ಅವರಿದ್ದರು. ಅಂತರರಾಷ್ಟ್ರೀಯ ಖ್ಯಾತಿಯ ಆ ವಿಶ್ವವಿದ್ಯಾಲಯದಲ್ಲಿ ಗೌರವ ಡಾಕ್ಟರೇಟ್‌ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮುನ್ನ ಅವರ ಪೂರ್ವಾಪರವನ್ನು ಕೂಲಂಕಶ ಪರಿಶೀಲಿಸಲಾಗುತ್ತದೆ. ‘ಅಭಿನಂದನೆ...’ ಎಂದು ಇತ್ತಲಿಂದ ಹೇಳುತ್ತಿದ್ದಂತೆ, ಆ ಮಾತನ್ನು ಅಷ್ಟಕ್ಕೇ ಕತ್ತರಿಸಿ– ‘ಅಲ್ಲಿಂದ ವಾಪಸಾಗುವ ಹೊತ್ತಿಗೆ, ನೀವು ಕಳೆದ ವರ್ಷ ಕೊಟ್ಟಿದ್ದ ಭತ್ತದ ಹತ್ತಾರು ತಳಿಗಳು ತೆನೆ ಹೊತ್ತು ನಿಂತಿರುತ್ತವೆ. ನೋಡಲು ಎಷ್ಟು ಖುಷಿ ಅಲ್ಲವೇ!’ ಎಂದವರು ಉದ್ಗರಿಸಿದರು!ಎಲ್ಲವೂ ಸೇರಿಕೊಂಡು...

ಒಡಿಶಾದ ಬುಡಕಟ್ಟು ರೈತರ ಕೃಷಿ ವಿಧಾನವೆಂದರೆ, ಮನೆಗೆ ಬೇಕಾಗುವ ಎಲ್ಲ ಆಹಾರ ಧಾನ್ಯಗಳನ್ನೂ ಬೆಳೆದುಕೊಳ್ಳುವುದು. ಇದಕ್ಕಾಗಿ ಅವರು ರಾಗಿ, ಭತ್ತ, ಸಿರಿಧಾನ್ಯ, ತರಕಾರಿ, ಎಣ್ಣೆಕಾಳು, ಬೇಳೆಕಾಳು ಸೇರಿದಂತೆ ಸುಮಾರು 15 ಬಗೆಯ ಧಾನ್ಯಗಳ ಬೀಜಗಳನ್ನು ಬೆರೆಸಿ, ಬಿತ್ತುತ್ತಾರೆ. ತರಕಾರಿ ಒಂದು ತಿಂಗಳಿಗೆ ಕಟಾವಾದರೆ, ಮೂರನೇ ತಿಂಗಳಲ್ಲಿ ಎಣ್ಣೆಕಾಳು, ಭತ್ತ, ನಂತರ ರಾಗಿ, ತದನಂತರ ಬೇಳೆಕಾಳು... ಹೀಗೆ ಆರು ತಿಂಗಳವರೆಗೂ ಸತತ ಆ ಜಮೀನಿನಲ್ಲಿ ರಾಶಿ ನಡೆಯುತ್ತಲೇ ಇರುತ್ತದೆ. ಕಟಾವಿಗೆ ಬಂದ ಧಾನ್ಯದ ತೆನೆ ಮಾತ್ರ ಕತ್ತರಿಸಿ, ಉಳಿದ ತ್ಯಾಜ್ಯವನ್ನು ಅಲ್ಲಿಯೇ ಬಿಡುತ್ತಾರೆ. ಅದು ಮುಂದಿನ ಬೆಳೆಗೆ ಗೊಬ್ಬರವಾಗಿ ಮಾರ್ಪಾಡಾಗುತ್ತದೆ. ನೆಲದ ಫಲವತ್ತತೆಗೆ ಬೇರೇನೂ ಅಗತ್ಯವಿಲ್ಲ.ಏಕಬೆಳೆಯಿಂದಾಗಿ ಕ್ರಮೇಣ ತೆರೆಮರೆಗೆ ಸರಿದ ಕೃಷಿ ವಿಧಾನದತ್ತ ರೈತರನ್ನು ಮತ್ತೆ ಕರೆತಂದಿದ್ದು ‘ಸಂಭವ’. ರೈತರಿಗೆ ಬೇಕಾದ ಬಿತ್ತನೆ ಬೀಜ ಒದಗಿಸಿದ ಸಂಸ್ಥೆಯು, ರೈತರ ಜಮೀನಿನ ಒಂದು ಭಾಗದಲ್ಲಿ ಈ ಪದ್ಧತಿ ಅಳವಡಿಕೆಗೆ ಮನವೊಲಿಸಿತು. ಆರಂಭದಲ್ಲಿ ಒಲ್ಲದ ಮನಸ್ಸಿನಿಂದಲೇ ಈ ಬೇಸಾಯ ಶುರು ಮಾಡಿದ ರೈತರು, ಈಗ ಅದನ್ನು ಇಡೀ ಜಮೀನಿಗೆ ಅಳವಡಿಸಿಕೊಂಡಿದ್ದಾರೆ.‘ಸುಮಾರು ಇಪ್ಪತ್ತು ವರ್ಷದ ಹಿಂದೆ ನಮ್ಮ ತಂದೆ ಮಾಡುತ್ತಿದ್ದ ಈ ಕೃಷಿ ನೆನಪಿದೆ. ಎಷ್ಟೋ ದಿನಗಳ ಬಳಿಕ ಈಗ ಮತ್ತೆ ಶುರು ಮಾಡಿದ್ದೇನೆ. ಭತ್ತ ಬಿಟ್ಟರೆ ಬೇರೇನೂ ನಾವು ಬೆಳೆಯುತ್ತಿರಲಿಲ್ಲ. ಈಗ ಮನೆಗೆ ಬೇಕಾದ ಎಲ್ಲವೂ ನಮ್ಮ ನೆಲದಲ್ಲೇ ಸಿಗುತ್ತದೆ. ನನಗೇ ಅಚ್ಚರಿಯಾಗುತ್ತಿದೆ, ಇಷ್ಟು ದಿನ ಯಾಕೆ ಮರೆತಿದ್ದೆವೋ ಈ ಬೇಸಾಯವನ್ನು?!’ ಎಂದು ರೋಕಿಂಕ್ ಬರಾಮ್ ಹೆಸರಿನ ಕೃಷಿಕ ತಲೆ ತುರಿಸಿಕೊಂಡ. ‘ಸಂಭವ’ ಸಂಸ್ಥೆಯಲ್ಲಿ ಸಹ ಅದನ್ನೇ ಅಳವಡಿಸಿದ್ದಾರೆ. ಎರಡು ವರ್ಷಗಳ ಹಿಂದೆ ಇಲ್ಲಿ ಬರ ಬಿದ್ದಾಗಲೂ (ಇಲ್ಲಿನ ಮಳೆ ಪ್ರಮಾಣವೇ ವಾರ್ಷಿಕ 50 ಸೆಂ.ಮೀ) ಸಾಂಪ್ರದಾಯಿಕ ತಳಿ ಧಾನ್ಯಗಳ ಮಿಶ್ರಬೆಳೆ ವಿಧಾನ ಕೈಕೊಡಲಿಲ್ಲ.ಪಂಚಾಯತ್‌ನಲ್ಲಿ ಸಿಕ್ಕ ಸ್ಥಾನ

ನಯಾಗಢ ಸೇರಿದಂತೆ ಹಲವು ಜಿಲ್ಲೆಗಳ ಬುಡಕಟ್ಟು ಪ್ರದೇಶಗಳಲ್ಲಿ ಆಗಾಗ್ಗೆ ನಡೆಯುವ ಪಂಚಾಯತ್‌ಗಳಲ್ಲಿ ಪುರುಷರೇ ಅಧಿಪತ್ಯ. ಮಹಿಳೆಗೆ ಏನಾದರೂ ಅನ್ಯಾಯವಾದರೆ ಆಕೆ ಬಂದು ದೂರು ಕೊಡುವುದು ಕಡಿಮೆ. ದೂರು ಕೊಟ್ಟರೂ, ಆಕೆಯ ಪರ ನ್ಯಾಯ ಸಿಗುವುದು ಇನ್ನೂ ದೂರ. ಏಕೆಂದರೆ ಪಂಚಾಯತ್‌ಗಳಲ್ಲಿ ಕುಳಿತ ಐವರೂ ಪುರುಷರೇ!ಈಗ ಆ ಸಂಖ್ಯೆಯಲ್ಲಿ ಕನಿಷ್ಠ ಇಬ್ಬರಾದರೂ ಮಹಿಳೆಯರು ಇರುವಂತೆ ಮಾಡಿರುವುದು ‘ಸಂಭವ’ದ ಹೆಗ್ಗಳಿಕೆ. ‘ಇದು ಬುಡಕಟ್ಟು ವಾಸಿಗಳ ಆಂತರಿಕ ವಿಷಯ. ಅವರ ಮಧ್ಯೆ ಪ್ರವೇಶಿಸುವುದು ಸರಿಯೇ?’ ಎಂಬ ಪ್ರಶ್ನೆ ಸಬರಮತಿಗೆ ಕಾಡಿತ್ತು. ಆದರೆ ತಮ್ಮ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಮಹಿಳೆಯರು ಅಪರೂಪಕ್ಕೆ ದೂರು ಕೊಟ್ಟರೂ ನ್ಯಾಯ ಸಿಕ್ಕಿದ್ದು ಕಡಿಮೆ. ಖಂಡಿತವಾಗ್ಯೂ ನಾನು ಈ ಜಾತಿ ಪಂಚಾಯತ್ ವ್ಯವಸ್ಥೆ ಒಪ್ಪುವುದಿಲ್ಲ.ಆದರೆ ಅದು ಆ ಸಮುದಾಯದ ವಿಚಾರ. ಹಾಗೆಯೇ ಮಹಿಳೆಯರು ದೂರು ಕೊಟ್ಟರೆ ಅದಕ್ಕೆ ಸ್ಪಂದಿಸಲು ಪಂಚಾಯತ್‌ನಲ್ಲಿ ಮಹಿಳೆಯರೂ ಇರಬೇಕಲ್ಲವೇ? ಇದಕ್ಕಾಗಿ ನಡೆಸಿದ ಹೋರಾಟ ಕಡಿಮೆಯಲ್ಲ. ಕೊನೆಗೂ ನಾವು ಅದರಲ್ಲಿ ಸಫಲರಾಗಿದ್ದೇವೆ.ಪ್ರತಿ ಪಂಚಾಯತ್ ನಡೆಯುವಾಗಲೂ ಐವರು ತೀರ್ಪುಗಾರರ ಪೈಕಿ ಕನಿಷ್ಠ ಇಬ್ಬರು ಮಹಿಳೆಯರು ಇರುತ್ತಾರೆ. ನಯಾಗಢ ಜಿಲ್ಲೆಯ ಈ ಹೋರಾಟ ರಾಜ್ಯದ ಗಮನ ಸೆಳೆದಿದೆ. ಬೇರೆ ಕಡೆಯೂ ಇದು ನಿಧಾನವಾಗಿ ಜಾರಿಯಾಗುತ್ತದೆ ಎಂದು- ಸಬರಮತಿ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry