ಬಿಎಸ್‌ವೈ:ವಿಚಾರಣೆ ಮುಂದಕ್ಕೆ

7

ಬಿಎಸ್‌ವೈ:ವಿಚಾರಣೆ ಮುಂದಕ್ಕೆ

Published:
Updated:

ಬೆಂಗಳೂರು: ದೀಪಾವಳಿ ಹಬ್ಬವನ್ನು ಜೈಲಿನಲ್ಲೇ ಕಳೆಯಬೇಕೆ ಅಥವಾ ಅದಕ್ಕೂ ಮುನ್ನ ಹೈಕೋರ್ಟ್ ತಮಗೆ ಜಾಮೀನು ನೀಡುವುದೇ ಎನ್ನುವ ಕಾತರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇದ್ದರೆ, ಅವರ ಪುತ್ರರು ಸದ್ಯ ನಿರಾಳರಾಗಿದ್ದಾರೆ.

- ಕಾರಣ, ಯಡಿಯೂರಪ್ಪ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ. ಆದರೆ ಲೋಕಾಯುಕ್ತ ವಿಶೇಷ ಕೋರ್ಟ್ ಅವರ ಪುತ್ರರಾದ ಬಿ.ವೈ.ರಾಘವೇಂದ್ರ ಹಾಗೂ ಬಿ.ವೈ. ವಿಜಯೇಂದ್ರ ಅವರಿಗೆ ಜಾಮೀನು ನೀಡುವಾಗ ವಿಧಿಸಿದ್ದ ಷರತ್ತುಗಳ ಪೈಕಿ ಕೆಲವನ್ನು ಎರಡು ವಾರಗಳ ಕಾಲ ಹೈಕೋರ್ಟ್ ಸಡಿಲಗೊಳಿಸಿದೆ. ಇದರಿಂದ ಅವರು ಸದ್ಯ ಬಂಧನದ ಭೀತಿಯಿಂದ ಮುಕ್ತರಾಗಿದ್ದಾರೆ.

ಲೋಕಾಯುಕ್ತ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಯಡಿಯೂರಪ್ಪ, ಜಾಮೀನಿಗೆ ಷರತ್ತು ವಿಧಿಸಿದ್ದನ್ನು ಪ್ರಶ್ನಿಸಿ ಅವರು ಪುತ್ರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ವಿ.ಪಿಂಟೊ ನಡೆಸಲಿದ್ದಾರೆ.

ಯಡಿಯೂರಪ್ಪ ಪರ ವಾದಿಸುತ್ತಿರುವ ಸುಪ್ರೀಂಕೋರ್ಟ್ ವಕೀಲ ಯು.ಯು. ಲಲಿತ್ ಗುರುವಾರ ಸುಮಾರು ನಾಲ್ಕುವರೆ ಗಂಟೆಗಳ ಕಾಲ ವಾದ ಮಂಡಿಸಿದರು.

ಅವರ ವಾದ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ಶುಕ್ರವಾರ ವಾದ ಮುಂದುವರಿಸುವುದಾಗಿ ಹೇಳಿದರು. ಶುಕ್ರವಾರ ಸಂಜೆಯೊಳಗೆ ಮುಕ್ತಾಯ ಮಾಡುವುದಾಗಿ ತಿಳಿಸಿದರು. ಅವರ ವಾದ ಮುಗಿದ ಮೇಲೆ ಸೋಮವಾರ ತಾವು ಪ್ರತಿವಾದ ಮುಂದುವರಿಸುವುದಾಗಿ ಬಾಷಾ ಪರ ವಕೀಲ ಸಿ.ಎಚ್. ಹನುಮಂತರಾಯ ಹೇಳಿದರು. 

ಒಂದು ವೇಳೆ ವಾದ, ಪ್ರತಿವಾದ ಸೋಮವಾರ ಮುಗಿದರೆ ಯಡಿಯೂರಪ್ಪನವರ `ಜೈಲುವಾಸದ ಭವಿಷ್ಯ~ ನಿರ್ಧಾರ ಆಗುವ ಸಾಧ್ಯತೆ ಇದೆ.  ಸುದೀರ್ಘ ವಾದ, ಪ್ರತಿವಾದಗಳು ನಡೆಯಲಿರುವ ಹೆಚ್ಚಿನ ಪ್ರಕರಣಗಳಲ್ಲಿ ತೀರ್ಪನ್ನು ಕಾಯ್ದಿರಿಸುವುದು ರೂಢಿ. ಒಂದು ವೇಳೆ ಈ ಪ್ರಕರಣದಲ್ಲಿಯೂ ಅದೇ ರೀತಿಯಾದರೆ ದೀಪಾವಳಿ ಹಬ್ಬದ ನಂತರ ಆದೇಶ ಹೊರಬರಲಿದೆ.

ಯಡಿಯೂರಪ್ಪನವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಮುಗಿದ ಮೇಲೆ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಹಾಗೂ ಕೆಲವು ಆರೋಪಿಗಳಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಬಾಷಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಆರಂಭಗೊಳ್ಳುವ ಸಾಧ್ಯತೆ ಇದೆ. `ಜಾಮೀನು ಕೋರಿ ಸಲ್ಲಿಸಿರುವ ಮುಖ್ಯ ಅರ್ಜಿಯು ಇತ್ಯರ್ಥಗೊಳ್ಳುವವರೆಗೆ ಮಧ್ಯಂತರ ಜಾಮೀನು ನೀಡಿ ಎಂದು ಯಡಿಯೂರಪ್ಪನವರು ಕೋರಿದ್ದಾರೆ. ಆದರೆ ಒಮ್ಮೆ ನ್ಯಾಯಾಂಗ ಬಂಧನಕ್ಕೆ ಒಳಗಾದ ವ್ಯಕ್ತಿ ಮಧ್ಯಂತರ ಜಾಮೀನು ಕೋರುವುದು ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ ಆಗುತ್ತದೆ. ಸಂಬಂಧಿಗಳ ವಿವಾಹ ಅಥವಾ ಸಾವು ಇತ್ಯಾದಿ ಸಂದರ್ಭಗಳಲ್ಲಿ ಮಾತ್ರ ಮಧ್ಯಂತರ ಜಾಮೀನು ಕೋರಬಹುದೇ ವಿನಾ ಸುಮ್ಮನೆ ಕೋರುವುದು ನಿಯಮಬಾಹಿರ~ ಎಂದು ಹನುಮಂತರಾಯ ಹೇಳಿದರು.

ಅದಕ್ಕೆ ಲಲಿತ್ ಅವರು ಆಕ್ಷೇಪಿಸಿದರು. `ಯಡಿಯೂರಪ್ಪ ವಿರುದ್ಧ ಮೇಲ್ನೋಟಕ್ಕೆ ಮಾತ್ರ ಆರೋಪ ಸಾಬೀತು ಆಗಿದೆ ಎಂದು ವಿಶೇಷ ಕೋರ್ಟ್ ಹೇಳುವ ಮೂಲಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇಂತಹ ಪ್ರಕರಣಗಳಲ್ಲಿ ಮಧ್ಯಂತರ ಜಾಮೀನು ನೀಡಬಹುದು. ಯಡಿಯೂರಪ್ಪ ಸಾಕ್ಷ್ಯಗಳನ್ನು ನಾಶಪಡಿಸುತ್ತಾರೆ ಇತ್ಯಾದಿಯಾಗಿ ವಿನಾಕಾರಣ ಆರೋಪ ಹೊರಿಸಲಾಗಿದೆ~ ಎಂದರು.

ಷರತ್ತು ಸಡಿಲಿಕೆ: ಹಿಂದಿನ ಮೂರು ವರ್ಷಗಳ ಬ್ಯಾಂಕ್ ವಹಿವಾಟು ಮತ್ತು ಧವಳಗಿರಿ ಪ್ರಾಪರ್ಟಿಸ್ ಸೇರಿದಂತೆ ಇತರ ವ್ಯವಹಾರಗಳ ಸಂಪೂರ್ಣ ವ್ಯವಹಾರಗಳ ದಾಖಲೆ ಸಲ್ಲಿಸುವಂತೆ ರಾಘವೇಂದ್ರ ಹಾಗೂ ವಿಜಯೇಂದ್ರ ಅವರಿಗೆ ವಿಶೇಷ ಕೋರ್ಟ್ ವಿಧಿಸಿದ್ದ ಷರತ್ತುಗಳಿಗೆ ನ್ಯಾಯಮೂರ್ತಿಗಳು ಸಡಿಲಿಕೆ ನೀಡಿದ್ದಾರೆ. ಈ ಶನಿವಾರದ ಒಳಗೆ ದಾಖಲೆ ನೀಡದಿದ್ದರೆ ಜಾಮೀನು ರದ್ದು ಆಗುವುದೆಂದು ವಿಶೇಷ ಕೋರ್ಟ್  ಎಚ್ಚರಿಕೆ ನೀಡಿತ್ತು.

ವಕೀಲರು `ಗರಂ~

ಯಡಿಯೂರಪ್ಪನವರ ಪ್ರಕರಣದ ವಿಚಾರಣೆ ಗುರುವಾರ ದಿನಪೂರ್ತಿ ನಡೆದ ಕಾರಣ ತಮ್ಮ ಪ್ರಕರಣಕ್ಕಾಗಿ ಕಾಯುತ್ತಿದ್ದ ಇತರ ವಕೀಲರು `ಗರಂ~ ಆದರು.

`ಈ ಮೊದಲು ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕಟ್ಟಾ ಜಗದೀಶ್, ಚಿತ್ರನಟ ದರ್ಶನ್, ಈಗ ಯಡಿಯೂರಪ್ಪ ಹೀಗೆ ಗಣ್ಯರು ಸಲ್ಲಿಸುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯಗಳು ದಿನಪೂರ್ತಿ ನಡೆಸುತ್ತಿವೆ. ಇದರಿಂದ ನಮ್ಮ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರು ಕೈಗೆತ್ತಿಕೊಳ್ಳುವುದಿಲ್ಲ. ಜಾಮೀನಿನ ನಿರೀಕ್ಷೆಯಲ್ಲಿರುವ ನಮ್ಮ ಕಕ್ಷಿದಾರರಿಗೆ ಅನ್ಯಾಯ ಆಗುತ್ತಿದೆ. ಕಾನೂನು ಎಲ್ಲರಿಗೂ ಒಂದೇ ಎಂದಿರುವಾಗ ಈ ರೀತಿ ಮಾಡುವುದು ಸರಿಯಲ್ಲ~ ಎಂದು ವಕೀಲರು ಕೋರ್ಟ್ ಸಭಾಂಗಣದಲ್ಲಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry