ಬಿಇಓ ಕಾರ್ಯಾಚರಣೆ: ಅನಧಿಕೃತ ಶಾಲೆ ಬಂದ್

ಬುಧವಾರ, ಜೂಲೈ 24, 2019
28 °C

ಬಿಇಓ ಕಾರ್ಯಾಚರಣೆ: ಅನಧಿಕೃತ ಶಾಲೆ ಬಂದ್

Published:
Updated:

ಶ್ರೀರಂಗಪಟ್ಟಣ: ತಾಲ್ಲೂಕಿನ ವಿವಿಧೆಡೆ ಖಾಸಗಿ ಶಾಲೆಗಳಿಗೆ ಶನಿವಾರ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಗದೀಶ್ ನೇತೃತ್ವದ ಅಧಿಕಾರಿಗಳ ತಂಡ ತಾಲ್ಲೂಕಿನ ಗಣಂಗೂರಿನಲ್ಲಿ ಅನಧಿಕೃತವಾಗಿ ತೆರೆಯಲಾಗಿದ್ದ ಶಾಲೆಯೊಂದನ್ನು ಬಂದ್ ಮಾಡಿಸಿತು.ಬೆಳಿಗ್ಗೆ 11ಕ್ಕೆ ದಿಢೀರ್ ಕಾರ್ಯಾಚರಣೆ ನಡೆಸಿದರು. ಗಣಂಗೂರು ಗ್ರಾಮದಲ್ಲಿ ಆರಂಭಿಸಿದ್ದ `ಕ್ರಿಸ್ತಲ್ ಇಂಗ್ಲಿಷ್ ಸ್ಕೂಲ್~ ಹೆಸರಿನ ಶಾಲೆ ಇಲಾಖೆಯಿಂದ ಅನುಮತಿ ಪಡೆಯದೇ ಇರುವುದು ಬೆಳಕಿಗೆ ಬಂತು. ಸಂಸ್ಥೆಯ ಕಾರ್ಯದರ್ಶಿ ಎಂದು ಹೇಳಿಕೊಂಡ ಜಯಣ್ಣ ಅವರಿಂದ ಅಧಿಕಾರಿಗಳು ದಾಖಲೆ ಕೇಳಿದರು. ಆದರೆ ಅವರು ಶಾಲೆ ನಡೆಸಲು ಅನುಮತಿ ಪಡೆದಿರುವ ಬಗ್ಗೆ ದಾಖಲೆ ಒದಗಿಸಲು ವಿಫಲರಾದರು.ಇದರಿಂದ ಅಸಮಾಧಾನಗೊಂಡ ಬಿಇಓ ಜಗದೀಶ್ ಇಲಾಖೆಯ ಅನುಮತಿ ಇಲ್ಲದೆ ಶಾಲೆ ತೆರೆದಿರುವುದು ಕಾನೂನಿಗೆ ವಿರುದ್ಧವಾದುದು. ಇಂದಿನಿಂದಲೇ ಶಾಲೆಯನ್ನು ಬಂದ್ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು. ಅಲ್ಲದೆ, ಮನೆಯೊಂದನ್ನು ಬಾಡಿಗೆ ಪಡೆದು ತೂಗು ಹಾಕಿದ್ದ `ಕ್ರಿಸ್ತಲ್ ಇಂಗ್ಲಿಷ್ ಸ್ಕೂಲ್~ ಹೆಸರಿನ ಫಲಕವನ್ನು ತೆಗೆಸಿದರು.

 

ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಎಸ್‌ಬಿ ವಿದ್ಯಾಸಂಸ್ಥೆ ಇದ್ದು, ಅದರ ಅಂಗ ಸಂಸ್ಥೆಯನ್ನು ಇಲ್ಲಿ ಆರಂಭಿಸಿದ್ದೇವೆ ಎಂದು ಜಯಣ್ಣ ಸಮಜಾಯಿಷಿ ನೀಡಲು ಯತ್ನಿಸಿದರು. ಇದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು ಮೊದಲು ಅನುಮತಿ ಪತ್ರ ಮತ್ತಿತರ ದಾಖಲೆ ಒದಗಿಸಿ, ನಂತರ ಮಾತನಾಡಿ. ಶಾಲೆ ನಡೆಸಿದರೆ ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.ವಾಹನ ಪರಿಶೀಲನೆ: ನಿಗದಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಹೋಗುತ್ತಿದ್ದ ಪಟ್ಟಣದ ಸರ್.ಎಂ.ವಿಶ್ವೇಶ್ವಯ್ಯ ಹೈಯರ್ ಪ್ರೈಮರಿ ಶಾಲೆಯ ವಾಹನವನ್ನು ಕೆ.ಶೆಟ್ಟಹಳ್ಳಿ ಬಳಿ ತಡೆದು ಪರಿಶೀಲಿಸಿದರು.30 ಮಕ್ಕಳನ್ನು ಕೂರಿಸುವ ವಾಹನದಲ್ಲಿ 40ಕ್ಕೂ ಹೆಚ್ಚು ಮಕ್ಕಳನ್ನು ತುಂಬಿದ್ದು ಬೆಳಕಿಗೆ ಬಂತು. ವಾಹನದ ಹೊರ ಭಾಗದಲ್ಲಿ ಶಾಲೆಯ ದೂರವಾಣಿ ಸಂಖ್ಯೆ ನಮೂದಿಸದ ಕಾರಣಕ್ಕೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು.ಕಿರಂಗೂರು ಬಳಿ ನಡೆಯುತ್ತಿರುವ ಕಾರಂಜಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳನ್ನು ಪ್ಯಾಸೆಂಜರ್ ಟೆಂಪೊ ಒಂದರಲ್ಲಿ ಸಾಗಿಸುತ್ತಿದ್ದ ಅಂಶ ಕೂಡ ಬೆಳಕಿಗೆ ಬಂತು. ವಾಹನವನ್ನು ತಡೆದು ಚಾಲಕನನ್ನು ಪ್ರಶ್ನಿಸಿದರು. ಕಾರಂಜಿ ಶಾಲೆ 2011-12ನೇ ಸಾಲಿಗೆ ಪರವಾನಗಿ ಕೂಡ ನವೀಕರಿಸಿಕೊಂಡಿಲ್ಲ. ಶಾಲೆಯ ಮುಖ್ಯಸ್ಥರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ವೀರೇಶ್ ಲಿಂಬಿಕಾಯಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry