ಬಿಎಸ್ವೈ ಅಖಾಡಕ್ಕೆ; ಗರಿಗೆದರಿದ ಚಟುವಟಿಕೆ

ಶಿವಮೊಗ್ಗ: ಚುನಾವಣೆಯಿಂದ ಚುನಾವಣೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಶಿವಮೊಗ್ಗ ಕ್ಷೇತ್ರ ಕುತೂಹಲ ಕೆರಳಿಸುತ್ತಲೇ ಬಂದಿದೆ. ಈ ಬಾರಿ ಲೋಕಸಭಾ ಚುನಾವಣೆ ಇನ್ನಷ್ಟು ಕುತೂಹಲ ಮೂಡಿಸಿದ್ದು, ಈಗಾಗಲೇ ರಣರಂಗ ಸಿದ್ಧಗೊಂಡಿದೆ.
ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಅಭ್ಯರ್ಥಿಗಳಿಗಾಗಿ ತಡಕಾಡುತ್ತಿರುವಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿಯಾಗುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಈಗಾಗಲೇ ಅವರು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಯಡಿಯೂರಪ್ಪ ಅಖಾಡಕ್ಕೆ ಇಳಿದಿದ್ದರಿಂದ ಪ್ರಮುಖವಾಗಿ ಕಾಂಗ್ರೆಸ್ –ಜೆಡಿಎಸ್ ಪಕ್ಷಗಳಿಗೆ ಅಭ್ಯರ್ಥಿ ಆಯ್ಕೆ ಗೊಂದಲ ಏರ್ಪಟ್ಟಿದೆ. ಅದು ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ.
ಕಳೆದ ವಿಧಾನಸಭೆಯಲ್ಲಿ ಕಳೆದುಕೊಂಡಿದ್ದನ್ನು ಲೋಕಸಭೆಯಲ್ಲಿ ಪಡೆದುಕೊಳ್ಳುವ ತಹತಹ ಬಿಜೆಪಿಯದ್ದು. ಅಧಿಕಾರದ ರುಚಿ ಉಂಡವರಿಗೆ ತತ್ ಕ್ಷಣಕ್ಕೆ ಯಾವುದಾದರೂ ಒಂದು ಗೆಲುವು ಬೇಕಾಗಿದೆ. ಅದು ಈಗ ಯಡಿಯೂರಪ್ಪ ರೂಪದಲ್ಲಿ ಸಿಗುತ್ತದೆಂಬ ಆತ್ಮವಿಶ್ವಾಸ ಬಿಜೆಪಿ ಪಕ್ಷದ ಪಾಳಯದಲ್ಲಿದೆ.
‘ಯಡಿಯೂರಪ್ಪ ಈಗಾಗಲೇ ಗೆದ್ದಾಗಿದೆ. ಇನ್ನೇನಿದ್ದರೂ ಗೆಲುವಿನ ಅಂತರದ ಲೆಕ್ಕಾಚಾರ ಅಷ್ಟೇ. ಮೋದಿ ಸರ್ಕಾರದಲ್ಲಿ ಅವರೇ ಮೊದಲ ಸಾಲಿನ ಮಂತ್ರಿ’ ಎಂದೇ ಬಿಜೆಪಿಯ ಎಲ್ಲಾ ನಾಯಕರಿಂದ ಅಬ್ಬರದ ಪ್ರಚಾರ ಸಾಗಿದೆ.
ಈಗಾಗಲೇ ಯಡಿಯೂರಪ್ಪ ಕೂಡ ಕ್ಷೇತ್ರದಾದ್ಯಂತ ಒಂದು ಸುತ್ತಿನ ಪ್ರವಾಸ ಕೈಗೊಂಡು, ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಭಾಷಣದಲ್ಲಿ ಜಿಲ್ಲೆಗೆ ತಾವು ಮಾಡಿದ ‘ಅಭಿವೃದ್ಧಿ’ಯನ್ನು ಮುಂದಿಟ್ಟು ಮತಯಾಚಿಸುತ್ತಿದ್ದಾರೆ.
ಯಡಿಯೂರಪ್ಪ ಅವರ ‘ಫಲಾನುಭವಿ’ಗಳು ಅವರನ್ನು ಗೆಲ್ಲಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಪಕ್ಷದಿಂದ ಕೂಡ ಸಾಲು–ಸಾಲು ಸಭೆಗಳು, ಮತದಾರರ ನೋಂದಣಿ, ಮನೆ–ಮನೆ ಭೇಟಿ ಮತ್ತಿತರ ಕಾರ್ಯಕ್ರಮಗಳು ಸಾಂಗವಾಗಿ ಸಾಗಿವೆ. ಮುಖಂಡರಾದ ಕೆ.ಎಸ್.ಈಶ್ವರಪ್ಪ, ಆಯನೂರು ಮಂಜುನಾಥ, ಎಂ.ಬಿ.ಭಾನುಪ್ರಕಾಶ್, ಆರ್.ಕೆ.ಸಿದ್ದರಾಮಣ್ಣ ಮತ್ತಿತರೆಲ್ಲರಿಗೂ ಒಂದೊಂದು ಬೂತ್ನ ಜವಾಬ್ದಾರಿ ವಹಿಸಲಾಗಿದೆ. ಇವರೆಲ್ಲ ಎಷ್ಟೇ ದೊಡ್ಡವರಾದರೂ ಯಡಿಯೂರಪ್ಪ ಗೆಲ್ಲಿಸಲು ಬೂತ್ನಲ್ಲಿ ಪ್ರಭಾರಿಯಾಗಿ ಕೆಲಸ ಮಾಡಬೇಕಾಗಿದೆ.
ಮುಂದೆ ಚುನಾವಣಾ ಆಯೋಗದ ಲೆಕ್ಕದ ಕುಣಿಕೆಗೆ ಬೀಳದಿರಲು ಯಾವ ಹತಾರಗಳನ್ನು ಬಳಸಬೇಕೆಂಬುದರ ಬಗ್ಗೆ ಬಿಜೆಪಿ ಈಗಾಗಲೇ ಸ್ಪಷ್ಟ ಚಿಂತನೆ ನಡೆಸಿದೆ. ನರೇಂದ್ರ ಮೋದಿ, ರಾಜನಾಥ ಸಿಂಗ್ ಮತ್ತಿತರ ರಾಷ್ಟ್ರೀಯ ನಾಯಕರನ್ನು ಚುನಾವಣಾ ನೀತಿ ಸಂಹಿತೆ ಘೋಷಣೆ ಮುಂಚಿತವಾಗಿ ಕರೆಸಿಕೊಳ್ಳಲು ಆಲೋಚಿಸಿದೆ.
ಒಳಹೊಡೆತ ಸಾಧ್ಯತೆ: ಈ ಮಧ್ಯೆ ಯಡಿಯೂರಪ್ಪ ಅವರ ಪಕ್ಷ ಹಾರಾಟದಿಂದ ವೈಯಕ್ತಿಕವಾಗಿ ನಷ್ಟಕ್ಕೆ ಒಳಗಾದವರು ಅಷ್ಟು ಸುಲಭಕ್ಕೆ ಅವಮಾನ ಮರೆಯುವ ಸ್ಥಿತಿಯಲ್ಲಿಲ್ಲ. ಹಾಗಾಗಿ, ಯಡಿಯೂರಪ್ಪ ಅವರಿಗೆ ಪಕ್ಷದಲ್ಲೇ ಒಳಹೊಡೆತ ಬೀಳುವ ಸಾಧ್ಯತೆಗಳೂ ಇವೆ ಎಂಬ ಮಾತುಗಳು ಬಿಜೆಪಿ ಗರ್ಭಗುಡಿಯಲ್ಲಿ ಕೇಳಿಬರುತ್ತಿವೆ.
ಇನ್ನು ಕಾಂಗ್ರೆಸ್, ಯಡಿಯೂರಪ್ಪ ಎದುರಿಗೆ ಪ್ರಬಲ ಪೈಪೋಟಿಗೆ ಪ್ರಾಮಾಣಿಕರನ್ನೇ ಹುಡುಕಬೇಕಾಗಿದೆ. ಜೆಡಿಎಸ್, ಇನ್ನೂ ಎಸ್.ಬಂಗಾರಪ್ಪ
ಮೇಲಿನ ಅನುಕಂಪದ ಅಲೆಯನ್ನೇ ನೆಚ್ಚಿಕೊಂಡು ಕುಳಿತಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.