ಬಿ.ಇಡಿ ಕಾಲೇಜುಗಳಿಗೆ ಷರತ್ತಿನ ಮಾನ್ಯತೆ

7
ಅರ್ಹ ಕಾಲೇಜಿಗೆ ಸೇರ್ಪಡೆ ವಿದ್ಯಾರ್ಥಿ ಜವಾಬ್ದಾರಿ: ರಂಗಸ್ವಾಮಿ ಸ್ಪಷ್ಟನೆ

ಬಿ.ಇಡಿ ಕಾಲೇಜುಗಳಿಗೆ ಷರತ್ತಿನ ಮಾನ್ಯತೆ

Published:
Updated:

ಬೆಂಗಳೂರು: ಮೂಲಸೌಕರ್ಯ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಬಿ.ಇಡಿ ಕಾಲೇಜುಗಳು ಮೂರು ತಿಂಗಳಲ್ಲಿ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಷರತ್ತಿನ ಆಧಾರದಲ್ಲಿ ಬೆಂಗಳೂರು ವಿವಿ ವ್ಯಾಪ್ತಿಯ 99 ಬಿ.ಇಡಿ ಕಾಲೇಜುಗಳಿಗೂ 2012-13ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮಾನ್ಯತೆಯನ್ನು ಮುಂದುವರಿಸಲು ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ನೀಡಲಾಯಿತು.`ಮೂಲಸೌಕರ್ಯದ ಕೊರತೆ ಸೇರಿದಂತೆ ನಾನಾ ಸಮಸ್ಯೆ ಎದುರಿಸುತ್ತಿರುವ ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಲಾಗುವುದು. ಮೂರು ತಿಂಗಳಲ್ಲಿ ಕಾಲೇಜುಗಳು ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು. ಗುಣಮಟ್ಟ ಹೆಚ್ಚಿಸಿಕೊಳ್ಳದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಷರತ್ತಿನ ಪಟ್ಟಿಗೆ ಸೇರಿರುವ ಕಾಲೇಜುಗಳಿಗೆ ದಾಖಲಾಗುವುದು ವಿದ್ಯಾರ್ಥಿಗಳ ಧೈರ್ಯಕ್ಕೆ ಬಿಟ್ಟ ವಿಚಾರ. ಅದಕ್ಕೆ ಅವರೇ ಜವಾಬ್ದಾರರು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಯಾವುದೇ ಭರವಸೆ ನೀಡುವುದಿಲ್ಲ' ಎಂದು ಹಂಗಾಮಿ ಕುಲಪತಿ ಡಾ.ಎನ್.ರಂಗಸ್ವಾಮಿ ಸ್ಪಷ್ಟಪಡಿಸಿದರು.ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದ ಬೋರ್ಡ್ ರೂಂನಲ್ಲಿ ಬುಧವಾರ ನಡೆದ ಸಿಂಡಿಕೇಟ್ ಸಭೆಯ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿ, `ಕಾಲೇಜುಗಳ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ' ಎಂದು ತಿಳಿಸಿದರು.`ಬಿ.ಇಡಿ ಕಾಲೇಜುಗಳ ಗುಣಮಟ್ಟದ ಸಂಬಂಧ ಬಿ.ಇಡಿ ಕಾರ್ಯಪಡೆ ಅತ್ಯುತ್ತಮ ಮಧ್ಯಂತರ ವರದಿ ನೀಡಿದೆ. ಈ ಬಗ್ಗೆ ಸಭೆಯಲ್ಲಿ ಶ್ಲಾಘನೆ ವ್ಯಕ್ತವಾಯಿತು. ಅಲ್ಲದೆ ಸ್ಥಳೀಯ ಪರಿಶೀಲನಾ ಸಮಿತಿ (ಎಲ್‌ಐಸಿ)ಗಳು ನೀಡಿರುವ ವರದಿಗಳನ್ನು ಗಮನಕ್ಕೆ ತೆಗೆದುಕೊಂಡು ಮಾನ್ಯತೆ ಮುಂದುವರಿಸುವ ತೀರ್ಮಾನಕ್ಕೆ ಬರಲಾಯಿತು' ಎಂದು ಅವರು ಮಾಹಿತಿ ನೀಡಿದರು.

ಒಬಿಸಿ ಕೋಶ:  ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿ ಪರಿಹರಿಸಲು ವಿವಿಯಲ್ಲಿ ಒಬಿಸಿ ಕೋಶ ಸ್ಥಾಪಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.ಈ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಎದುರಿಸುತ್ತಿರುವ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಈ ಕೋಶದ ಮೂಲಕ ಸ್ಪಂದಿಸಲಾಗುವುದು ಎಂದು ರಂಗಸ್ವಾಮಿ ತಿಳಿಸಿದರು.ಒಂದು ಲಕ್ಷ ನೆರವು: ಜ್ಞಾನಭಾರತಿ ಕ್ಯಾಂಪಸ್ ಹಾಗೂ ಸೆಂಟ್ರಲ್ ಕಾಲೇಜಿನಲ್ಲಿರುವ ಅಧ್ಯಯನ ವಿಭಾಗ ಹಾಗೂ ಸಂಶೋಧನಾ ಕೇಂದ್ರಗಳು ಮೂಲ ಸೌಕರ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ಕೇಂದ್ರಕ್ಕೆ ಒಂದು ಲಕ್ಷ ರೂಪಾಯಿ ಅನುದಾನ ನೀಡಲು ಅನುಮೋದನೆ ನೀಡಲಾಯಿತು. ಕಾರ್ಯಾಗಾರ, ವಿಚಾರಸಂಕಿರಣ ಹಮ್ಮಿಕೊಂಡಾಗ ಪ್ರತಿ ವಿಭಾಗಕ್ಕೆ ರೂ 10 ಸಾವಿರ  ನೀಡಲು ನಿರ್ಧರಿಸಲಾಯಿತು.ಸಭೆಯಲ್ಲಿ 35 ವಿಷಯಸೂಚಿಗಳ ಬಗ್ಗೆ ಚರ್ಚಿಸಲು ಉದ್ದೇಶಿಸಲಾಗಿತ್ತು. ಆದರೆ, 28 ವಿಷಯಸೂಚಿಗಳ ಬಗ್ಗೆ ಮಾತ್ರ ಚರ್ಚಿಸಲಾಯಿತು. ಉಳಿದ ವಿಷಯಸೂಚಿಗಳನ್ನು ಸೋಮವಾರ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry