ಬುಧವಾರ, ಮೇ 25, 2022
29 °C

ಬಿಆರ್‌ಜಿಎಫ್ ಅನುದಾನ: ಪಂಚಾಯ್ತಿ ಸದಸ್ಯರ ಅಧ್ಯಯನ ಪ್ರವಾಸಕ್ಕೆ ರೂ 50 ಲಕ್ಷ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿಯಲ್ಲಿ (ಬಿಆರ್‌ಜಿಎಫ್) 2012-13ನೇ ಸಾಲಿಗೆ  ರೂ22.27 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಜಿಲ್ಲಾ ಯೋಜನಾ ಸಮಿತಿ ಶುಕ್ರವಾರ ಅನುಮೋದನೆ ನೀಡಿದೆ.

ನಗರದ ಜಿ.ಪಂ. ಸಭಾಂಗಣದಲ್ಲಿ ನಡೆದ ಜಿಲ್ಲಾ ಯೋಜನಾ ಸಮಿತಿಯ ಸಭೆಯಲ್ಲಿ ಪಂಚಾಯತ್‌ರಾಜ್ ಸಂಸ್ಥೆಗಳಿಗೆ ರೂ17.81 ಕೋಟಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ರೂ4.45 ಕೋಟಿ ಮೀಸಲಿಡಲು ಒಪ್ಪಿಗೆ ಸೂಚಿಸಲಾಯಿತು.ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯ್ತಿಗೆ ರೂ5.93 ಕೋಟಿ, ತಾಲ್ಲೂಕು ಪಂಚಾಯ್ತಿಗೆ ರೂ4.18 ಕೋಟಿ ಹಾಗೂ ಗ್ರಾಮ ಪಂಚಾಯ್ತಿಗಳಿಗೆ ರೂ7.70 ಕೋಟಿ ಮೀಸಲಿಡಲಾಗಿದೆ.ಈ ಯೋಜನೆಯಲ್ಲಿ ಕೆಎಎಸ್, ಐಎಎಸ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮತ್ತು ಜಿಲ್ಲೆಯ 106 ಸರ್ಕಾರಿ ಪ್ರೌಢಶಾಲೆಗಳಲ್ಲಿ  ಎಸ್ಸೆಸ್ಸೆಲ್ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ತರಗತಿಗಳನ್ನು ನಡೆಸಲಾಗುವುದು. ಪಿಯು ವಿದ್ಯಾರ್ಥಿಗಳಿಗೆ ಆಯ್ದ ವಿಷಯಗಳಲ್ಲಿ ಶಿಕ್ಷಣ ತರಬೇತಿಯನ್ನು ನೀಡಲಾಗುವುದು.

ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಹಿರಿಯ ಶ್ರೇಣಿಯ ಅಧಿಕಾರಿಗಳಿಗೆ ಅಧ್ಯಯನ ಪ್ರವಾಸಕ್ಕೆ ರೂ50 ಲಕ್ಷ ಮೀಸಲಿಡಲಾಗಿದೆ.ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳನ್ನು ತಡೆಯುವ ಸಲುವಾಗಿ ಮತ್ತು ಅದರ ಬಗ್ಗೆ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲು ರೂ10 ಲಕ್ಷ ಮೀಸಲಿಡಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ 10ನೇ ತರಗತಿಯನ್ನು ಓದುತ್ತಿರುವ ಮಕ್ಕಳಿಗೆ ಶಾಲಾ ಅಧ್ಯಯನ ಪ್ರವಾಸವನ್ನು ಈ ಯೋಜನೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ರೂ10 ಲಕ್ಷ ಮೀಸಲಿಡಲಾಗಿದೆ.ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಆಯ್ದ 10 ಗ್ರಾಮ ಪಂಚಾಯ್ತಿಗಳ ಒಂದು ಗ್ರಾಮದ ಮನೆಗಳಿಗೆ ನಲ್ಲಿ ನೀರಿಗೆ ಮೀಟರ್ ಅಳವಡಿಸಲಾಗುವುದು. ಇದಕ್ಕಾಗಿ ರೂ2 ಕೋಟಿ ಮೀಸಲಿಡಲಾಗಿದೆ. ಗ್ರಾಮಾಂತರ ಪ್ರದೇಶದ 11 ಸಮುದಾಯದ ಆರೋಗ್ಯ ಕೇಂದ್ರಗಳಲ್ಲಿ ಡೆಂಗೆ ಜ್ವರ ರಕ್ತ ಕಣಗಳ ಪರೀಕ್ಷಾ ಯಂತ್ರ ಖರೀದಿಸಲಾಗುವುದು. ಇದಕ್ಕಾಗಿ ರೂ44 ಲಕ್ಷವನ್ನು ಮೀಸಲಿಡಲಾಗಿದೆ.2011-12ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 185 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿತ್ತು. ಅದರ ಬಾಕಿ ಅನುದಾನ ಮತ್ತು ಅಂಗನವಾಡಿ ಕಟ್ಟಡಕ್ಕೆ ಆವರಣ ಹಾಗೂ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕಾಗಿ ರೂ5 ಕೋಟಿ ತೆಗೆದಿರಿಸಲಾಗಿದೆ. ಮೂಲ ಸೌಕರ್ಯಗಳಿಲ್ಲದ ಗ್ರಾಮಗಳಲ್ಲಿನ ಸಮುದಾಯ ಭವನ ನಿರ್ಮಾಣಕ್ಕೆ ರೂ2.92 ಕೋಟಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಕಾಲೊನಿಗಳಲ್ಲಿ ಸಮುದಾಯ ಭವನ ಮತ್ತು ಸಿ.ಸಿ.ರಸ್ತೆ ನಿರ್ಮಾಣಕ್ಕಾಗಿ ರೂ3.40 ಕೋಟಿ ಮತ್ತು ಗುಂಪು ನಿಧಿಗಾಗಿ ರೂ1.10 ಕೋಟಿ ಮೀಸಲಿರಿಸಲಾಗಿದೆ.ಶಾಸಕ ಗೂಳಿಹಟ್ಟಿ ಡಿ. ಶೇಖರ್, ಜಿ.ಪಂ. ಅಧ್ಯಕ್ಷ ರವಿಕುಮಾರ್, ಸಿಇಒ ಎನ್. ಜಯಕುಮಾರ್, ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್ ಹಾಜರಿದ್ದರು.

 

ಬಿಆರ್‌ಜಿಎಫ್‌ನಲ್ಲಿ ಅಕ್ರಮ: ಗೂಳಿಹಟ್ಟಿ

ಚಿತ್ರದುರ್ಗ: `ಬಿಆರ್‌ಜಿಎಫ್ ಅಂದರೆ ಎನ್‌ಜಿಓಗಳಿಗೆ ದುಡ್ಡು ಹೊಡೆಯಲು ಅವಕಾಶ ಕೊಟ್ಟಂತಾಗಿದೆ~ ಎಂದು ಶಾಸಕ ಗೂಳಿಹಟ್ಟಿ ಡಿ. ಶೇಖರ್ ದೂರಿದರು.ಶುಕ್ರವಾರ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬಿಆರ್‌ಜಿಎಫ್ ಅನುದಾನದಲ್ಲಿ ಸ್ವಯಂ ಸೇವಾ ಸಂಸ್ಥೆಗಳಿಗೆ ಕೇವಲ ಹಣ ಮಾಡುತ್ತಿವೆ. ಆದರೆ, ಯಾವುದೇ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲ. ಜಯರಾಂ ಅವರ ಸಿಇಒ ಆಗಿ ಬಂದ ನಂತರ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಅವರು ಬರುವ ಮುನ್ನ ಹಿಂದಿನ ವರ್ಷಗಳಲ್ಲಿ ಸಿಕ್ಕಾಪಟ್ಟೆ ದುಡ್ಡು ಹೊಡೆದಿದ್ದಾರೆ. ಅವ್ಯವಹಾರಗಳು ನಡೆದಿವೆ. ಜಯರಾಂ ಅವರು ಬಂದ ಮೇಲೆ ಅಕ್ರಮಗಳನ್ನು ನಿಯಂತ್ರಿಸಿದ್ದಾರೆ ಎಂದು ನುಡಿದರು.ಜಿ.ಪಂ. ಸದಸ್ಯ ಲಕ್ಷ್ಮಣ್ ಮಾತನಾಡಿ, ಶಿಕ್ಷಕರ ವರ್ಗಾವಣೆಗೆ ಕೌನ್ಸೆಲಿಂಗ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ನಿಯಮಾವಳಿಗಳನ್ನು ರೂಪಿಸಲಾಗಿದೆ. ಆದರೆ, ಅಮಾನತುಗೊಂಡ ಶಿಕ್ಷಕರ ವರ್ಗಾವಣೆ ಸುಲಭವಾಗಿದೆ. ಅಮಾನತು ರದ್ದಾದ ನಂತರ ಪ್ರಭಾವ ಬೀರಿ ತಮಗೆ ಬೇಕಾದ ಸ್ಥಳಗಳನ್ನು ಪಡೆದುಕೊಳ್ಳುತ್ತಾರೆ. ಆದ್ದರಿಂದ, ಅಮಾನತುಗೊಂಡ ಸಮಯದಲ್ಲಿ ಇದ್ದ ಸ್ಥಳದಲ್ಲೇ ಅಂತಹ ಶಿಕ್ಷಕರನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.ಮತ್ತೋಡು ಹೋಬಳಿಯಲ್ಲಿ 85 ಜನರು ಜ್ವರದಿಂದ ಬಳಲುತ್ತಿದ್ದಾರೆ. ಜತೆಗೆ ಒಬ್ಬರಿಗೆ ಇಲಿ ಜ್ವರ ಬಂದಿದ್ದು, ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಇಲಾಖೆ ಡೆಂಗೆಯಂತಹ ಕಾಯಿಲೆಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಅಧ್ಯಕ್ಷ ರವಿಕುಮಾರ್ ಮಾತನಾಡಿ, ಹಿಂದಿನ ಬಾರಿ ಬಿಆರ್‌ಜಿಎಫ್ ಅಡಿಯಲ್ಲಿ ಕೆಎಎಸ್ ತರಬೇತಿ ಪಡೆದ 180 ಜನರಲ್ಲಿ 25 ಮಂದಿ ಉತ್ತೀರ್ಣ ಆಗಿದ್ದಾರೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.