ಸೋಮವಾರ, ಏಪ್ರಿಲ್ 19, 2021
29 °C

ಬಿಎಸ್‌ಎಫ್ ಯೋಧರಿಂದ ರಾಜ್ಯ ಪೊಲೀಸರಿಗೆ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಕ್ಸಲ್ ಚಟುವಟಿಕೆ ಹತ್ತಿಕ್ಕಲು ರಾಜ್ಯ ಪೊಲೀಸರಿಗೆ ಗಡಿ ಭದ್ರತಾ ದಳದ (ಬಿಎಸ್‌ಎಫ್) ಯೋಧರಿಂದ ತರಬೇತಿ ನೀಡಲಾಗುವುದು~ ಎಂದು ಉಪಮುಖ್ಯಮಂತ್ರಿ ಆರ್.ಅಶೋಕ ಹೇಳಿದರು.ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ `ಗುಲ್ಬರ್ಗ, ಬಳ್ಳಾರಿ, ಬೆಳಗಾವಿ ಜಿಲ್ಲೆಗಳಲ್ಲಿ ಸರ್ವೈಲೆನ್ಸ್ ಕ್ಯಾಮೆರಾಗಳ ಅಳವಡಿಕೆ ಮತ್ತು ಬ್ಲ್ಯಾಕ್‌ಬೆರಿ ತಂತ್ರಜ್ಞಾನದ ಜಾರಿ~ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. `ಭಯೋತ್ಪಾದನೆ, ನಕ್ಸಲ್ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ನಕ್ಸಲರ ವಿರುದ್ಧ ಹೋರಾಡಲು ರಾಜ್ಯದ ಪೊಲೀಸರಿಗೆ ವ್ಯವಸ್ಥಿತ ತರಬೇತಿ ಸಿಗುತ್ತಿಲ್ಲ. ಆದ್ದರಿಂದ ಗಡಿ ಭದ್ರತಾ ದಳದ (ಬಿಎಸ್‌ಎಫ್) ಯೋಧರಿಂದ ಪೊಲೀಸ್ ಇಲಾಖೆಯ ಕೆಲ ಆಯ್ದ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಈ ಮನವಿಯನ್ನು ಬಿಎಸ್‌ಎಫ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಬಿಎಸ್‌ಎಫ್ ಪಡೆಯು ರಾಜ್ಯದಲ್ಲೇ ಉತ್ತಮ ತರಬೇತಿ ಕೇಂದ್ರವಾಗಿದ್ದು, ಪೊಲೀಸ್ ಸಿಬ್ಬಂದಿಗೆ ಅವರ ಮಾರ್ಗದರ್ಶನದ ಅಗತ್ಯವಿದೆ~ ಎಂದು ಅವರು ತಿಳಿಸಿದರು.`ನಕ್ಸಲರು ಸಣ್ಣ ಸಣ್ಣ ಗುಂಪುಗಳನ್ನು ಮಾಡಿಕೊಂಡು ರಾಜ್ಯದ ನಾನಾ ಭಾಗಗಳಲ್ಲಿ ನೆಲೆಸಿದ್ದಾರೆ. ನಕ್ಸಲ್ ಚಟುವಟಿಕೆಗಳಲ್ಲಿ ರಾಜ್ಯದ ನಾಗರಿಕರು ಪಾಲ್ಗೊಳ್ಳುತ್ತಿಲ್ಲ. ಈ ಕಾರಣಕ್ಕೆ ನೆರೆ ರಾಜ್ಯಗಳಿಂದ ನಕ್ಸಲರನ್ನು ಬಾಡಿಗೆ ಪಡೆಯಲಾಗುತ್ತಿದೆ. ಈಗ ಮಳೆಗಾಲವಾಗಿರುವುದರಿಂದ ನಕ್ಸಲ್ ಚಟುವಟಿಕೆ ಕಡಿಮೆಯಾಗಿದೆ.ಹಾಗೆಂದು ಸರ್ಕಾರ ಸುಮ್ಮನೆ ಕೂರಲು ಸಾಧ್ಯವಿಲ್ಲ. ನಕ್ಸಲ್ ಚಟುವಟಿಕೆಯನ್ನು ನಿಯಂತ್ರಿಸಲು ಶಸ್ತ್ರಾಸ್ತ್ರ ಹಿಡಿದು ಹೋರಾಟ ಮಾಡಬೇಕಾಗಿಲ್ಲ. ನಕ್ಸಲರು ತಮ್ಮ ಚಟುವಟಿಕೆಗಳನ್ನು ನಿಲ್ಲಿಸಿ, ಶರಣಾದರೆ ಅವರ ಸಮಸ್ಯೆಗಳನ್ನು ಈಡೇರಿಸಲು ಸರ್ಕಾರ ಸಿದ್ಧವಿದೆ~ ಎಂದು ಭರವಸೆ ನೀಡಿದರು.ಪೊಲೀಸ್ ವೈಫಲ್ಯವಿಲ್ಲ: ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ, `ಘಟನೆ ನಡೆದ ಎಂಟು ಗಂಟೆಯಲ್ಲಿಯೇ ಪೊಲೀಸರು 15 ಆರೋಪಿಗಳನ್ನು ಬಂಧಿಸಿದ್ದರು. ಈಗ ಬಂಧಿತರ ಸಂಖ್ಯೆ 23ಕ್ಕೆ ಏರಿದೆ.ಕೆಲವೊಂದು ಒತ್ತಡದ ನಡುವೆಯೂ ಪೊಲೀಸರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇದರಲ್ಲಿ ಪೊಲೀಸ್ ವೈಫಲ್ಯದ ಪ್ರಶ್ನೆಯೇ ಇಲ್ಲ~ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.