ಬಿ.ಇಡಿ ಕಾಲೇಜುಗಳ ತಪಾಸಣೆ: ಕಾರ್ಯಪಡೆ ರಚನೆ

7

ಬಿ.ಇಡಿ ಕಾಲೇಜುಗಳ ತಪಾಸಣೆ: ಕಾರ್ಯಪಡೆ ರಚನೆ

Published:
Updated:

ಬೆಂಗಳೂರು: ಬಿ.ಇಡಿ., ಎಂ.ಇಡಿ. ಕಾಲೇಜುಗಳ ಗುಣಮಟ್ಟ ಪರಿಶೀಲಿಸಿ ವರದಿ ಸಲ್ಲಿಸಲು ಬೆಂಗಳೂರು ವಿಶ್ವವಿದ್ಯಾಲಯವು ಶೈಕ್ಷಣಿಕ ಪರಿಷತ್ ಸದಸ್ಯ ಎಚ್.ಕರಣ್ ಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಪಡೆಯನ್ನು ರಚಿಸಿದೆ. ಕಾರ್ಯಪಡೆಯ ಅವಧಿ ಒಂದು ವರ್ಷ.ಶಿಕ್ಷಣ ವಿಭಾಗದ ಡೀನ್ ಡಾ.ಎಂ.ಬಿ.ಕೀರ್ತಿ ನಾರಾಯಣ ಸ್ವಾಮಿ, ರೀಡರ್ ಡಾ.ಹಸೀನ್ ತಾಜ್, ನಿವೃತ್ತ ಪ್ರಾಧ್ಯಾಪಕ ಡಾ.ನಾಗರಾಜಯ್ಯ ಕಾರ್ಯಪಡೆಯ ಸದಸ್ಯರಾಗಿರುತ್ತಾರೆ. ಸಹಾಯಕ ಹಣಕಾಸು ಅಧಿಕಾರಿ ರಾಜಶೇಖರಮೂರ್ತಿ ಸಂಚಾಲಕರಾಗಿರುತ್ತಾರೆ.ಕಾರ್ಯಪಡೆ ರಚನೆಗೆ ಸಂಬಂಧಿಸಿದಂತೆ ಕುಲಪತಿ ಡಾ.ಎನ್.ಪ್ರಭುದೇವ್ ಸೋಮವಾರ ಆದೇಶ ಹೊರಡಿಸಿದ್ದಾರೆ. ಬಿ.ಇಡಿ, ಎಂ.ಇಡಿ ಕೋರ್ಸುಗಳನ್ನು ನಡೆಸುತ್ತಿರುವ ಕಾಲೇಜುಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ತಪಾಸಣೆ ನಡೆಸುವ ಅಧಿಕಾರವನ್ನು ಕಾರ್ಯಪಡೆಗೆ ನೀಡಲಾಗಿದೆ.ಪ್ರವೇಶ ಪ್ರಕ್ರಿಯೆ, ವಿದ್ಯಾರ್ಥಿ ಹಾಜರಾತಿ, ಪ್ರಾಂಶುಪಾಲರು ಮತ್ತು ಶಿಕ್ಷಕರ ನೇಮಕ, ಆಂತರಿಕ ಮೌಲ್ಯಮಾಪನದ ಅಂಕಗಳ ನೀಡಿಕೆ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಸಮಪರ್ಕವಾಗಿ ನಡೆಸುವುದು- ಇವೇ ಮೊದಲಾದ ಅಂಶಗಳ ಬಗ್ಗೆ ಕಾರ್ಯಪಡೆಯು ಪರಿಶೀಲನೆ ನಡೆಸಲಿದೆ.ಕಾಲೇಜುಗಳ ಸ್ಥಿತಿಗತಿ ಕುರಿತು ಕಾರ್ಯಪಡೆಯು ನಿಯಮಿತವಾಗಿ, ಕಡೇ ಪಕ್ಷ ತಿಂಗಳಿಗೊಮ್ಮೆ ಕುಲಪತಿಯವರಿಗೆ ವರದಿ ಸಲ್ಲಿಸಬೇಕು. ಮೂರು ತಿಂಗಳ ಒಳಗೆ ತಪಾಸಣೆ ನಡೆಸಿದ ಕಾಲೇಜುಗಳ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.ಕಾರ್ಯಪಡೆ ರಚನೆ ಸಂಬಂಧ ಫೆಬ್ರುವರಿ 21 ಮತ್ತು 29ರಂದು ಕುಲಸಚಿವರಿಗೆ ಕಡತ ಕಳುಹಿಸಲಾಗಿತ್ತು. ಅವರು ಆದೇಶ ಹೊರಡಿಸದೇ ಇದ್ದುದರಿಂದ ಕುಲಪತಿಯವರೇ ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಲಾಗಿದೆ.

ಏಕಪಕ್ಷೀಯ ಕ್ರಮ: `ಕರ್ನಾಟಕ ವಿ.ವಿ. ಕಾಯ್ದೆ ನಿಯಮಗಳನ್ನು ಪಾಲಿಸದೇ ಆದೇಶ ಹೊರಡಿಸುವ ಪರಿಪಾಠವನ್ನು ಕುಲಪತಿ ಮುಂದುವರೆಸಿದ್ದಾರೆ~ ಎಂದು ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ ಟೀಕಿಸಿದ್ದಾರೆ.ಕಾರ್ಯಪಡೆ ರಚನೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಅವರು, `ಕಾಯ್ದೆ ಪ್ರಕಾರ ಯಾವುದೇ ಸಮಿತಿ ಅಥವಾ ಕಾರ್ಯಪಡೆಯನ್ನು ರಚಿಸಬೇಕಾದರೆ ಶೈಕ್ಷಣಿಕ ಪರಿಷತ್ತು ಮತ್ತು ಸಿಂಡಿಕೇಟ್ ಅನುಮೋದನೆ ಬೇಕು. ಕಾಯ್ದೆಯನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಕುಲಪತಿಯವರು ಏಕಪಕ್ಷೀಯವಾಗಿ ಆದೇಶಗಳನ್ನು ಹೊರಡಿಸುತ್ತಿದ್ದಾರೆ. ಇದು ಸರಿಯಲ್ಲ~ ಎಂದು ಹೇಳಿದ್ದಾರೆ.`ಕಾರ್ಯಪಡೆಯ ಸದಸ್ಯರಾಗಿರುವ ನಾಗರಾಜಯ್ಯ ಅವರ ವಿರುದ್ಧ ನೂರಾರು ದೂರುಗಳಿವೆ. ಅಲ್ಲದೇ ಕುಲಪತಿಯವರು ರಚಿಸಿರುವ ಹತ್ತಾರು ಸಮಿತಿಗಳಲ್ಲಿ ನಾಗರಾಜಯ್ಯ ಸದಸ್ಯರಾಗಿದ್ದಾರೆ. ಆರೋಪಗಳಿಲ್ಲದ ತಜ್ಞರನ್ನು ಕಾರ್ಯಪಡೆ ಸದಸ್ಯರನ್ನಾಗಿ ಮಾಡುವಂತೆ ನಾನು ಸಲಹೆ ಮಾಡಿದ್ದೆ. ಅದ್ಯಾವುದನ್ನು ಪರಿಗಣಿಸಿದೇ ಏಕಾಏಕಿ ಕಾರ್ಯಪಡೆ ರಚಿಸಲಾಗಿದೆ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry