ಬಿಎಫ್‌ಸಿ- ಬಾಗನ್‌ ಪಂದ್ಯ ಡ್ರಾ

7
ಐ-ಲೀಗ್‌ ಫುಟ್‌ಬಾಲ್‌: ಚೊಚ್ಚಲ ಪಂದ್ಯದಲ್ಲಿ ಗಮನ ಸೆಳೆದ ಬೆಂಗಳೂರಿನ ತಂಡ

ಬಿಎಫ್‌ಸಿ- ಬಾಗನ್‌ ಪಂದ್ಯ ಡ್ರಾ

Published:
Updated:
ಬಿಎಫ್‌ಸಿ- ಬಾಗನ್‌ ಪಂದ್ಯ ಡ್ರಾ

ಬೆಂಗಳೂರು: ಐ-ಲೀಗ್‌ ಫುಟ್‌ಬಾಲ್‌ ಟೂರ್ನಿಗೆ ಹೊಸದಾಗಿ ಸೇರಿಕೊಂಡಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತನ್ನ ಮೊದಲ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ ನೀಡಿದೆ.ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ ಕೋಲ್ಕತ್ತದ ಪ್ರಬಲ ತಂಡ ಮೋಹನ್‌ ಬಾಗನ್‌ ಜೊತೆ 1-1 ಗೋಲಿನ ಡ್ರಾ ಸಾಧಿಸಿತು.ಪ್ರಸಕ್ತ ಐ-ಲೀಗ್‌ ಋತುವಿನ ಮೊದಲ ಪಂದ್ಯ ವೀಕ್ಷಿಸಲು ಕ್ರೀಡಾಂಗಣದಲ್ಲಿ ಆರು ಸಾವಿರಕ್ಕೂ ಅಧಿಕ ಪ್ರೇಕ್ಷಕರು ನೆರೆದಿದ್ದರು. ಪಂದ್ಯದ ಮೊದಲ ಅವಧಿ ಗೋಲುರಹಿತವಾಗಿತ್ತು. 49ನೇ ನಿಮಿಷದಲ್ಲಿ ಸೀನ್‌ ರೂನಿ ಗೋಲು ಗಳಿಸಿ ಬಿಎಫ್‌ಸಿಗೆ ಮುನ್ನಡೆ ತಂದಿತ್ತರು. ಆದರೆ ‘ಇಂಜುರಿ’ ಅವಧಿಯಲ್ಲಿಸಿ.ಎಸ್‌. ಸಬೀತ್‌ ಆಕರ್ಷಕ ಹೆಡರ್‌ ಮೂಲಕ ಚೆಂಡನ್ನು ಗುರಿ ಸೇರಿಸಿ ಬಾಗನ್‌ ತಂಡವನ್ನು ಸೋಲಿನಿಂದ ಪಾರುಮಾಡಿದರು.ಈ ಪಂದ್ಯದಲ್ಲಿ ಎರಡೂ ತಂಡಗಳಿಗೆ ತಲಾ ಒಂದು ಪೆನಾಲ್ಟಿ ಕಿಕ್‌ ಅವಕಾಶ ಲಭಿಸಿದ್ದವು. ಆದರೆ ಉಭಯ ತಂಡಗಳೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾದವು.ಬಿಎಫ್‌ಸಿ ಕೋಚ್‌ ಆ್ಯಶ್ಲೆ ವೆಸ್ಟ್‌ವುಡ್‌ ಸ್ಟಾರ್‌ ಸ್ಟ್ರೈಕರ್‌ಗಳಾದ ಸುನಿಲ್‌ ಚೆಟ್ರಿ ಹಾಗೂ ರಾಬಿನ್‌ ಸಿಂಗ್‌ ಅವರನ್ನು ಮೊದಲ ಇಲೆವೆನ್‌ನಲ್ಲಿ ಕಣಕ್ಕಿಳಿಸಲಿಲ್ಲ. ಇದು ನೆರೆದ ಪ್ರೇಕ್ಷಕರಿಗೆ ಅಚ್ಚರಿ ಉಂಟುಮಾಡಿದ್ದು ನಿಜ.ಎಂಟನೇ ನಿಮಷದಲ್ಲಿ ಬಾಗನ್‌ಗೆ ಪೆನಾಲ್ಟಿ ಅವಕಾಶ ಲಭಿಸಿತು. ಕೀಗನ್ ಪೆರೇರಾ ಅವರು ಎದುರಾಳಿ ತಂಡದ ಕತ್ಸುಮಿ ಯುಸಾ ಅವರನ್ನು ಕೆಳಕ್ಕೆ ಬೀಳಿಸಿದ್ದಕ್ಕೆ ರೆಫರಿ ಪೆನಾಲ್ಟಿ ವಿಧಿಸಿದರು. ಆದರೆ ಕತ್ಸುಮಿ ಒದ್ದ ಚೆಂಡನ್ನು ಗೋಲ್‌ಕೀಪರ್‌ ಪವನ್‌ ಕುಮಾರ್‌ ತಮ್ಮ ಬಲಭಾಗಕ್ಕೆ ನೆಗೆದು ಆಕರ್ಷಕ ರೀತಿಯಲ್ಲಿ ತಡೆದರು. ನೆರೆದ ಪ್ರೇಕ್ಷಕರು ಈ ವೇಳೆ ನಿಟ್ಟುಸಿರುಬಿಟ್ಟರು.ಎರಡೂ ತಂಡಗಳು ಪರಿಸ್ಥಿತಿಗೆ ಹೊಂದಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಂಡವು. ಈ ಕಾರಣ ಮೊದಲ ಅವಧಿಯ ಆಟ ನೀರಸವಾಗಿ ಕಂಡುಬಂತು. ವಿರಾಮದ ಬಳಿಕ ತುರುಸಿನ ಪೈಪೋಟಿ ಕಂಡುಬಂತು. ಎರಡನೇ ಅವಧಿಯ ನಾಲ್ಕನೇ ನಿಮಿಷದಲ್ಲಿ ಬಿಎಫ್‌ಸಿ ಮುನ್ನಡೆ ಸಾಧಿಸಿತು. ವಿಶಾಲ್‌ ಕುಮಾರ್‌ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಆಸ್ಟ್ರೇಲಿಯದ ಸ್ಟ್ರೈಕರ್ ರೂನಿ ಯಶಸ್ವಿಯಾಗಿ ಗುರಿ ಸೇರಿಸಿದರು.ಇದಾದ ಎರಡು ನಿಮಿಷಗಳ ಬಳಿಕ ಬೆಂಗಳೂರಿನ ತಂಡಕ್ಕೆ ಪೆನಾಲ್ಟಿ ಕಿಕ್‌ ಅವಕಾಶ ಲಭಿಸಿತು. ಆದರೆ ರೂನಿ ಒದ್ದ ಚೆಂಡನ್ನು ಬಾಗನ್ ಗೋಲ್‌ಕೀಪರ್‌ ಸಂದೀಪ್‌ ನಂದಿ ಸೊಗಸಾದ ರೀತಿಯಲ್ಲಿ ಹಿಡಿತಕ್ಕೆ ಪಡೆದುಕೊಂಡರು.ಈ ನಿರಾಸೆಯನ್ನು ಮರೆತು ಬಿಎಫ್‌ಸಿ ಹೋರಾಟ ಮುಂದುವರಿಸಿತು. ವೆಸ್ಟ್‌ವುಡ್‌ 55ನೇ ನಿಮಿಷದಲ್ಲಿ ಚೆಟ್ರಿ ಅವರನ್ನು ಕಣಕ್ಕಿಳಿಸಿದರು. ಭಾರತ ತಂಡದ ನಾಯಕ ಹಲವು ಸಲ ಎದುರಾಳಿ ಡಿಫೆಂಡರ್‌ಗಳಿಗೆ ತಲೆನೋವಾಗಿ ಪರಿಣಮಿಸಿದರು. ಆದರೆ ಆಟಗಾರರ ನಡುವಿನ ಹೊಂದಾಣಿಕೆಯ ಕೊರತೆಯಿಂದ ಗೋಲು ಬರಲಿಲ್ಲ. 82ನೇ ನಿಮಿಷದಲ್ಲಿ ರಾಬಿನ್‌ ಸಿಂಗ್‌ ಅಂಗಳಕ್ಕಿಳಿದರು.ಪ್ರೇಕ್ಷಕರು ಬಿಎಫ್‌ಸಿ ತಂಡದ ಗೆಲುವನ್ನು ಹೆಚ್ಚುಕಡಿಮೆ ಖಚಿತಪಡಿಸಿದ್ದ ಸಂದರ್ಭ ಬಾಗನ್‌ ಸಮಬಲದ ಗೋಲು ಗಳಿಸಿತು.  ಡೆನ್ಸನ್‌ ದೇವದಾಸ್‌ ಅವರು ಕಾರ್ನರ್‌ ಕಿಕ್‌ನಲ್ಲಿ ಒದ್ದ ಚೆಂಡನ್ನು ಸಬೀತ್‌ ಹೆಡ್‌ ಮಾಡಿ ನೆಟ್‌ನೊಳಕ್ಕೆ ಕಳುಹಿಸುವಲ್ಲಿ ಯಶಸ್ವಿಯಾದರು.

ಬಿಎಫ್‌ಸಿ ಸೆ. 29 ರಂದು ಇದೇ ತಾಣದಲ್ಲಿ ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ರಂಗ್‌ದಜೀದ್‌ ಯುನೈಟೆಡ್‌ ವಿರುದ್ಧ ಪೈಪೋಟಿ ನಡೆಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry