ಬಿಇಎಂಎಲ್‌ನಲ್ಲಿ ರಕ್ಷಣಾ ಸಚಿವ ಆಂಟನಿ: ಏರೋಸ್ಪೇಸ್ ಉತ್ಪಾದನಾ ವಿಭಾಗ ಆರಂಭ

7

ಬಿಇಎಂಎಲ್‌ನಲ್ಲಿ ರಕ್ಷಣಾ ಸಚಿವ ಆಂಟನಿ: ಏರೋಸ್ಪೇಸ್ ಉತ್ಪಾದನಾ ವಿಭಾಗ ಆರಂಭ

Published:
Updated:
ಬಿಇಎಂಎಲ್‌ನಲ್ಲಿ ರಕ್ಷಣಾ ಸಚಿವ ಆಂಟನಿ: ಏರೋಸ್ಪೇಸ್ ಉತ್ಪಾದನಾ ವಿಭಾಗ ಆರಂಭ

ಮೈಸೂರು: ‘ನಗರದ ಹೊರ ವಲಯದಲ್ಲಿರುವ ಭಾರತ್ ಅರ್ಥ್ ಮೂವರ್ ಲಿಮಿಟೆಡ್ (ಬಿಇಎಂಎಲ್) ಸಂಕೀರ್ಣದಲ್ಲಿ ಸೋಮವಾರ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ‘ಏರೋಸ್ಪೇಸ್ ಉತ್ಪಾದನಾ ವಿಭಾಗ’ದ ಉದ್ಘಾಟನೆ ಮತ್ತು ‘ರಚನಾ ವಿಭಾಗ’ದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.ಈಗ ಉದ್ಘಾಟನೆಗೊಂಡ ಏರೋಸ್ಪೇಸ್ ಉತ್ಪಾದನಾ ವಿಭಾಗದಲ್ಲಿ ಏರೋಕ್ರಾಪ್ಟ್ ಟೊಯಿಂಗ್ ಟ್ರ್ಯಾಕ್ಟರ್, ಹೆಲಿಕಾಪ್ಟರ್‌ಗಳ ಗೇರ್‌ಗಳು, ಗೇರ್ ಬಾಕ್ಸ್‌ಗಳು, ಏರೋ ಎಂಜಿನ್‌ಗಳು, ಸಣ್ಣ ಮತ್ತು ಬೃಹತ್ ರಚನೆಗಳು ಹಾಗೂ ಏರೋಸ್ಪೇಸ್‌ನ ಇನ್ನಿತರೆ ವಸ್ತುಗಳು ಸಿದ್ಧಗೊಳಲಿವೆ.ನಂತರ ಸಚಿವ ಎ.ಕೆ.ಆಂಟನಿ ಅವರು ಬಿಇಎಂಎಲ್‌ನ ವಿವಿಧ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿ ಅಲ್ಲಿಯ ಕಾರ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಬಿಇಎಂಎಲ್ ಹೊಸದಾಗಿ ಉತ್ಪಾದಿಸಿರುವ ಡಂಪರ್‌ಗಳು, ಬುಲ್ಡೋಜರ್‌ಗಳು, ಎಕ್ಸವೇಟರ್‌ಗಳು, ಲೋಡರ್‌ಗಳು, ವಾಟರ್ ಸ್ಪಿಂಕ್ಲರ್‌ಗಳ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ ರೋಮಾಂಚನಗೊಂಡರು.

70 ಸಾವಿರ ಲೀಟರ್ ನೀರು ಸಾಮರ್ಥ್ಯದ ವಾಟರ್ ಸ್ಪಿಂಕ್ಲರ್, 100 ಟನ್‌ಗಳಷ್ಟು ವಸ್ತುವನ್ನು ಸಾಗಿಸುವ ಡಂಪರ್‌ಗಳು ಪ್ರಾತ್ಯಕ್ಷಿಕೆಯಲ್ಲಿದ್ದ ಗಮನ ಸೆಳೆದವು. ಇವು ಏಷಿಯಾ ಖಂಡದಲ್ಲಿಯೇ ದೊಡ್ಡವು.ಶ್ರೇಷ್ಠತೆ ಸಾಧಿಸಿ:‘ಇದು ಸ್ಪರ್ಧಾತ್ಮಕ ಯುಗವಾಗಿದೆ. ಎಲ್ಲ ಕ್ಷೇತ್ರದಲ್ಲಿಯೂ ಪೈಪೋಟಿ ಇದೆ. ಆದ್ದರಿಂದ ಬಿಇಎಂಎಲ್ ತನ್ನ ಅಧಿಕಾರಿಗಳು, ತಂತ್ರಜ್ಞರು ಮತ್ತು ಕಾರ್ಮಿಕರು ಅಗತ್ಯವಾದ ತರಬೇತಿಯನ್ನು ದೇಶದ ಒಳಗೆ ಇಲ್ಲವೆ ಹೊರಗೆ ಪಡೆಯಬೇಕು. ಅಲ್ಲಿನ ಆಧುನಿಕ ತಂತ್ರಜ್ಞಾನವನ್ನು ನಮ್ಮಲ್ಲಿ ಅಳವಡಿಸಿಕೊಂಡು ಅತ್ಯುತ್ಕೃಷ್ಟವಾದ ವಸ್ತುಗಳನ್ನು ಉತ್ಪಾದಿಸಬೇಕು. ಆ ಮೂಲಕ ಇಡೀ ಜಗತ್ತು ನಮ್ಮತ್ತ ತಿರುಗಿ ನೋಡುವಂತೆ ಮಾಡಬೇಕು’ ಎಂದು ಅವರು ಕರೆ ನೀಡಿದರು.‘ಬಿಇಎಂಎಲ್‌ನ ಕಾರ್ಯಕ್ಷಮತೆ ಮತ್ತು ಬದ್ಧತೆ ಬಗ್ಗೆ ರಕ್ಷಣಾ ಇಲಾಖೆಗೆ ಉತ್ತಮ ಭಾವನೆ ಇದೆ. ಅಧಿಕಾರಿಗಳು, ತಂತ್ರಜ್ಞರು, ಕಾರ್ಮಿಕರು ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ತೃಪ್ತಿ ತಂದಿದೆ. ಜೊತೆಗೆ ಬಿಇಎಂಎಲ್ ಹೊಸತನ್ನು ದೇಶಕ್ಕೆ ಕೊಡಬೇಕು’ ಎಂದು ಹೇಳಿದರು.‘ಬಿಇಎಂಎಲ್ ನಮ್ಮ ಹೃದಯದಲ್ಲಿ ಇರುತ್ತದೆ. ನಿಮ್ಮ ಕಾರ್ಯ ದಕ್ಷತೆಯಿಂದ ಹೆಚ್ಚು ಉತ್ಪಾದನೆ ಮಾಡಿದರೆ ಹೆಚ್ಚೆಚ್ಚು ಲಾಭವೂ ಸಿಗುತ್ತದೆ. ಆದ್ದರಿಂದ ಬಿಇಎಂಎಲ್‌ನಲ್ಲಿರುವ ಎಲ್ಲರೂ ಆರೋಗ್ಯಕರ ಪೈಪೋಟಿ, ಉತ್ತಮ ಬಾಂಧವ್ಯವನ್ನು ಹೊಂದುವ ಮುಖಾಂತರ ಒಳ್ಳೆಯ ಕೆಲಸ ಮಾಡಿ’ ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry