ಶನಿವಾರ, ಮೇ 15, 2021
23 °C

ಬಿಎಂಟಿಸಿ ವರ್ಕ್‌ಶಾಪ್‌ನಲ್ಲಿ ಬೆಂಕಿ ಆಕಸ್ಮಿಕ:ನಾಲ್ಕು ವೋಲ್ವೊ ಬಸ್‌ಗಳು ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:ಶಾಂತಿನಗರದ ಬಿಎಂಟಿಸಿ ವರ್ಕ್‌ಷಾಪ್‌ನಲ್ಲಿ ಶನಿವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ನಾಲ್ಕು ವೋಲ್ವೊ ಬಸ್‌ಗಳು ಬೆಂಕಿಗೆ ಆಹುತಿಯಾಗಿವೆ.ಘಟನೆಯಲ್ಲಿ ಎರಡು ಬಸ್‌ಗಳು ಸಂಪೂರ್ಣ ಸುಟ್ಟು ಹೋಗಿವೆ. ಇನ್ನೆರಡು ಬಸ್‌ಗಳು ಬಾಗಶಃ  ಹಾನಿಗೊಳಗಾಗಿವೆ. ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಘಟನೆ ಸಂಭವಿಸಿರಬಹುದು ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದರು.ಸಾಮರ್ಥ್ಯ ಪರೀಕ್ಷೆಗೆಂದು ವರ್ಕ್‌ಷಾಪ್‌ಗೆ ಬಂದಿದ್ದ ವೋಲ್ವೊ ಬಸ್‌ಗಳಲ್ಲಿ ಒಂದು ಬಸ್‌ಗೆ ಶಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ನಂತರ ಪಕ್ಕದಲ್ಲೇ ಇದ್ದ ಇನ್ನೂ ಮೂರು ಬಸ್‌ಗಳಿಗೆ ಬೆಂಕಿ ಹಬ್ಬಿದೆ. ಸುದ್ದಿ ತಿಳಿದ ಕೂಡಲೇ ಆರು ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.`ಕಳೆದ ಎರಡು ವರ್ಷಗಳಿಂದ ಸುಮಾರು ಒಂದು ಸಾವಿರ ಬಸ್‌ಗಳು ಸಾಮರ್ಥ್ಯ ಪರೀಕ್ಷೆಗೆಂದು ಶಾಂತಿನಗರದ ವರ್ಕ್‌ಷಾಪ್‌ಗೆ ಬಂದಿವೆ. ಈ ತಿಂಗಳು ಮತ್ತೆ 260 ಬಸ್‌ಗಳು ಪರೀಕ್ಷೆಗೆ ಬರಲಿವೆ.  ಹೀಗಾಗಿ ವರ್ಕ್‌ಷಾಪ್‌ನಲ್ಲಿ ಬಸ್‌ಗಳ ದಟ್ಟಣೆ ಹೆಚ್ಚಾಗಿದ್ದು, ಬಸ್‌ಗಳನ್ನು ನಿಲ್ಲಿಸಲು ಜಾಗವಿಲ್ಲದಂತಾಗಿದೆ.ಆದ್ದರಿಂದ ಪರ್ಯಾಯ ವ್ಯವಸ್ಥೆಗೆ ಪ್ರತಿ ವಲಯದಲ್ಲೂ ವರ್ಕ್‌ಷಾಪ್‌ಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ~ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ದಾರೆ. `ಘಟನೆ ಸಂಬಂಧ ಭದ್ರತೆ ಮತ್ತು ವಿಚಕ್ಷಣ ದಳದ ನಿರ್ದೇಶಕರಾದ ಬಿ.ಕೆ.ಸಿಂಗ್ ಅವರಿಗೆ ತನಿಖೆ ಕೈಗೊಂಡು ವರದಿ ಕೊಡುವಂತೆ ಮನವಿ ಮಾಡಿದ್ದೇವೆ. ವರದಿ ಬಂದ ನಂತರ ಘಟನೆಗೆ ಕಾರಣ ತಿಳಿದು ಬರಲಿದೆ~ ಎಂದು ಅವರು ಹೇಳಿದರು. ಘಟನೆ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಮತ್ತೊಂದು ಅಗ್ನಿ ದುರಂತ:  ನಗರದಲ್ಲಿ ಶನಿವಾರ ಸಂಭವಿಸಿದ ಮತ್ತೊಂದು ಅಗ್ನಿ ದುರಂತದಲ್ಲಿ ಎಂಟು ಕಾರುಗಳು ಸುಟ್ಟು ಹೋಗಿವೆ.ಬಾಗಲಗುಂಟೆಯ ಬಿಬಿಎಂಪಿ ಕಚೇರಿ ಪಕ್ಕದಲ್ಲಿರುವ ಗ್ಯಾರೇಜ್‌ನಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ದಟ್ಟ ಹೊಗೆಯನ್ನು ಕಂಡು ಆತಂಕಗೊಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಐದು ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಗ್ಯಾರೇಜ್‌ನಲ್ಲಿದ್ದ ಎಂಟು ಹಳೆಯ ಕಾರುಗಳು ಸುಟ್ಟು ಹೋಗಿವೆ. ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಘಟನೆ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.