ಗುರುವಾರ , ಮೇ 13, 2021
16 °C

ಬಿಎಂಟಿಸಿ ಪ್ರಯಾಣ ದರ ಶೇ 16 ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಂಟಿಸಿ ಪ್ರಯಾಣ ದರ ಶೇ 16 ಹೆಚ್ಚಳ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹವಾನಿಯಂತ್ರಣ ರಹಿತ ಸಾಮಾನ್ಯ ಬಸ್ ಪ್ರಯಾಣ ದರದಲ್ಲಿ ಶನಿವಾರ ಶೇ 16ರಷ್ಟು ಏರಿಕೆ ಮಾಡಲಾಗಿದೆ.ಈ ಹಿಂದೆ ನಿತ್ಯ ಬಸ್ ಪಾಸ್ ದರ, ಹವಾನಿಯಂತ್ರಿತ ಬಸ್‌ಗಳ ಪ್ರಯಾಣ ದರ, ವಿದ್ಯಾರ್ಥಿ ಬಸ್ ಪಾಸ್ ದರದಲ್ಲಿ ಹೆಚ್ಚಳ ಮಾಡಲಾಗಿತ್ತು. ಸಾಮಾನ್ಯ ಸೇವೆಯ ದರದಲ್ಲಿ ಹೆಚ್ಚಳ ಮಾಡಿರಲಿಲ್ಲ. ಡೀಸೆಲ್ ದರ ಏರಿಕೆ ಹಾಗೂ ಸಿಬ್ಬಂದಿಯ ವೇತನ ಹೆಚ್ಚಳದ ಕಾರಣ ನೀಡಿ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿದೆ. ಶನಿವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ.`ಪ್ರಯಾಣ ದರ ಏರಿಕೆ ಅನಿವಾರ್ಯವಾಗಿತ್ತು. ಕಳೆದ ಆರೇಳು ತಿಂಗಳಿಂದ ಸಾಮಾನ್ಯ ಸೇವೆಗಳ ದರ ಏರಿಕೆ ಮಾಡಿರಲಿಲ್ಲ. ರಾಜ್ಯ ಸರ್ಕಾರಕ್ಕೆ ಎರಡು-ಮೂರು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಒಪ್ಪಿಗೆ ಸಿಕ್ಕಿರಲಿಲ್ಲ. ಈಗ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇನ್ನು ಏಳೆಂಟು ತಿಂಗಳು ದರ ಏರಿಕೆ ಮಾಡುವುದಿಲ್ಲ' ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ `ಪ್ರಜಾವಾಣಿ'ಗೆ ತಿಳಿಸಿದರು.`ಡೀಸೆಲ್ ಆರು ತಿಂಗಳಲ್ಲಿ ಐದು ಬಾರಿ ಏರಿಕೆ ಆಗಿದೆ. ಡಿಎ ಶೇ 33ಕ್ಕೆ ಹೆಚ್ಚಿದೆ. ವೇತನದಲ್ಲೂ ಹೆಚ್ಚಳ ಮಾಡಲಾಗಿದೆ. ಎಚ್‌ಆರ್‌ಎ ಶೇ 25-30ರಷ್ಟು ಜಾಸ್ತಿ ಆಗಿದೆ. ಈ ಎಲ್ಲ ಕಾರಣಗಳಿಂದ ಸಂಸ್ಥೆ ಕಳೆದ ಆರು ತಿಂಗಳಲ್ಲಿ ರೂ147 ಕೋಟಿ ನಷ್ಟ ಅನುಭವಿಸಿದೆ. ಶೇ 16 ದರ ಹೆಚ್ಚಳದಿಂದ ಸಂಸ್ಥೆಗೆ ರೂ 114 ಕೋಟಿ ಆದಾಯ ಬರಲಿದೆ' ಎಂದು ಅವರು ತಿಳಿಸಿದರು.`ಈ ಹಿಂದೆ ಹವಾನಿಯಂತ್ರಿತ ಬಸ್‌ಗಳ ದರ ಏರಿಕೆ ಮಾಡಲಾಗಿದೆ. ಬಸ್ ಪಾಸ್ ಹಾಗೂ ವಿದ್ಯಾರ್ಥಿ ಪಾಸ್ ದರ ಹೆಚ್ಚಿಸಲಾಗಿದೆ. ಈ ಮೂಲಕ ಸಂಸ್ಥೆಗೆ 80 ಕೋಟಿ ಆದಾಯ ಬರುತ್ತಿದೆ. ಬೆಲೆ ಏರಿಕೆಯಿಂದ ಸಂಸ್ಥೆಗೆ ಒಟ್ಟು ರೂ 200 ಕೋಟಿ ಆದಾಯ ಬರಲಿದೆ. ಆದರೂ, ಸಂಸ್ಥೆ ವಾರ್ಷಿಕ ರೂ 50 ಕೋಟಿಯಷ್ಟು ನಷ್ಟ ಅನುಭವಿಸಲಿದೆ. ಸಂಸ್ಥೆಯ ಕಾರ್ಯದಕ್ಷತೆಯನ್ನು ಹೆಚ್ಚಿಸಿ ನಷ್ಟವನ್ನು ಸರಿದೂಗಿಸಲಾಗುವುದು. ಎಲ್ಲ ನಷ್ಟವನ್ನು ಪ್ರಯಾಣಿಕರ ಮೇಲೆ ಹೇರಲು ಆಗುವುದಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.`ಈ ದರ ಏರಿಕೆ ಬಡ ಹಾಗೂ ಮಧ್ಯಮವರ್ಗದವರಿಗೆ ದೊಡ್ಡ ಹೊಡೆತ. ಪೆಟ್ರೋಲ್ ದರ ತಿಂಗಳಿಗೊಮ್ಮೆ ಏರಿಕೆಯಾಗುತ್ತಿದೆ. ದ್ವಿಚಕ್ರ ವಾಹನ ಬಳಕೆ ಕಡಿಮೆ ಮಾಡಿ ಬಸ್ ಪ್ರಯಾಣ ಜಾಸ್ತಿ ಮಾಡಿದ್ದೆ. ಈಗ ಶೇ 16ರಷ್ಟು ಏರಿಸಿದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಈಗ ಮತ್ತೊಂದು ಆಘಾತ. ನೂತನ ಸರ್ಕಾರ ಅಧಿಕಾರ ಸ್ವೀಕರಿಸಿದ ತಿಂಗಳಲ್ಲೇ ಬೆಲೆ ಏರಿಕೆ ಮಾಡಲಾಗಿದೆ' ಎಂದು ಖಾಸಗಿ ಕಂಪೆನಿಯ ನೌಕರರಾದ ಕೃತಿಕಾ ಕಿಡಿಕಾರಿದರು.`ಡೀಸೆಲ್ ದರ ಹಾಗೂ ಕಾರ್ಯಾಚರಣೆ ವೆಚ್ಚ ಹೆಚ್ಚಳ ಎಂಬುದು ನೆಪ ಮಾತ್ರ. ಸಂಸ್ಥೆಯ ಕಾರ್ಯಕ್ಷಮತೆ ಹೆಚ್ಚಿಸಿದರೆ ನಷ್ಟವನ್ನು ಸರಿದೂಗಿಸಬಹುದು. ಪ್ರಯಾಣ ದರ ಏರಿಕೆಗೆ ಮಾತ್ರ ಸಂಸ್ಥೆ ಗಮನ ನೀಡುತ್ತಿದೆ. ಬಸ್‌ಗಳ ಸ್ಥಿತಿ ನೋಡಿದರೆ ದೇವರಿಗೇ ಪ್ರೀತಿ. ಸಾಮಾನ್ಯ ಜನರು ಡಕೋಟಾ ಬಸ್‌ಗಳಲ್ಲೇ ಪ್ರಯಾಣಿಸಬೇಕಿದೆ. ಜನರ ಸಂಕಷ್ಟ ಸಂಸ್ಥೆಗೆ ಏಕೆ ಅರ್ಥವಾಗುತ್ತಿಲ್ಲ' ಎಂದು ಐಟಿ ಕಂಪೆನಿಯ ನೌಕರ ಸುಧೀಂದ್ರ ಪ್ರಶ್ನಿಸಿದರು.ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.