ಬಿ.ಇಡಿ ಫಲಿತಾಂಶ ತಡೆ; ತನಿಖೆಗೆ ಸಮಿತಿ

7

ಬಿ.ಇಡಿ ಫಲಿತಾಂಶ ತಡೆ; ತನಿಖೆಗೆ ಸಮಿತಿ

Published:
Updated:

ದಾವಣಗೆರೆ: ಬಿ.ಇಡಿಯ ಆಂತರಿಕ ಅಂಕಗಳನ್ನು ಪರಿಗಣಿಸದೇ 27 ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯಲಾಗಿದ್ದು, ಈ ಕುರಿತು ತನಿಖೆ ನಡೆಸಲು ಐವರನ್ನು ಒಳಗೊಂಡ ಸಮಿತಿ ರಚಿಸಲು ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ ಸಭೆ ತೀರ್ಮಾನಿಸಿತು.ತೋಳಹುಣಸೆಯ ದಾವಣಗೆರೆ ವಿವಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಹೊರಗಿನ ವಿವಿಯ ಮೂವರು ತಜ್ಞರೂ ಸೇರಿದಂತೆ ಒಟ್ಟು ಸಮಿತಿಯಲ್ಲಿ ಐವರು ಇರಲಿದ್ದಾರೆ ಎಂದು ವಿವಿಯ ಕುಲಪತಿ ಪ್ರೊ.ಎಸ್.ಇಂದುಮತಿ ಹೇಳಿದರು.ಎಸ್.ಎಂ.ಕೃಷ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಕೆ.ಎಸ್.ಗಂಗಾಧರ್ ಅವರು, 2010-11ನೇ ಸಾಲಿನ ಬಿ.ಇಡಿ ಪದವಿ ಪಡೆದು ಥೀಯರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ 27 ವಿದ್ಯಾರ್ಥಿಗಳ ಆಂತರಿಕ ಅಂಕ ಪರಿಗಣಿಸದೇ ಫಲಿತಾಂಶ ತಡೆ ಹಿಡಿಯಲಾಗಿದೆ. ಅವರ ಭವಿಷ್ಯ ಅತಂತ್ರವಾಗಿದೆ. ಕೂಡಲೇ ಫಲಿತಾಂಶ ಪ್ರಕಟಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಆಗ ಇಂದುಮತಿ ಮಾತನಾಡಿ, ಈ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ತಪ್ಪು ಮಾಡಿ ಸರಿಪಡಿಸುವುದೇ ವಿವಿಯ ಜವಾಬ್ದಾರಿ ಆಗಬಾರದು. `ಉನ್ನತ ಶಿಕ್ಷಣ ಮಂಡಳಿ'ಗೆ ಈ ಬಗ್ಗೆ ಪತ್ರ ಬರೆಯಿರಿ ಎಂದರು.ಆಗ ಸಭೆಯಲ್ಲಿದ್ದ ಕೆಲವರು ತಪ್ಪು ಮಾಡಿದ ಕಾಲೇಜಿಗೆ ಕಾನೂನು ರೀತಿಯ ಕ್ರಮಕೈಗೊಂಡು; ವಿದ್ಯಾರ್ಥಿಗಳ ಭವಿಷ್ಯ ಕಾಪಾಡಿ ಎಂದು ಸಲಹೆ ನೀಡಿದರು.ಮಾನವೀಯತೆಯಿಂದ ನೋಡುವು ದಾದರೂ ನಿಯಮ ಉಲ್ಲಂಘನೆ ಆಗಬಾರದು. ಅದಕ್ಕಾಗಿ ಸಮಿತಿ ರಚನೆ ಮಾಡಲಾಗುವುದು ಎಂದು ಕುಲಪತಿ ಭರವಸೆ ನೀಡಿದರು.`ಬಯೋಮೆಟ್ರಿಕ್' ಹಾಜರಾತಿ: ಬಿ.ಇಡಿ, ಎಂ.ಇಡಿ, ಬಿಪಿ.ಇಡಿ, ಎಂಪಿ.ಇಡಿ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ `ಬಯೋಮೆಟ್ರಿಕ್' ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲಾಗುವುದು. ಗೈರು ಹಾಜರಾತಿ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಪಿಎಚ್.ಡಿ ದೀರ್ಘ ಚರ್ಚೆ: ಸಭೆಯಲ್ಲಿ ಪಿಎಚ್.ಡಿ ಪ್ರವೇಶ ಪರೀಕ್ಷೆ ನಡೆಸುವ ಕುರಿತು ದೀರ್ಘ ಚರ್ಚೆ ನಡೆಯಿತು. ಆದರೆ, ಅಂತಿಮವಾಗಿ ಪ್ರವೇಶ ಪರೀಕ್ಷೆ ನಡೆಸಿ, ಮಾರ್ಗದರ್ಶಕರ ನೇಮಕ ಸಂಬಂಧ ಯಾವುದೇ ನಿರ್ಧಾರಕ್ಕೆ ಸಭೆ ಬರಲಿಲ್ಲ.ಕಡಿಮೆ ಸಂಖ್ಯೆಯಲ್ಲಿ ಇರುವ ಕಾಯಂ ಉಪನ್ಯಾಸಕರನ್ನು ಇಟ್ಟುಕೊಂಡು ಪಿಎಚ್.ಡಿ ಪ್ರವೇಶ ಪರೀಕ್ಷೆ ನಡೆಸುವುದು, ಪ್ರಶ್ನೆ ಪತ್ರಿಕೆ ತಯಾರಿ ಕಷ್ಟ ಎಂಬ ಮಾತುಗಳು ಸಭೆಯಲ್ಲಿ ಕೇಳಿಬಂದವು.ಸಾಧನೆಗೆ ಗೌರವ: ಮಲ್ಲಾಡಿಹಳ್ಳಿ ರಾಘವೇಂದ್ರ ಕಾಲೇಜು ಆಫ್ ಎಜುಕೇಷನ್ ಪ್ರಾಂಶುಪಾಲ ಡಾ.ರವಿಶಂಕರ್, ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ವಿವಿ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾಧನೆ ಮಾಡಿದ ಉಪನ್ಯಾಸಕರನ್ನು ಗೌರವಿಸುವಂತೆ ಕೋರಿದರು.

ಆಗ ಸಭೆಯಲ್ಲಿ ಪರ-ವಿರೋಧ ಚರ್ಚೆಗಳು ನಡೆದು, ಕೊನೆಗೆ ಸಭೆ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ.ಇಂದುಮತಿ ಮಾತನಾಡಿ, ಎಲ್ಲಿಯ ಉಪನ್ಯಾಸಕರು? ಅದಕ್ಕೆ ಮಾನದಂಡಗಳು ಏನು? ಉತ್ತಮ ಶಿಕ್ಷಕರನ್ನು ಗುರುತಿಸುವುದು ಹೇಗೆ? ಉಪನ್ಯಾಸಕರು ಯಾವುದಾದರೂ ಪುಸ್ತಕ ಪ್ರಕಟಣೆ ಮಾಡಿದ್ದಾರೆಯೇ? ವಿದ್ಯಾರ್ಥಿಗಳ ಅನಿಸಿಕೆ ಏನು? ಉತ್ತಮ ಉಪನ್ಯಾಸಕರು ಆಯ್ಕೆ ಕಷ್ಟಸಾಧ್ಯ. ಆದ್ದರಿಂದ, ಈ ವಿಷಯ ಇಲ್ಲಿಗೆ ಬಿಡುವುದು ಉತ್ತಮ. ಅಗತ್ಯವಿದ್ದರೆ `ಉನ್ನತ ಶಿಕ್ಷಣ ಮಂಡಳಿ'ಗೆ ಪತ್ರ ಬರೆಯಿರಿ ಎಂದು ಸಲಹೆ ನೀಡಿದರು.`ಇವರು ಉತ್ತಮ ಉಪನ್ಯಾಸಕರು' ಎಂದು ವಿದ್ಯಾರ್ಥಿಗಳು ಹೇಳುವುದೇ ನಮಗೆ ಪುರಸ್ಕಾರ ಎಂದು ಹೇಳಿದರು. ವಿವಿಯ ಮೊದಲ ಘಟಿಕೋತ್ಸವ ಕಾರಣಾಂತರಗಳಿಂದ ಪದೇ ಪದೇ ಮುಂದೂಡಲಾಗುತ್ತಿತ್ತು. ಕೊನೆಗೆ ಉತ್ತಮವಾಗಿ ನಡೆಯಿತು ಎಂದು ತಿಳಿಸಿದರು.

ಕುಲಸಚಿವ ಪ್ರಕಾಶ್, ಪರೀಕ್ಷಾಂಗ ಕುಲಸಚಿವ ಬಕ್ಕಪ್ಪ ಮೊದಲಾದವರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry