ಬಿಎಸ್‌ವೈಗೆ ಜೈ-ಧಿಕ್ಕಾರ ಆಲಿಸಿದ ಜೇಟ್ಲಿ

7

ಬಿಎಸ್‌ವೈಗೆ ಜೈ-ಧಿಕ್ಕಾರ ಆಲಿಸಿದ ಜೇಟ್ಲಿ

Published:
Updated:

ಬೆಂಗಳೂರು: ಖಾಸಗಿ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿರುವ ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ, ಪಕ್ಷದ ಕಚೇರಿಯಲ್ಲಿ ಮಂಗಳವಾರ ಎರಡು ಗಂಟೆಗೂ ಹೆಚ್ಚು ಕಾಲ ಇದ್ದು, ಬಿಜೆಪಿ ರಾಜ್ಯ ಘಟಕದಲ್ಲಿನ ಇತ್ತೀಚಿನ ವಿದ್ಯಮಾನಗಳ ಕುರಿತು ಪ್ರಮುಖರಿಂದ ಮಾಹಿತಿ ಪಡೆದರು.`ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷ ತೊರೆಯದಂತೆ ಕ್ರಮ ಕೈಗೊಳ್ಳಿ~ ಎಂದು ಕೆಲವರು ಮನವಿ ಮಾಡಿದರೆ, ಇನ್ನು ಕೆಲವರು `ಯಡಿಯೂರಪ್ಪ ಪಕ್ಷ ಬಿಟ್ಟರೂ ಪರವಾಗಿಲ್ಲ. ಪಕ್ಷಕ್ಕೆ ಆದಷ್ಟು ಬೇಗ ಹೊಸ ಅಧ್ಯಕ್ಷರನ್ನು ನೇಮಕ ಮಾಡಿ~ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.ಜೇಟ್ಲಿ ಅವರು ಮಧ್ಯಾಹ್ನ 12 ಗಂಟೆಯಿಂದ ಎರಡು ಗಂಟೆಯವರೆಗೆ ಪಕ್ಷದ ಕಚೇರಿಯಲ್ಲಿ ಉಪಸ್ಥಿತರಿದ್ದರು. ಯಡಿಯೂರಪ್ಪ ಅವರ ನಡೆ ಕುರಿತು ಪಕ್ಷದ ಮುಖಂಡರಿಂದ ಮಾಹಿತಿ ಸಂಗ್ರಹಿಸಿದರು. ಇದು ಪೂರ್ವನಿಯೋಜಿತ ಕಾರ್ಯಕ್ರಮ ಅಲ್ಲವಾದರೂ, ಕಚೇರಿಯಲ್ಲಿದ್ದವರ ಜತೆ ಜೇಟ್ಲಿ ಪ್ರತ್ಯೇಕ ಮಾತುಕತೆ ನಡೆಸಿದರು. ಉಪ ಮುಖ್ಯಮಂತ್ರಿ ಆರ್.ಅಶೋಕ, ಸಂಸದರಾದ ಅನಂತಕುಮಾರ್, ಡಿ.ಬಿ.ಚಂದ್ರೇಗೌಡ, ಪಿ.ಸಿ.ಮೋಹನ್, ಸಚಿವ ಅರವಿಂದ ಲಿಂಬಾವಳಿ ಸೇರಿ ಇತರರು ಹಾಜರಿದ್ದರು. ರಾಷ್ಟ್ರೀಯ ಸೀನಿಯರ್ ಹಾಕಿ ಚಾಂಪಿಯನ್‌ಷಿಪ್‌ನ ಪೈನಲ್ ಪಂದ್ಯ ವೀಕ್ಷಣೆಗೆ ನಗರಕ್ಕೆ ಬಂದಿದ್ದ ಜೇಟ್ಲಿ ರಾತ್ರಿ ದೆಹಲಿಗೆ ವಾಪಸಾದರು.`ಸರಿಯಾದ ಪಾಠ ಕಲಿಸಿ~

`ಪಕ್ಷದ ವಿರುದ್ಧವೇ ಟೀಕೆ ಮಾಡಿದವರಿಗೆ ಸರಿಯಾದ ಪಾಠ ಕಲಿಸಬೇಕು. ಪಕ್ಷ ಒಮ್ಮೆ ಪಾತಾಳಕ್ಕೆ ಇಳಿದರೂ ಸರಿಯೇ ಕಠಿಣವಾದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು~ ಎಂದು ಇನ್ನೂ ಕೆಲವರು ಅಭಿಪ್ರಾಯಪಟ್ಟರು ಎನ್ನಲಾಗಿದೆ.`ಪಕ್ಷದ ವರಿಷ್ಠರ ವಿರುದ್ಧ ನಿತ್ಯ ಟೀಕೆ ಮಾಡುವ ಸಂಪ್ರದಾಯ ಹೊಸದಾಗಿ ಆರಂಭವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಇಡೀ ಪಕ್ಷವನ್ನು ಯಡಿಯೂರಪ್ಪ ಹೈಜಾಕ್ ಮಾಡಲಿದ್ದಾರೆ~ ಎಂದೂ ಕೆಲವರು ಜೇಟ್ಲಿ ಅವರಿಗೆ ವಿವರಿಸಿದರು ಎಂದು ಮೂಲಗಳು ತಿಳಿಸಿವೆ.ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಿದರೆ ಅನುಕೂಲ ಎಂಬುದರ ಬಗ್ಗೆಯೂ ಜೇಟ್ಲಿ ಅವರು ಅನಂತಕುಮಾರ್, ಪಕ್ಷದ ಸಂಘಟನಾ ಕಾರ್ಯದರ್ಶಿ ಸಂತೋಷ್ ಸೇರಿದಂತೆ ಇತರರ ಜತೆ ಮಾತುಕತೆ ನಡೆಸಿದರು. ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರದಾನ್ ಅವರೂ ಪಕ್ಷದಲ್ಲಿ ಕಚೇರಿಯಲ್ಲಿ ಹಾಜರಿದ್ದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗಕ್ಕೆ ತೆರಳಿದ್ದ ಕಾರಣ, ಮಾತುಕತೆಯಲ್ಲಿ ಪಾಲ್ಗೊಳ್ಳಲಿಲ್ಲ.

 

`ಯಡಿಯೂರಪ್ಪ ನಾಯಕರಾಗಲಿ~

ಸಂಸದ ಚಂದ್ರೇಗೌಡ ಅವರು `ಯಡಿಯೂರಪ್ಪ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸಿದರೆ ಯಾವ ತಪ್ಪೂ ಆಗುವುದಿಲ್ಲ. ಅವರು ಪಕ್ಷ ಬಿಡುವುದರಿಂದ ದೊಡ್ಡ ಅನಾಹುತ ಆಗುವುದು ಖಚಿತ~ ಎನ್ನುವ ಎಚ್ಚರಿಕೆಯನ್ನೂ ಜೇಟ್ಲಿ ಅವರಿಗೆ ನೀಡಿದರು ಎನ್ನಲಾಗಿದೆ. ಇತ್ತೀಚೆಗೆ ಯಡಿಯೂರಪ್ಪ ಅವರ ಪಾಳಯದಿಂದ ಸ್ವಲ್ಪ ದೂರವೇ ಉಳಿದಿದ್ದ ಚಂದ್ರೇಗೌಡರು ಪಕ್ಷದ ಹಿತದೃಷ್ಟಿಯಿಂದ ಯಾವ ತೀರ್ಮಾನ ತೆಗೆದುಕೊಂಡರೆ ಉತ್ತಮ ಎಂಬುದನ್ನು ಜೇಟ್ಲಿ ಅವರಿಗೆ ವಿವರಿಸಿದರು ಎಂದು ಮೂಲಗಳು ತಿಳಿಸಿವೆ.`ಚುನಾವಣೆ ಎಂಬ ಯುದ್ಧ ಮನೆಯ ಹೊಸ್ತಿಲಲ್ಲಿ ಬಂದು ನಿಂತಿದೆ. ಇಂತಹ ಸಂದರ್ಭದಲ್ಲಿ ಕೇವಲ ಅಭಿಪ್ರಾಯ ಸಂಗ್ರಹಿಸುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಬದಲಿಗೆ ಪಕ್ಷಕ್ಕೆ ಸಾರಥಿಯೊಬ್ಬರನ್ನು ಸೂಚಿಸಬೇಕು. ಆ ಕೆಲಸ ಆದಷ್ಟು ಬೇಗ ಆಗಲಿ~ ಎಂದೂ ಚಂದ್ರೇಗೌಡರು ಸಲಹೆ ನೀಡಿದರು ಎನ್ನಲಾಗಿದೆ.`ಯಡಿಯೂರಪ್ಪ ಮುನಿಸಿಕೊಂಡಿದ್ದಾರೆ. ಪಕ್ಷದ ವಿರುದ್ಧವೇ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಅವರನ್ನು ಕರೆದು ಮಾತುಕತೆ ನಡೆಸುವ ಸೌಜನ್ಯವನ್ನು ಪಕ್ಷ ತೋರಿಸಿಲ್ಲ. ಅಷ್ಟೂ ಮಾಡದೆ ಪಕ್ಷ ಉಳಿಸುವುದು ಹೇಗೆ? ಈ ಸನ್ನಿವೇಶದಲ್ಲಿ ಯಾರೇ ಪಕ್ಷ ತೊರೆದರೂ ನಷ್ಟವೇ. ಯಡಿಯೂರಪ್ಪ ಬಿಟ್ಟರಂತೂ ದೊಡ್ಡ ನಷ್ಟವೇ ಆಗುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟು ಕೊಂಡು ತೀರ್ಮಾನ ತೆಗೆದುಕೊಳ್ಳಬೇಕೆಂದರು~  ಎಂದು ಗೊತ್ತಾಗಿದೆ.ಬೆಂಬಲಿಗರ ಒತ್ತಾಯ

ಯಡಿಯೂರಪ್ಪ ಬೆಂಬಲಿಗ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಬಸವರಾಜ ಬೊಮ್ಮಾಯಿ ಅವರು ಜೇಟ್ಲಿ ಅವರನ್ನು ಹೋಟೆಲ್‌ನಲ್ಲಿ ಪ್ರತ್ಯೇಕವಾಗಿ ಭೇಟಿ ಮಾಡಿ ಯಡಿಯೂರಪ್ಪ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಆಗ್ರಹಪಡಿಸಿದರು. `ಯಡಿಯೂರಪ್ಪ ಪಕ್ಷಕ್ಕೆ ಅನಿವಾರ್ಯವಾಗಿದ್ದು, ಅವರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು~ ಎನ್ನುವ ಸಲಹೆ ನೀಡಿದರು ಎನ್ನಲಾಗಿದೆ.ಯಡಿಯೂರಪ್ಪ ಜತೆ ಗುರುತಿಸಿಕೊಂಡಿರುವ ಸಂಸದ ಪಿ.ಸಿ.ಮೋಹನ್ ಕೂಡ ಜೇಟ್ಲಿ ಅವರನ್ನು ಭೇಟಿ ಮಾಡಿ, ಪಕ್ಷದಗೊಂದಲಗಳನ್ನು ಬೇಗ ನಿವಾರಿಸಬೇಕು ಎಂದು ಮನವಿ ಮಾಡಿದರು ಎನ್ನಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry