ಶುಕ್ರವಾರ, ಮೇ 14, 2021
30 °C

ಬಿ.ಇಡಿ ಕಡ್ಡಾಯ : ಸಮರ್ಪಕ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿರೀಕ್ಷಿಸಿದಂತೆಯೇ ಶಿಕ್ಷಣ ಇಲಾಖೆ ರಾಜ್ಯದ  ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಸ್ನಾತಕೋತ್ತರ ಪದವಿಯೊಂದಿಗೆ ಬಿ.ಇಡಿ ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸಲಾಗಿದೆ. ಇವೆರಡೂ ಪದವಿಯನ್ನು ಮುಗಿಸಿ ಉದ್ಯೋಗಕ್ಕಾಗಿ ಕಾದು ಕುಳಿತಿದ್ದವರಿಗೆ ಇದೊಂದು ಸಂತಸದ ಸುದ್ದಿ. 2008ರಲ್ಲಿ ಪಿ.ಯು ಉಪನ್ಯಾಸಕರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸುವಾಗಲೇ ಬಿ.ಇಡಿ ಕಡ್ಡಾಯ ಮಾಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿತ್ತಾದರೂ, ಅರೆಕಾಲಿಕ ಉಪನ್ಯಾಸಕರು, ಪದವೀಧರ ಕ್ಷೇತ್ರಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಸ್ನಾತಕೋತ್ತರ ಪದವೀಧರರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ತನ್ನ ನಿರ್ಧಾರವನ್ನು ಸಡಿಲಗೊಳಿಸಿ, ನೇಮಕಾತಿ ಹೊಂದಿದ ಎರಡು ವರ್ಷಗಳೊಳಗೆ ಬಿ.ಇಡಿ ಪದವಿಯನ್ನು ಪೂರ್ಣಗೊಳಿಸಿಕೊಳ್ಳಬೇಕೆಂಬುದಾಗಿ ಷರತ್ತು ವಿದಿಸಿತ್ತು.

ಈ ಬಾರಿಯೂ ನೇಮಕಾತಿ ಪ್ರಕ್ರಿಯೆ ಆರಂಭವಾಗುವ ಮೊದಲೇ ಚುನಾಯಿತ ಪ್ರತಿನಿಧಿಗಳಿಂದ ಹಾಗೂ ಸ್ನಾತಕೋತ್ತರ ಪದವೀಧರರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.  `ಪಿ.ಯು ಉಪನ್ಯಾಸಕರ ನೇಮಕಾತಿಗೆ ಬಿ.ಇಡಿ ಕಡ್ಡಾಯ ಮಾಡಿರುವುದು ಅವೈಜ್ಞಾನಿಕ ಕ್ರಮ~ ಎಂಬುದಾಗಿ ಹಿರಿಯ ರಾಜಕಾರಣಿಯೊಬ್ಬರು ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ.

 

ಪ್ರತಿ ವರ್ಷ ಪಿ.ಯು ಕಾಲೇಜುಗಳ ಫಲಿತಾಂಶ ಕುಸಿಯತೊಡಗುತ್ತಿದ್ದು ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ 40 ಕಾಲೇಜುಗಳಲ್ಲಿನ ಫಲಿತಾಂಶ ಶೂನ್ಯ.

 

ಪರೀಕ್ಷೆಗೆ ಹಾಜರಾಗಿದ್ದ 6,27,238 ವಿದ್ಯಾರ್ಥಿಗಳಲ್ಲಿ  ಶೇ 48.98 ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಈ ಫಲಿತಾಂಶ ಶಿಕ್ಷಣ ಕ್ಷೇತ್ರದ ಸುಧಾರಣೆಯ ಅಗತ್ಯವನ್ನು ಒತ್ತಿ ಹೇಳುತ್ತಿದೆ.ಬಹಳಷ್ಟು ಸಂಶೋಧನೆಗಳು, ಕಾರ್ಯಾಗಾರಗಳು ನಡೆದು  ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿಯಾದ ಬೋಧನಾ ವಿಧಾನಗಳು ಪರಿಚಯಿಸಲ್ಪಟ್ಟಿದ್ದರೂ, ಕಾಲೇಜು ಹಂತದಲ್ಲಿ ಇಂದಿಗೂ ಉಪಧ್ಯಾಯ ಕೇಂದ್ರಿತವಾದ `ಉಪನ್ಯಾಸ ಬೋಧನಾ~ ವಿಧಾನವೇ ಬಹುತೇಕವಾಗಿ ಚಾಲ್ತಿಯಲ್ಲಿದೆ.ಈ ಬಗೆಯ ಬೋಧನಾ ವಿಧಾನದಿಂದ ವಿದ್ಯಾರ್ಥಿಯ ಬೌದ್ಧಿಕ ಸಾಮರ್ಥ್ಯ ಹಾಗೂ ಸಂವಹನ ಕೌಶಲಗಳು ಬೆಳವಣಿಗೆಯಾಗಲು ಸಾಧ್ಯವಿಲ್ಲ.

 

ರಾಷ್ಟ್ರಕವಿ ಕುವೆಂಪು ಅವರು ಹೇಳುವಂತೆ  `ವಿದ್ಯಾರ್ಥಿಗಳು ಬತ್ತ ತುಂಬುವ ಚೀಲಗಳಂತಿರದೆ, ಬತ್ತವನ್ನೆ ಬೆಳೆಯುವ ಗದ್ದೆಗಳಾಗಬೇಕು~ ಎಂಬ ಆದರ್ಶ ಚಿಂತನೆಗೆ ಉಪನ್ಯಾಸ ಬೋಧನಾ ವಿಧಾನ ವ್ಯತಿರಿಕ್ತವಾಗಿದೆ.   ಬಿ.ಇಡಿ ಏಕೆ ಬೇಕು: ಬಿ.ಇಡಿ ಪದವಿ ವ್ಯಾಸಂಗ ಅತಿ ಕಡಿಮೆ ಅವಧಿಯದಾಗಿದ್ದರೂ (ಹತ್ತು ತಿಂಗಳು), ಅಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಬಹುಮುಖ ತರಬೇತಿ ನೀಡಿರುತ್ತಾರೆ.

ಬಿ.ಇಡಿ ಪದವೀಧರರು ತಮ್ಮ ವ್ಯಾಸಂಗದ ಅವಧಿಯಲ್ಲಿ ಶೈಕ್ಷಣಿಕ ಮನೋವಿಜ್ಞಾನವನ್ನು ಅಭ್ಯಸಿಸಿರುವುದರಿಂದ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಗುರುತಿಸಿ, ಅವರ ಬುದ್ಧಿಶಕ್ತಿಗನುಗುಣವಾಗಿ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಗುತ್ತದೆ.ಚರ್ಚಾ ಪದ್ಧತಿ, ಸಂವಹನ ಪದ್ಧತಿ, ಪ್ರಾಯೋಗಿಕ ಪದ್ಧತಿ, ಪ್ರಾತ್ಯಕ್ಷಿಕೆ ಪದ್ಧತಿ, ಅನುಗಮನ ಹಾಗೂ ನಿಗಮನ ಪದ್ಧತಿ ಎಂಬ ವಿವಿಧ ಬಗೆಯ ಬೋಧನಾ ವಿಧಾನಗಳ ಪರಿಚಯವಿರುವುದರಿಂದ `ಶಿಕ್ಷಕ ಕೇಂದ್ರಿತ ಬೋಧನಾ ವಿಧಾನ~ಕ್ಕೆ ತೆರೆ ಎಳೆಯಬಹುದು.ಮೂರು ತಿಂಗಳುಗಳ ಬೋಧನಾ ಅಭ್ಯಾಸ (ಟೀಚಿಂಗ್ ಪ್ರಾಕ್ಟೀಸ್), ಪಾಠ ಯೋಜನೆ (ಲೆಸನ್‌ಪ್ಲ್ಯಾನ್), ಪ್ರಾತ್ಯಕ್ಷಿಕೆಗಳ ಸಿದ್ಧಪಡಿಸುವಿಕೆಯ ಕೌಶಲದಿಂದಾಗಿ ಬಿ.ಇಡಿ ಪದವೀಧರರು ನುರಿತ ಅನುಭವ ಪಡೆದಿರುತ್ತಾರೆ.ಅಧ್ಯಾಪಕನಿಗೆ ಬೇಕಾದ ಆಡಳಿತಾತ್ಮಕ ವಿಷಯಗಳ ಅರಿವು, ತಾನು ನಿರ್ವಹಿಸಬೇಕಾದ ಕಾರ್ಯಗಳು, ಸಹೋದ್ಯೋಗಿಗಳೊಂದಿಗಿನ ಹೊಂದಾಣಿಕೆ, ಶಿಕ್ಷಣ ಸಂಸ್ಥೆಯ ಮುಖ್ಯಾಧಿಕಾರಿಯ ಹೊಣೆಗಾರಿಕೆ ಇವೆಲ್ಲವನ್ನೂ ಬಿ.ಇಡಿ ತರಬೇತಿ ತಿಳಿಸಿಕೊಡುತ್ತದೆ.ಪ್ರಸ್ತುತತೆಗೆ ಅಗತ್ಯವಾಗಿರುವ ಕಂಪ್ಯೂಟರ್ ಶಿಕ್ಷಣದೊಂದಿಗೆ, ದೇಶದ ಸಂಸ್ಕೃತಿ ಹಾಗೂ ಸಮಗ್ರತೆಯನ್ನು ಬಿಂಬಿಸುವ ಜೀವನ ಕೌಶಗಳನ್ನು ತಿಳಿದಿರುತ್ತಾರೆ.ಸ್ನಾತಕೋತ್ತರ ಪದವಿಯಲ್ಲಿ ಐಚ್ಛಿಕ ವಿಷಯವನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಪರೀಕ್ಷಾ ಪೂರ್ವದಲ್ಲಿ ಆಯ್ದ ವಿಷಯಕ್ಕೆ ಸಂಬಂಧಿಸಿದಂತೆ ನಿಯೋಜಿತ ಕಾರ್ಯವನ್ನು ಬರೆದು, ವಿಶ್ವವಿದ್ಯಾಲಯ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಹೊರಬಂದಿರುತ್ತಾರೆ.ಸ್ನಾತಕೋತ್ತರ ಪದವಿಯಲ್ಲಿನ ವಿಷಯದ ಪ್ರಾವೀಣ್ಯತೆ, ಬಿ.ಇಡಿ ವ್ಯಾಸಂಗದಲ್ಲಿನ ಬೋಧನಾ ಕೌಶಲಗಳು ಈ ಎರಡೂ ಅಂಶಗಳು ಈಗ ಪದವಿಪೂರ್ವ ಶಿಕ್ಷಣ ಇಲಾಖೆ ನಿಗದಿ ಪಡಿಸಿರುವ ವಿದ್ಯಾರ್ಹತೆಯಲ್ಲಿ ಸಮ್ಮಿಳಿತವಾಗಿವೆ.1966ರ ಕೊಠಾರಿ ಶಿಕ್ಷಣ ಆಯೋಗವು `ಭಾರತದ ಭವಿಷ್ಯವು ಶಿಕ್ಷಣ ಸಂಸ್ಥೆಗಳ ತರಗತಿಗಳಲ್ಲಿ ರೂಪಿಸಲ್ಪಡುತ್ತಿದೆ~ ಎಂದು ಹೇಳಿದೆ. ಹಾಗಾಗಿ ಇಂದು ಶಿಕ್ಷಣ ಕೇವಲ ಜ್ಞಾನದ ಶಾಖೆಯಾಗಿ ಉಳಿದಿಲ್ಲ. ಬಂಡವಾಳ ಉತ್ಪಾದನೆಯ ಕ್ಷೇತ್ರವಾಗಿಯೂ ಗುರುತಿಸಿಕೊಂಡಿದೆ.ಶಿಕ್ಷಣ ಕ್ಷೇತ್ರದಲ್ಲಿ `ಬಂಡವಾಳ~ ಎಂಬ ಪದದ ಅರ್ಥ `ದಕ್ಷ ಮಾನವ ಸಂಪನ್ಮೂಲದ ಉತ್ಪಾದನೆ.~ ಚಲನಶೀಲವಾದ ಸಮಾಜಕ್ಕೆ ಯೋಗ್ಯ ನಾಗರಿಕರನ್ನು ರೂಪಿಸುವ ಗುರುತರ ಜವಾಬ್ದಾರಿ ಇಂದಿನ ಶಿಕ್ಷಣ ರಂಗದ ಮೇಲಿದೆ. ಇದನ್ನು ಸಾಧಿಸುವ ನಿಟ್ಟಿನಲ್ಲಿ ಈ ಬಗೆಯ ನೂತನ ನಿರ್ಧಾರಗಳು ಬೆಳವಣಿಗೆಯ ಸಂಕೇತದಂತಿವೆ.ಈ ಕುರಿತು ಸಂಪನ್ಮೂಲ ವ್ಯಕ್ತಿಗಳು, ವಿದ್ವಾಂಸರು, ಶಿಕ್ಷಣ ತಜ್ಞರು ವಸ್ತುನಿಷ್ಠವಾಗಿ ವಿಮರ್ಶಿಸಿ ನಿರ್ಧರಿಸಬೇಕು. ಹಾಗೊಂದು ವೇಳೆ ಈಗ ತೆಗೆದುಕೊಂಡಿರುವ ನಿರ್ಧಾರವನ್ನು ಸಡಿಲಿಸಿದರೆ, ಪ್ರತಿಸಲವೂ ಇದೇ ರೀತಿಯ ವಿರೋಧ ವ್ಯಕ್ತವಾಗುವುದರಲ್ಲಿ ಅನುಮಾನವಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.