ಬಿಎಂಟಿಸಿ: ಕೂಲಿಂಗ್ ಫಿಲ್ಮ್ ತೆಗೆಸಲು ಗಡುವು

7

ಬಿಎಂಟಿಸಿ: ಕೂಲಿಂಗ್ ಫಿಲ್ಮ್ ತೆಗೆಸಲು ಗಡುವು

Published:
Updated:

ಗಳೂರು: ನಗರದ ಬಿಎಂಟಿಸಿ ಬಸ್‌ಗಳಲ್ಲಿ ಅಳವಡಿಸಿರುವ ಕೂಲಿಂಗ್ ಪೇಪರ್ (ಫಿಲ್ಮ್) ಮತ್ತು ಜಾಹಿರಾತು ಪೇಪರ್‌ಗಳನ್ನು ತೆಗೆಸಲು ನಗರ ಸಂಚಾರ ಪೊಲೀಸರು ಡಿಸೆಂಬರ್ 25ರವರೆಗೆ ಗಡುವು ನೀಡಿದ್ದಾರೆ.


`ವಾಹನಗಳ ಗಾಜುಗಳಿಗೆ ಅಳವಡಿಸಿರುವ ಕೂಲಿಂಗ್ ಪೇಪರ್ ತೆಗೆಸದವರ ವಿರುದ್ಧ ಈವರೆಗೆ 68 ಸಾವಿರ ಪ್ರಕರಣಗಳನ್ನು ದಾಖಲಿಸಿಕೊಂಡು, 68 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಬಸ್‌ಗಳಿಗೆ ಅಳವಡಿಸಿರುವ ಕೂಲಿಂಗ್ ಪೇಪರ್ ಮತ್ತು ಜಾಹಿರಾತು ಪೇಪರ್‌ಗಳನ್ನು ತೆಗೆಸಲು ಬಿಎಂಟಿಸಿ ಸಂಸ್ಥೆ ಡಿ.25ರವರೆಗೆ ಗಡುವು ಕೇಳಿದೆ.ಆ ಗಡುವು ಮುಗಿದ ನಂತರವೂ ನಿಯಮ ಉಲ್ಲಂಘಿಸಿದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು' ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ.ಸಲೀಂ `ಪ್ರಜಾವಾಣಿ'ಗೆ ತಿಳಿಸಿದರು. 

`ವಾಹನಗಳ ಕೂಲಿಂಗ್ ಪೇಪರ್ ಅನ್ನು ಕಡ್ಡಾಯವಾಗಿ ತೆಗೆಸಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಹೀಗಾಗಿ ಕೂಲಿಂಗ್ ಪೇಪರ್ ತೆಗೆಸದ ಖಾಸಗಿ ಬಸ್ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ನಗರದಲ್ಲಿ ಈಗಾಗಲೇ ಶೇ 98ರಷ್ಟು ಚಾಲಕರು ಕೂಲಿಂಗ್ ಪೇಪರ್ ತೆಗೆಸಿದ್ದು, ಈ ಬಗ್ಗೆ ಅರಿವು ಮೂಡಿಸಲು ಹಲವು ಆಂದೋಲನಗಳನ್ನು ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.

 


`ನಿಯಮ ಉಲ್ಲಂಘಿಸಿ ಸಿಕ್ಕಿ ಬಿದ್ದ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಸಿಬ್ಬಂದಿ, ವಾಹನದ ಗಾಜಿಗೆ ಅಳವಡಿಸಿರುವ ಕೂಲಿಂಗ್ ಪೇಪರ್ ಅನ್ನು ಸಹ ಸ್ಥಳದಲ್ಲೇ ತೆಗೆಯುತ್ತಿದ್ದಾರೆ. ಚಾಲಕರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಇತ್ತೀಚೆಗೆ ಕಾರಿನ ಗಾಜಿಗೆ ಪರದೆಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಅಂತಹ ಚಾಲಕರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಎಚ್ಚರಿಕೆ ನೀಡಿದರು.
ಅಪರಾಧ ತಡೆಗಟ್ಟಲು ಸಹಕಾರಿ


`ಕೂಲಿಂಗ್ ಪೇಪರ್ ಅಳವಡಿಕೆಯಿಂದ ಅಪಹರಣ, ಅತ್ಯಾಚಾರ, ದರೋಡೆ ಸೇರಿದಂತೆ ವಾಹನದೊಳಗೆ ನಡೆಯುವ ಅಪರಾಧ ಚಟುವಟಿಕೆಗಳು ಜನರು ಮತ್ತು ಪೊಲೀಸರ ಗಮನಕ್ಕೆ ಬರುವುದಿಲ್ಲ. ದೆಹಲಿಯಲ್ಲಿ ಇತ್ತೀಚೆಗೆ ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೂ ಇದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.ಬಸ್‌ನ ಕಿಟಕಿ ಗಾಜು ಕಪ್ಪು ಬಣ್ಣದ್ದಾಗಿದ್ದರಿಂದ, ಒಳಗೆ ಅತ್ಯಾಚಾರ ನಡೆದಿರುವುದು ಪೊಲೀಸರ ಅಥವಾ ಸಾರ್ವಜನಿಕರ ಗಮನಕ್ಕೆ ಬಂದಂತಿಲ್ಲ. ಇಂತಹ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ'


- ಡಾ.ಎಂ.ಎ.ಸಲೀಂ, ಹೆಚ್ಚುವರಿ ಪೊಲೀಸ್ ಕಮಿಷನರ್, ನಗರ ಸಂಚಾರ ವಿಭಾಗ
ಕಾರಿನಲ್ಲೇ ನಡೆದಿತ್ತು ಪ್ರತಿಭಾ ಕೊಲೆ

ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಅವರು ಕ್ಯಾಬ್ ಚಾಲಕನಿಂದಲೇ ಅತ್ಯಾಚಾರಕ್ಕೀಡಾಗಿ, ಕೊಲೆಯಾಗಿದ್ದ ಘಟನೆ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ರಾತ್ರಿ ಪಾಳಿ ಕೆಲಸಕ್ಕೆ ಹೊರಟಿದ್ದ ಪ್ರತಿಭಾ, ಕುಮಾರಸ್ವಾಮಿ ಬಡಾವಣೆಯಲ್ಲಿರುವ ಮನೆಯಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಚೇರಿಗೆ ಕ್ಯಾಬ್‌ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಚಾಲಕ ಶಿವಕುಮಾರ್ ಮಾರ್ಗ ಬದಲಿಸಿ ಪ್ರತಿಭಾ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ. ಈ ದುರ್ಘಟನೆ 2005ರ ಡಿಸೆಂಬರ್ 13ರಂದು ನಡೆದಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ 2010ರಲ್ಲಿ ತೀರ್ಪು ನೀಡಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry