ಭಾನುವಾರ, ಏಪ್ರಿಲ್ 18, 2021
27 °C

ಬಿಎಂಟಿಸಿ ಅಧಿಕಾರಿ ಅಮಾನತಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸುತ್ತಿರುವ ಬಿಎಂಟಿಸಿ 26ನೇ (ಯಶವಂತಪುರ) ಘಟಕದ ವ್ಯವಸ್ಥಾಪಕರನ್ನು ತಕ್ಷಣ ಅಮಾನತುಗೊಳಿಸುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕರ ಸಂಘ (ಇಂಟಕ್) ಒತ್ತಾಯಿಸಿದೆ.ಅಧಿಕಾರಿಗಳ ಅನುಕೂಲ ಹಾಗೂ ಸವಲತ್ತುಗಳಿಗಾಗಿ ಬಿಎಂಟಿಸಿಯನ್ನು ನಾಲ್ಕು ವಿಭಾಗಗಳನ್ನಾಗಿ ಬೇರ್ಪಡಿಸಿ, ವಿಂಗಡಿಸಿದ ನಂತರ ಎಲ್ಲಾ ಘಟಕಗಳು, ಬಸ್ ನಿಲ್ದಾಣ ಹಾಗೂ ಕಾರ್ಯಾಗಾರಗಳಲ್ಲಿ ಹಿಂದೆಂದೂ ಕಾಣದಷ್ಟು ಹಣ ಸುಲಿಗೆ ತೀವ್ರಗೊಂಡಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎ.ವಿ. ಬೋರಶೆಟ್ಟಿ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.ಬಿಎಂಟಿಸಿ ಹಾಗೂ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಕಾರ್ಮಿಕರಿಗೆ ನ್ಯಾಯಯುತವಾಗಿ ನೀಡಬೇಕಾದ ಹಕ್ಕಿನ ರಜೆಗಳಾದ ಸಾಂದರ್ಭಿಕ ರಜೆ, ಪರಿಹಾರ ರಜೆ, ಗಳಿಕೆ ರಜೆಗಳನ್ನು ನೀಡುತ್ತಿಲ್ಲ. ಹೆಚ್ಚುವರಿ ಕೆಲಸ ಪಡೆದು ಹೆಚ್ಚುವರಿ ಕೆಲಸಕ್ಕೆ ಭತ್ಯೆ ನೀಡುತ್ತಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದಲೂ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ನೀಡಬೇಕಾದ ಎಕ್ಸ್‌ಗ್ರೇಷಿಯಾ ಹಣ ನೀಡುತ್ತಿಲ್ಲ. 25-30 ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ ದುಡಿದ ಕಾರ್ಮಿಕರಿಗೆ ಮುಂಬಡ್ತಿ ದೊರೆಯುತ್ತಿಲ್ಲ. ಲಂಚ ನೀಡದಿದ್ದಲ್ಲಿ ಕಾರ್ಮಿಕರಿಗೆ ಸಂಬಳ ಕಡಿತ, ದಂಡ ಇತರ ಅಕ್ರಮ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ದೂರಿದ್ದಾರೆ.ನಾಲ್ಕು ವರ್ಷಗಳಿಗೊಮ್ಮೆ ನಡೆಸಬೇಕಿದ್ದ ಕಾರ್ಮಿಕ ಸಂಘಗಳ ಚುನಾವಣೆಯನ್ನು 20 ವರ್ಷಗಳಿಂದಲೂ ಆಡಳಿತ ಮಂಡಳಿ ನಡೆಸಿಲ್ಲ. ಕಾರ್ಮಿಕರ ಕುಂದುಕೊರತೆಗಳ ಬಗ್ಗೆ ಸರ್ಕಾರ, ಆಡಳಿತ ವರ್ಗಕ್ಕೆ ಮನವರಿಕೆ ಮಾಡಿಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಅವರು ಆಪಾದಿಸಿದ್ದಾರೆ.ಉನ್ನತ ಆಡಳಿತ ಮಂಡಳಿ ಇದಕ್ಕೆಲ್ಲಾ ಕಡಿವಾಣ ಹಾಕಲು ಕ್ರಮ ಕೈಗೊಳ್ಳದಿದ್ದಲ್ಲಿ ಮುಂದೆ ಆಗಬಹುದಾದ ಯಾವುದೇ ರೀತಿಯ ತೊಂದರೆಗಳಿಗೆ ಆಡಳಿತ ವರ್ಗವೇ ನೇರ ಹೊಣೆ ಹೊರಬೇಕಾಗುತ್ತದೆ. ಅಲ್ಲದೆ, ಬಿಎಂಟಿಸಿಯ ನಾಲ್ಕು ವಿಭಾಗಗಳನ್ನು ರದ್ದುಪಡಿಸಿ ಮೊದಲಿನಂತೆ ಒಂದೇ ಸೂರಿನಡಿ (ಟೂ-ಟಯರ್ ಪದ್ಧತಿ) ಕೇಂದ್ರ ಕಚೇರಿ ಹಾಗೂ ಘಟಕಗಳ ನೇರ ಸಂಪರ್ಕದೊಂದಿಗೆ ಆಡಳಿತ ನಡೆಸಬೇಕು ಎಂದಿದ್ದಾರೆ.ಈ ನಡುವೆ, ಬಿಎಂಟಿಸಿ 26ನೇ ಘಟಕದ ಕಾರ್ಮಿಕರು ವ್ಯವಸ್ಥಾಪಕರ ಕಿರುಕುಳ ಖಂಡಿಸಿ ಇತ್ತೀಚೆಗೆ ಮುಷ್ಕರ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಬಿಎಂಟಿಸಿ ನಿರ್ದೇಶಕ ಪರಮೇಶ್ (ಸಂಚಾರ) ಮನವೊಲಿಸಿದ್ದರಿಂದ ಮುಷ್ಕರ ಹಿಂತೆಗೆದುಕೊಳ್ಳಲಾಯಿತು ಎಂದು ಪ್ರಕಟಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.