ಬಿಆರ್‌ಜಿಎಫ್ ಅನುದಾನದಡಿ ಶಿಕ್ಷಕರ ನೇಮಕ

ಶುಕ್ರವಾರ, ಜೂಲೈ 19, 2019
28 °C

ಬಿಆರ್‌ಜಿಎಫ್ ಅನುದಾನದಡಿ ಶಿಕ್ಷಕರ ನೇಮಕ

Published:
Updated:

ಯಾದಗಿರಿ: ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಪ್ರಮುಖವಾಗಿ ಕಾಡುತ್ತಿರುವ ಶಿಕ್ಷಕರ ಕೊರತೆಯನ್ನು ನೀಗಿಸಲು ಸ್ಥಳೀಯವಾಗಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಗುರುವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು, ಬಿಆರ್‌ಜಿಎಫ್ ಅನುದಾನದಲ್ಲಿ ಪ್ರಮುಖವಾಗಿ ಶಿಕ್ಷಕರ ನೇಮಕಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಗೌಡ ಮರಕಲ್, ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದೆ. ಹೀಗಾಗಿ ಜಿಲ್ಲೆಯ ಫಲಿತಾಂಶ ಕಡಿಮೆ ಆಗುತ್ತಿದೆ. ಇದಕ್ಕೆ ಪರಿಹಾರ ಕಂಡು ಹಿಡಿಯಲೇಬೇಕು. ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಹೇಳಿದರು.ಬಿಆರ್‌ಜಿಎಫ್ ಅನುದಾನದಡಿ ಅಗತ್ಯವಿರುವ ಶಿಕ್ಷಕರ ನೇಮಕ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಸಭೆ ಒಪ್ಪಿಗೆ ನೀಡಬೇಕು ಎಂದು ಪ್ರಭಾರ ಡಿಡಿಪಿಐ ಟಿ.ಜಿ. ಸಯೀದಾ ಮನವಿ ಮಾಡಿದರು.ಈ ಅನುದಾನದಲ್ಲಿ ಶಿಕ್ಷಕರ ನೇಮಕ ಮಾಡಿಕೊಂಡರೆ ಅವರಿಗೆ ಪ್ರತಿ ತಿಂಗಳು ರೂ.4,500 ವೇತನ ನೀಡಬೇಕಾಗುತ್ತದೆ. ಹೊರಸಂಪನ್ಮೂಲ ಸಂಸ್ಥೆಗಳಿಂದ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಈಗಾಗಲೇ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿನ ಶಿಕ್ಷಕರ ಸ್ಥಿತಿ ನೋಡುತ್ತಿದ್ದೇವೆ. ಹೊರಗುತ್ತಿಗೆ ಸಂಸ್ಥೆಗಳು ಸರಿಯಾಗಿ ವೇತನ ಪಾವತಿ ಮಾಡುವುದಿಲ್ಲ. ಈ ಶಿಕ್ಷಕರ ನೇಮಕಕ್ಕೆ ಆಯಾ ಶಾಲೆಗಳ ಎಸ್‌ಡಿಎಂಸಿ ಹಾಗೂ ಮುಖ್ಯಾಧ್ಯಾಪಕರಿಗೆ ಜವಾಬ್ದಾರಿ ನೀಡಿ ಎಂದು ಸಲಹೆ ಮಾಡಿದರು.ಈ ಹಂತದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಬಸವರಾಜಪ್ಪ, ಬೇರೆ ಯೋಜನೆಯಡಿ ಶಿಕ್ಷಕರ ನೇಮಕಕ್ಕೆ ಅವಕಾಶವಿದೆ. ಅಲ್ಲಿ ಕೇವಲ ನಿವೃತ್ತರನ್ನು ಮಾತ್ರ ನೇಮಕ ಮಾಡಿಕೊಳ್ಳಬಹುದಾಗಿದ್ದು, ಈ ಯೋಜನೆಯಡಿ ಎಷ್ಟು ಸಾಧ್ಯವೋ ಅಷ್ಟು ಶಿಕ್ಷಕರನ್ನು ಮೊದಲು ನೇಮಕ ಮಾಡಿಕೊಳ್ಳಿ. ಉಳಿದ ಶಿಕ್ಷಕರನ್ನು ಬಿಆರ್‌ಜಿಎಫ್ ಅನುದಾನದಡಿ ನೇಮಕ ಮಾಡಿಕೊಳ್ಳಬಹುದು ಎಂದರು.ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ಶಿಕ್ಷಕರ ನೇಮಕಾತಿ ಆಗಬೇಕು. ಇದರಿಂದ ಮಕ್ಕಳಿಗೆ ಸ್ವಲ್ಪ ಅನುಕೂಲ ಆಗಲಿದೆ. ಅಲ್ಲದೇ ನಿರಂತರ ಪಾಠ ಬೋಧನೆ, ನಿಯಮಿತ ವರ್ಗ ಪರೀಕ್ಷೆಯಂತಹ ಕ್ರಮಗಳನ್ನು ಅನುಸರಿಸುವ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಸಭೆ ಸಲಹೆ ಮಾಡಿದರು.ಚರ್ಚೆಗೆ ಆಹಾರವಾದ ಹುಚ್ಚು ನಾಯಿ ಕಡಿತ: ಹುಚ್ಚು ನಾಯಿ ಕಡಿತಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಔಷಧಿಯೇ ಸಿಗುತ್ತಿಲ್ಲ. ಯಾಕೆ ಹೀಗಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಸವರಾಜೇಶ್ವರಿ ತಂಗಡಗಿ ಪ್ರಶ್ನಿಸಿದರು.ಎಲ್ಲ ಪ್ರಾಥಮಿಕ ಕೇಂದ್ರಗಳಲ್ಲಿ ಈ ಔಷಧಿ ಇಡಲು ಸಾಧ್ಯವಾಗುತ್ತಿಲ್ಲ. ಒಂದು ಬಾಟಲ್‌ನಲ್ಲಿ ಐದು ಜನರಿಗೆ ನೀಡಬಹುದಾದ ಪ್ರಮಾಣದ ಔಷಧಿ ಇರುತ್ತದೆ. ಒಂದು ಬಾರಿ ಈ ಬಾಟಲಿಯ ಬಾಯಿ ಒಡೆದರೆ, ಔಷಧಿಯನ್ನು ಪೂರ್ಣ ಮುಗಿಸಲೇ ಬೇಕು. ಹಾಗಾಗಿ ನಾಯಿ ಕಡಿತದ ಒಂದು ಅಥವಾ ಎರಡು ರೋಗಿಗಳು ಬಂದರೆ, ಇನ್ನೂ ಮೂವರಿಗೆ ನೀಡಬಹುದಾದಷ್ಟು ಔಷಧಿ ವ್ಯರ್ಥವಾಗಿ ಹೋಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ ಹೇಳಿದರು.ಹಾಗಾದ್ರೆ ಐದು ಜನರ ಒಮ್ಮೆಲೇ ನಾಯಿ ಕಡಿಸಿಕೊಂಡು ಆಸ್ಪತ್ರೆಗೆ ಹೋಗಬೇಕು ಎಂದು ಸದಸ್ಯ ಶರಣೀಕ್‌ಕುಮಾರ ದೋಖಾ ಪ್ರಶ್ನಿಸುತ್ತಿದ್ದಂತೆಯೇ ಸಭೆ ನಗೆಗಡಲಲ್ಲಿ ತೇಲಿತು.ಹೆಚ್ಚಿನ ಪ್ರಮಾಣದ ಔಷಧಿಗಳು ಹಾಳಾಗಿ ಹೋಗುತ್ತಿವೆ. ಇದಕ್ಕಾಗಿ ಒಮ್ಮೆಲೆ ಔಷಧಿ ಸಂಗ್ರಹಣೆ ಮಾಡುವ ಬದಲು, ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಂತಿಷ್ಟು ಅನುದಾನ ನೀಡಿ. ಅಗತ್ಯ ಇದ್ದಾಗ ಈ ಅನುದಾನದಿಂದ ಔಷಧಿ ತರಿಸಿಕೊಳ್ಳಬಹುದು. ಇದರಿಂದ ಅನಗತ್ಯವಾಗಿ ಔಷಧಿ ಹಾಳಾಗುವುದು ತಪ್ಪಲಿದೆ ಎಂದು ಸದಸ್ಯ ಎಚ್.ಸಿ. ಪಾಟೀಲ ಸಲಹೆ ಮಾಡಿದರು.ಎಚ್‌ಐವಿ ರೋಗಿಗಳಿಗೆ ಆಪ್ತ ಸಮಾಲೋಚನೆ, ತಿಳಿವಳಿಕೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಐಸಿಟಿಸಿ ಕೇಂದ್ರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸದಸ್ಯ ಬಸವರಾಜ ಖಂಡ್ರೆ ಆಕ್ಷೇಪಿಸಿದರು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಡಾ. ಮುಕ್ಕಾ ಭರವಸೆ ನೀಡಿದರು.ಎಲ್ಲ ಅಂಗನವಾಡಿಗೆ ಕಂಪೌಂಡ್ ನಿರ್ಮಾಣ: ಉದ್ಯೋಗ ಖಾತರಿ ಯೋಜನೆಯಡಿ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಕಂಪೌಂಡ್ ನಿರ್ಮಾಣ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಎ. ಜಿಲಾನಿ ತಿಳಿಸಿದರು.ಈಗಾಗಲೇ ಹೈಕೋರ್ಟ್ ನ್ಯಾಯಮೂರ್ತಿಗಳ ವರದಿಯ ಆಧಾರದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕಂಪೌಂಡ್, ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಕಲ್ಪಿಸಬೇಕಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಆಯಾ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಕಂಪೌಂಡ್ ನಿರ್ಮಾಣ ಮಾಡುವುದನ್ನು ಕಡ್ಡಾಯ ಮಾಡಲಾಗುವುದು ಎಂದು ಹೇಳಿದರು.ಜಿಲ್ಲಾ ಕೇಂದ್ರದಲ್ಲಿ ರಕ್ತ ಭಂಡಾರ ಆರಂಭಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆಯೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ವಸತಿ ಶಾಲೆಗಳು, ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೋಲಾರ್ ವಾಟರ್ ಹೀಟರ್ ಹಾಗೂ ಸೊಳ್ಳೆಪರದೆ, ವಿದ್ಯುತ್ ಸಂಪರ್ಕ, ನೀರು ಕಲ್ಪಿಸಲು ಬಿಆರ್‌ಜಿಎಫ್‌ನಲ್ಲಿ ಅವಕಾಶ ಕಲ್ಪಿಸುವಂತೆ ಸದಸ್ಯ ದೇವರಾಜ ನಾಯಕ ಸಲಹೆ ಮಾಡಿದರು.ಜಿಲ್ಲಾ ಕೇಂದ್ರದಲ್ಲಿ ನೀರಿನ ಮಾದರಿ ತಪಾಸಣಾ ಕೇಂದ್ರವನ್ನು ಆರಂಭಿಸುವಂತೆ ನಗರಸಭೆ ಆಯುಕ್ತ ಮುನೀರ್ ಅಹ್ಮದ್ ಸಲಹೆ ಮಾಡಿದರು. ಈ ಕುರಿತು ವಿವರಣೆ ನೀಡಿದ ಪಂಚಾಯತ್ ರಾಜ್ ಎಂಜಿನಿಯರಿಂಗ್‌ನ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್ ಚೆನ್ನಬಸಪ್ಪ ಮೆಕಾಲೆ, ಈಗಾಗಲೇ ಕೇಂದ್ರಕ್ಕಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನಿಂದ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಆದಷ್ಟು ಶೀಘ್ರದಲ್ಲಿ ಯಂತ್ರೋಪಕರಣಗಳು ಬರಲಿವೆ ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಿ.ವಿ. ಭೋಸಲೆ, ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ವೇದಿಕೆಯಲ್ಲಿದ್ದರು. ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry