ಶನಿವಾರ, ಜನವರಿ 18, 2020
20 °C
ಕೃಷಿ ಖುಷಿ

ಬಿಇಡಿ ಪದವೀಧರನಿಗೆ ದ್ರಾಕ್ಷಿ ತೋಟವೇ ತರಗತಿ!

ಪ್ರಜಾವಾಣಿ ವಾರ್ತೆ/ –ಮಲ್ಲಿಕಾರ್ಜುನ ಮುಡಬೂಳಕರ್‌ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ತಾಲ್ಲೂಕಿನ ರಾಮತೀರ್ಥ ಗ್ರಾಮವು ದ್ರಾಕ್ಷಿ ಬೆಳೆಯಿಂದಾಗಿ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣ ಗ್ರಾಮದ ಪ್ರಗತಿಪರ ರೈತ ಮಲ್ಲಣ್ಣ ದುರ್ಗಣ್ಣ ವಾಡರ್.ಇವರ ಹೊಲದಲ್ಲಿ ಕೆರೆ, ಬಾವಿ, ಕೊಳವೆಬಾವಿ ಇಲ್ಲವೇ ಇಲ್ಲ. ಹೊಲ­ದಲ್ಲಿ ಹನಿ ನೀರು ಸಿಗದಿದ್ದರೂ ಮನೆಯಲ್ಲಿನ ಕೊಳವೆಬಾವಿಯಿಂದ ಹೊಲಕ್ಕೆ 1,500 ಅಡಿ ಉದ್ದದ ಪೈಪ್‌ ಲೈನ್  ಮೂಲಕ  ಹನಿ ನೀರಾವರಿ ಅಳ­ವಡಿಸಿ, ಕೃಷಿ ಕ್ಷೇತ್ರದಲ್ಲಿ ಎಲ್ಲರೂ ಹುಬ್ಬೇರಿ­­ಸುವಂತೆ ಸಾಧನೆ ಮಾಡಿ ತೋರಿಸಿದ್ದಾರೆ. ಅಸಾಧ್ಯ ಎಂಬಂಥ ದ್ರಾಕ್ಷಿ ಬೆಳೆ ಪ್ರಮುಖ ಆಕರ್ಷಣೆ. ಉಳಿದಂತೆ  12 ಎಕರೆ ಭೂಮಿಯಲ್ಲಿ ತೊಗರಿ, 5 ಎಕರೆಯಲ್ಲಿ ಹತ್ತಿ, 2 ಎಕರೆ ಭೂಮಿಯಲ್ಲಿ ಭತ್ತ, 3 ಎಕರೆಯಲ್ಲಿ ಜೋಳದ ಬೆಳೆ ಇದೆ.ಬಿಎಸ್ಸಿ, ಬಿ.ಇಡಿ ಶಿಕ್ಷಣ ಮುಗಿಸಿ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕೆಲಸ ಮಾಡಬೇಕಾದ ಮಲ್ಲಣ್ಣ ಅವರನ್ನು ಆಕರ್ಷಿಸಿದ್ದು ಕೃಷಿ ಕ್ಷೇತ್ರ. ಮಲ್ಲಣ್ಣ 30 ಎಕರೆ ಭೂಮಿ ಹೊಂದಿದ್ದಾರೆ. ಶಿಕ್ಷಣ ಮುಗಿಸಿದ ತಕ್ಷಣ ಕೃಷಿಯಲ್ಲಿ ಆಸಕ್ತಿ ತೋರಿದ ಮಲ್ಲಣ್ಣ ತೋಟಗಾರಿಕೆ ಬೆಳೆ ಬೆಳೆಯಬೇಕು ಎಂದು ನಿರ್ಧರಿಸಿ 5 ಎಕರೆ ಭೂಮಿಯಲ್ಲಿ 5 ವರ್ಷಗಳ ಕಾಲ ಬಾಳೆ ಬೆಳೆದು ಉತ್ತಮ ಆದಾಯ ಪಡೆದರು.ದ್ರಾಕ್ಷಿ ಹುಳಿಯಾಗಲಿಲ್ಲ: ದ್ರಾಕ್ಷಿ ಬೆಳೆ ಬೆಳೆಯಬೇಕು ಎಂದು  ಸೊಲ್ಲಾಪುರ ಮತ್ತು ಪುಣೆಯಲ್ಲಿನ ಕೃಷಿ ವಿಜ್ಞಾನಿ­ಗಳು, ಎನ್.ಆರ್.ಸಿ ಫಾರ್ ಗ್ರೇಪ್ ಸೆಂಟರ್‌ಗೆ ಹೋಗಿ ಸಮಗ್ರ ಮಾಹಿತಿ ಪಡೆದರು. 2006ರಲ್ಲಿ 8 ಎಕರೆ ಭೂಮಿಯಲ್ಲಿ ದ್ರಾಕ್ಷಿ ಬೆಳೆಯಬೇಕು ನಿರ್ಧಾರಕ್ಕೆ ಬಂದರು. ಅದಕ್ಕೆ ಬೇಕಾದ ರೀತಿಯಲ್ಲಿ ಭೂಮಿಯನ್ನು ಹದ ಮಾಡಿಕೊಂಡು ಹೊಲದ ಸುತ್ತಾ ತಂತಿ ಬೇಲಿ ಹಾಕಿಸಿದರು. ಅಳ್ಳೊಳ್ಳಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ನಿಂದ ₨11 ಲಕ್ಷ ಸಾಲ ಪಡೆದು ಒಟ್ಟು ₨ 21 ಲಕ್ಷ ರೂಪಾಯಿ ಖರ್ಚು ಮಾಡಿದರು.‘ಹೈದರಾಬಾದಿನಿಂದ ದ್ರಾಕ್ಷಿ ಬೆಳೆಯ ಕೃಷಿ ವಿಜ್ಞಾನಿ ಡಾ.ಕಮಲಾಕರ ರಾವ್ ಅವರನ್ನು ಪ್ರತಿ ವರ್ಷ ತಿಂಗಳಲ್ಲಿ 2ರಿಂದ 3 ಸಲ ಕರೆಸಿ ಸಲಹೆ, ಮಾರ್ಗದರ್ಶನ ಪಡೆಯುತ್ತೇನೆ. ದ್ರಾಕ್ಷಿ ಬೆಳೆ ಬೆಳೆಯು­ವುದು ಶುರು ಮಾಡಿದರೆ ಮೊದಲ ಎರಡು ಅಥವಾ ಮೂರು ವರ್ಷ ಹಣ ಹೂಡುತ್ತಾ ಇರಬೇಕು. ಮೂರನೇ ವರ್ಷದಿಂದ ದ್ರಾಕ್ಷಿ ಕೊಯ್ಲಿಗೆ ದೊರೆ­ಯುತ್ತದೆ.ಆರಂಭದಲ್ಲಿ 500 ರಿಂದ 600 ಕ್ವಿಂಟಲ್ ದ್ರಾಕ್ಷಿ ಬೆಳೆದೆ. ಕಳೆದ ವರ್ಷ 800 ಕ್ವಿಂಟಲ್ ದ್ರಾಕ್ಷಿ ಪಡೆದಿ­ರುವೆ. ವಾರ್ಷಿಕ ₨೨0 ಲಕ್ಷ ಆದಾಯ ದ್ರಾಕ್ಷಿಯಿಂದ ಲಭಿಸುತ್ತದೆ. ಅದರಲ್ಲಿ ಖರ್ಚು ಅರ್ಧದಷ್ಟು ತಗಲುತ್ತದೆ. ನಿವ್ವಳವಾಗಿ ₨10 ಲಕ್ಷ ಆದಾಯವಿದೆ’ ಎನ್ನುತ್ತಾರೆ ಮಲ್ಲಣ್ಣ.ದ್ರಾಕ್ಷಿಯನ್ನು ಯಾದಗಿರಿ, ಗುಲ್ಬರ್ಗ ಹಣ್ಣು ಮಾರುಕಟ್ಟೆಯ ಸಗಟು ವ್ಯಾಪಾರಿ­ಗಳ ಅಂಗಡಿಗಳಿಗೆ ಸಾಗಿಸು­ತ್ತಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದಾಗ ಹೈದರಾಬಾದಿಗೂ ಕಳಿಸು­ತ್ತಾರೆ. ಒಣದ್ರಾಕ್ಷಿ ತಯಾರು ಮಾಡಲು ತೋಟದಲ್ಲಿ ವ್ಯವಸ್ಥೆ ಮಾಡಿಕೊಂಡಿ­ದ್ದಾರೆ.ಒಣದ್ರಾಕ್ಷಿಯನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಾಸಗಾಂವ್ನ ಕೋಲ್ಡ್ ಸ್ಟೋರೇಜ್‌ಗೆ ಸಾಗಿಸುತ್ತೇನೆ.

ಮಾರು­ಕಟ್ಟೆ­ಯಲ್ಲಿ ಉತ್ತಮ ಬೆಲೆ ಬಂದಾಗ ಮಾರಾಟ ಮಾಡುತ್ತೇನೆ. ಕಳೆದ ವರ್ಷ 60 ಕ್ವಿಂಟಲ್ ಒಣ ದ್ರಾಕ್ಷಿಯಿಂದ ₨6 ಲಕ್ಷ ಆದಾಯ ಬಂದಿದೆ’ ಎಂದು ಮಲ್ಲಣ್ಣ ಹೆಮ್ಮೆಯಿಂದ ಹೇಳುತ್ತಾರೆ.ರೋಗಬಾಧೆ: ತಂಪಾದ ವಾತಾವರಣ ದ್ರಾಕ್ಷಿ ಬೆಳೆಗೆ ಕಂಟಕ. ಬೆಳೆಗೆ ಎಲೆ ಚುಕ್ಕಿ ರೋಗ, ಬೂದು ರೋಗ ಹರಡುತ್ತದೆ. ಡೌನಿ ಮಿಲ್ಡೋ ರೋಗ ಬಾಧೆ ಸಾಮಾನ್ಯವಾಗಿರುತ್ತದೆ.ಇದು ಸಾಂಕ್ರಾಮಿಕ ರೋಗ. ಈ ರೋಗವು ಒಂದು ಗಿಡದಲ್ಲಿ ಕಂಡು ಬಂದರೆ ಒಂದೆರಡು ದಿನದಲ್ಲಿ ನೋಡ ನೋಡುತ್ತಿದ್ದಂತೆ  ತೋಟದ ತುಂಬಾ ಹರ­ಡು­ತ್ತದೆ.ಅದನ್ನು ಹತೋಟಿಗೆ ತರದಿದ್ದರೆ ಇಡೀ ಬೆಳೆ ಹಾನಿಯಾ­ಗುತ್ತದೆ. ರೋಗಿಯನ್ನು ಐ.ಸಿ.ಯು. ಘಟಕದಲ್ಲಿ ನಿಗಾವಹಿಸುವಂತೆ ದ್ರಾಕ್ಷಿ ಬೆಳೆಗೂ  ತೀವ್ರ ನಿಗಾಬೇಕು. ಇಲ್ಲವಾ­ದರೆ ನಷ್ಟ ಅನುಭವಿಸಬೇಕಾಗುತ್ತದೆ ಎನ್ನುವುದು ಮಲ್ಲಣ್ಣನ ಅನುಭವದ ಮಾತು. (ಮೊ: 9972335499).

ಪ್ರತಿಕ್ರಿಯಿಸಿ (+)