ಮಂಗಳವಾರ, ಜನವರಿ 21, 2020
27 °C

ಬಿಎಸಿಗೊಂದು ಮಹತ್ವದ ಹೊಣೆ

ಕೆ.ಓಂಕಾರ ಮೂರ್ತಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಂಡನ್ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಭಾರತದ ಈಜುಪಟುಗಳಿಗೆ ತರಬೇತಿ ನೀಡಲು ಕೇಂದ್ರ ಕ್ರೀಡಾ ಸಚಿವಾಲಯ ಬಸವನಗುಡಿ ಈಜು ಕೇಂದ್ರವನ್ನು (ಬಿಎಸಿ) ಆಯ್ಕೆ ಮಾಡಿದೆ.ಈ ವಿಷಯವನ್ನು ರಾಷ್ಟ್ರೀಯ ಈಜು ತರಬೇತುದಾರ ಪ್ರದೀಪ್ ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ. ಈ ಅವಕಾಶ ಕರ್ನಾಟಕಕ್ಕೆ ಇದೇ ಮೊದಲ ಬಾರಿ ಲಭಿಸಿದೆ. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಪ್ರತಿಷ್ಠಿತ ಬಸವನಗುಡಿ ಕೇಂದ್ರಕ್ಕೆ ಈ ಅವಕಾಶ ಮತ್ತಷ್ಟು ಸಂಭ್ರಮ ಉಂಟು ಮಾಡಿದೆ.`ಇದೇ ಮೊದಲ ಬಾರಿಗೆ ಈ ಮಹತ್ವದ ಹೊಣೆ ನಮಗೆ ಲಭಿಸಿದೆ. ಕೆಲ ದಿನಗಳ ಹಿಂದೆ ಕೇಂದ್ರ ಕ್ರೀಡಾ ಸಚಿವಾಲಯ ಈ ಸಂಬಂಧ ನಮಗೆ ಪತ್ರ ಬರೆದಿದೆ. ಒಲಿಂಪಿಕ್ಸ್ ಅರ್ಹತಾ ಸುತ್ತಿನ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ತೆರಳಲಿರುವ ಈಜುಪಟುಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತಿದೆ~ ಎಂದು `ಬಿಎಸಿ~ ಮುಖ್ಯ ಕೋಚ್ ಕೂಡ ಆಗಿರುವ ಪ್ರದೀಪ್ ಹೇಳಿದ್ದಾರೆ.ಈಗಾಗಲೇ ತರಬೇತಿ ಶುರುವಾಗಿದ್ದು, 11 ಮಂದಿ ಈಜುಪಟುಗಳು ಹಾಗೂ ಇಬ್ಬರು ಪ್ಯಾರಾಲಿಂಪಿಕ್ಸ್ ಈಜುಪಟುಗಳು ಪಾಲ್ಗೊಂಡಿದ್ದಾರೆ. ಪ್ರದೀಪ್ ಹಾಗೂ ಮತ್ತೊಬ್ಬ ಕೋಚ್ ನಿಹಾರ್ ಅಮೀನ್ ತರಬೇತಿ ನೀಡುತ್ತಿದ್ದಾರೆ.`ಹೆಚ್ಚಿನ ಈಜುಪಟುಗಳು ಸದಾ ಬೆಂಗಳೂರಿನಲ್ಲಿಯೇ ತರಬೇತಿ ಪಡೆಯುತ್ತಾರೆ. ಕಾರಣ ಇಲ್ಲಿರುವ ಅತ್ಯುತ್ತಮ ಸೌಲಭ್ಯ. ಹಾಗೇ, ಈಜು ವಿಭಾಗದಲ್ಲಿ ಭಾರತದಿಂದ ಇದುವರೆಗೆ ಯಾರೂ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಲ್ಲ. ಕೆಲವರು `ಬಿ~ ಅರ್ಹತೆ ಗಿಟ್ಟಿಸಿದ್ದಾರೆ. ಅವರಿನ್ನೂ `ಎ~ ದರ್ಜೆಯ ಅರ್ಹತೆ ಮಟ್ಟ ಪಡೆಯಬೇಕು. ಆದರೆ ಆ ಮಟ್ಟವನ್ನು ತಲುಪುತ್ತಾರೆ ಎಂಬ ವಿಶ್ವಾಸವಿದೆ~ ಎಂದೂ ಅವರು ನುಡಿದಿದ್ದಾರೆ.ವೀರ್‌ಧವಳ್ ಖಾಡೆ (100 ಮೀ. ಫ್ರೀಸ್ಟೈಲ್) ಹಾಗೂ ಸಂದೀಪ್ ಸೆಜ್ವಾಲ್ (100 ಮೀ.ಬ್ರೆಸ್ಟ್ ಸ್ಟ್ರೋಕ್) `ಬಿ~ ಅರ್ಹತೆ ಪಡೆದ ಈಜುಪಟುಗಳು. ಒಲಿಂಪಿಕ್ಸ್ ಅರ್ಹತೆ ಪಡೆಯಲು ಜೂನ್ ಒಂದರವರೆಗೆ ಅವಕಾಶವಿದೆ. ಖಾಡೆ, ಸೆಜ್ವಾಲ್, ರೆಹಾನ್ ಪೂಂಚಾ, ಆ್ಯರನ್ ಡಿಸೋಜಾ ಹಾಗೂ ರಿಚಾ ಮಿಶ್ರಾ ಅವರ ಮೇಲೆ ಭರವಸೆ ಇಡಲಾಗಿದೆ. ಲಂಡನ್ ಒಲಿಂಪಿಕ್ಸ್ ಜುಲೈ 27ರಿಂದ ಆಗಸ್ಟ್ 12ರವರೆಗೆ ಜರುಗಲಿದೆ.ಬಸವನಗುಡಿ ಕೇಂದ್ರ 25ನೇ ವರ್ಷದ ಸಂಭ್ರಮ ಆಚರಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪ್ರದೀಪ್, `ನಾವು ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ರಾಷ್ಟ್ರೀಯ ಚಾಂಪಿಯನ್‌ಷಿಪ್ ಆಯೋಜನೆ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಈಜುಪಟು ಒಬ್ಬರನ್ನು ಆಹ್ವಾನಿಸಲಿದ್ದೇವೆ. ಜೊತೆಗೆ ಈಗಿರುವ ಈಜುಕೊಳವನ್ನು ಅಂತರರಾಷ್ಟ್ರೀಯ ದರ್ಜೆಗೇರಿಸಲಿದ್ದೇವೆ~ ಎಂದರು.

 

ಪ್ರತಿಕ್ರಿಯಿಸಿ (+)