ಬಿಎಸ್‌ವೈಗೆ ಸದ್ಯಕ್ಕೆ ಯಾವುದೇ ಹುದ್ದೆಯಿಲ್ಲ

7

ಬಿಎಸ್‌ವೈಗೆ ಸದ್ಯಕ್ಕೆ ಯಾವುದೇ ಹುದ್ದೆಯಿಲ್ಲ

Published:
Updated:

ಹುಬ್ಬಳ್ಳಿ: `ಆರೋಪದಿಂದ ಮುಕ್ತರಾಗದ ಹೊರತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಯಾವುದೇ ಹುದ್ದೆಯನ್ನು ನೀಡುವುದಿಲ್ಲ~ ಎಂದು ಬಿಜೆಪಿ ರಾಷ್ಟ್ರೀಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಎಂ. ವೆಂಕಯ್ಯ ನಾಯ್ಡು ಸ್ಪಷ್ಟವಾಗಿ ಹೇಳಿದರು.ಬಾದಾಮಿಯಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸಾದ ಅವರು, ವಿಶೇಷ ವಿಮಾನದಲ್ಲಿ ಹೈದರಾಬಾದ್‌ಗೆ ತೆರಳುವ ಮುನ್ನ ನಗರದಲ್ಲಿ ವರದಿಗಾರರ ಜತೆ ಮಾತನಾಡಿದರು.

`ಆರೋಪ ಬಂದುದರಿಂದಲೇ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾಯಿತು. ಆರೋಪಗಳಿಂದ ಅವರಿನ್ನೂ ಮುಕ್ತರಾಗಿಲ್ಲ. ಹೀಗಾಗಿ ಮರಳಿ ಅವರಿಗೆ ಯಾವುದೇ ಹುದ್ದೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಎಲ್ಲ ಆರೋಪಗಳಿಂದ ಮುಕ್ತರಾದ ನಂತರ ಅವರಿಗೆ ಯಾವ ಸ್ಥಾನ ನೀಡಬೇಕು ಎಂಬುದನ್ನು ನಿರ್ಧರಿಸಲಾಗುವುದು~ ಎಂದರು.`ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಸರ್ಕಾರವನ್ನು ಚೆನ್ನಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದು, ಅವರನ್ನು ಬದಲಿಸುವ ಪ್ರಸ್ತಾವ ಸದ್ಯ ಕೇಂದ್ರ ನಾಯಕತ್ವದ ಮುಂದೆ ಇಲ್ಲ~ ಎಂದು ಅವರು ಹೇಳಿದರು.

`ಸುಪ್ರೀಂ ಕೋರ್ಟ್ 2ಜಿ ತರಂಗಾಂತರಕ್ಕೆ ಸಂಬಂಧಿಸಿದಂತೆ 122 ಲೈಸನ್ಸ್‌ಗಳನ್ನು ರದ್ದುಗೊಳಿಸಿದೆ. ತರಂಗಾಂತರ ಹಂಚಿಕೆ ಅಸಂವಿಧಾನಾತ್ಮಕವಾಗಿ ನಡೆದಿದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಾದ ಪಿ.ಚಿದಂಬರಂ, ಕಪಿಲ್ ಸಿಬಲ್ ಮತ್ತಿತರರು ತಕ್ಷಣ ರಾಜೀನಾಮೆ ನೀಡಬೇಕು~ ಎಂದು ಅವರು ಆಗ್ರಹಿಸಿದರು.`ಕಳಂಕಿತ ಸಚಿವರು ಒಂದುವೇಳೆ ರಾಜೀನಾಮೆ ನೀಡದಿದ್ದರೆ ಅವರನ್ನು ಪ್ರಧಾನಿಯವರೇ ಸಂಪುಟದಿಂದ ಕಿತ್ತು ಹಾಕಬೇಕು~ ಎಂದು ಅವರು ಒತ್ತಾಯಿಸಿದರು. ಮೇಯರ್ ಪೂರ್ಣಾ ಪಾಟೀಲ, ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಮತ್ತಿತರರು ಹಾಜರಿದ್ದರು.ಗದಗ ವರದಿ: ವಿಧಾನಸಭೆ ಸ್ವೀಕರ್ ಬೋಪಯ್ಯ ಅವರು ಶಾಸಕರ ಅನರ್ಹತೆ ಸಂಬಂಧ ತಮ್ಮ ಮುಂದಿದ್ದ ದಾಖಲೆಗಳನ್ನು ಪರಿಶೀಲಿಸಿಯೇ ವಿವೇಚನಾಯುತ ತೀರ್ಪು ನೀಡಿದ್ದಾರೆ. ಹೀಗಾಗಿ ಅವರ ರಾಜೀನಾಮೆ ಕೇಳುವುದು ಸರಿಯಲ್ಲ.  ಸಭಾಧ್ಯಕ್ಷರ ಹುದ್ದೆ ಸಂವಿಧಾನಿಕ ಹುದ್ದೆಯಾಗಿದ್ದು, ಅದಕ್ಕೆ ಅಗೌರವ ತೋರಬಾರದು ಎಂದು ನಾಯ್ಡು ಹೇಳಿದರು.ಬಾಗಲಕೋಟೆ ವರದಿ: ಬಾದಾಮಿ ಸಮೀಪದ ಕರಡಿಗುಡ್ಡ(ಎಸ್.ಎನ್)ದಲ್ಲಿ ತೆಲಗು ನಟ ನಾಗಾರ್ಜುನ ನಟಿಸುತ್ತಿರುವ `ಶಿರಡಿ ಸಾಯಿಬಾಬಾ~ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲು ಆಗಮಿಸಿದ್ದ ನಾಯ್ಡು, ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ  ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry