ಬಿಎಸ್‌ವೈ ಕಾಶಿ ಯಾತ್ರೆಗೆ ಕುಮಾರಸ್ವಾಮಿ ಲೇವಡಿ

7

ಬಿಎಸ್‌ವೈ ಕಾಶಿ ಯಾತ್ರೆಗೆ ಕುಮಾರಸ್ವಾಮಿ ಲೇವಡಿ

Published:
Updated:

ಹುಬ್ಬಳ್ಳಿ: `ರಾಷ್ಟ್ರಕವಿ ಕುವೆಂಪು ಅವರು ಬಹು ಹಿಂದೆಯೇ ಹೇಳಿದಂತೆ ದಕ್ಷಿಣದ ಕಾಗೆಯೊಂದು ಉತ್ತರದ ಕಾಶಿಗೆ ಹೋಗಿ ಗಂಗೆಯಲ್ಲಿ ಮಿಂದರೂ ಅದು ಕೋಗಿಲೆಯಾಗಿ ಬದಲಾಗುವುದಿಲ್ಲ~ ಹೀಗೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಉದ್ದೇಶಿತ ಕಾಶಿ ಯಾತ್ರೆ ಕುರಿತು ಜೆಡಿಎಸ್ ಕಾರ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಲೇವಡಿ ಮಾಡಿದರು.`ಮಾಡಬಾರದ್ದನ್ನು ಮಾಡಿ ಕಾಶಿ ವಿಶ್ವನಾಥನ ದರ್ಶನಕ್ಕೆ ತೆರಳಿದರೆ ಪಾಪ ಪರಿಹಾರವಾಗುವುದಿಲ್ಲ. ಯಡಿಯೂರಪ್ಪನವರ ರೀತಿಯ ರಾಜಕಾರಣಿಗಳ ಬಗ್ಗೆ ಕುವೆಂಪು ಆಗಲೇ ಯೋಚನೆ ಮಾಡಿದ್ದರು~ ಎಂದು ಅವರು ಹೇಳಿದರು.`ನನ್ನ ಅಧಿಕಾರದ ಅವಧಿಯಲ್ಲಿ ರಾಜ್ಯದಲ್ಲಿ ರೈತರು ಅತ್ಯಂತ ಸಂತೋಷವಾಗಿದ್ದರು. ಅಪ್ಪ-ಮಕ್ಕಳು ನನ್ನ ಜೊತೆ ಬಂದರೆ ಈಗಲೂ ತೋರಿಸುವೆ~ ಎಂದು ಯಡಿಯೂರಪ್ಪ ಹಾಕಿರುವ ಸವಾಲನ್ನು ಸ್ವೀಕರಿಸುವೆ. ನಿಗದಿತ ದಿನ ಹಾಗೂ ಸ್ಥಳ ತಿಳಿಸಿದರೆ ಚರ್ಚೆಗೆ ಸಿದ್ಧ.

 

ಈ ಹಿಂದೆ ಹಲವು ಬಾರಿ ಸಾರ್ವಜನಿಕ ಚರ್ಚೆಗೆ ಕರೆದು ಯಡಿಯೂರಪ್ಪ ತಪ್ಪಿಸಿಕೊಂಡಿದ್ದಾರೆ. ಈ ಬಾರಿ ಅವರ ಆಹ್ವಾನ ಸ್ವೀಕರಿಸಿದರೆ ಶಿವಮೊಗ್ಗ ಜಿಲ್ಲೆಯಲ್ಲಿ ಅವರು ಅಕ್ರಮವಾಗಿ ಖರೀದಿಸಿರುವ 500 ಎಕರೆಗೂ ಹೆಚ್ಚು ಕೃಷಿ ಭೂಮಿಯನ್ನು ಅಥವಾ ಬೀಳಗಿ ಕ್ಷೇತ್ರದಲ್ಲಿ ಸಚಿವ ಮುರುಗೇಶ ನಿರಾಣಿ ಭೂ ಸ್ವಾಧೀನದ ಹೆಸರಲ್ಲಿ ರೈತರಿಗೆ ಮಾಡಿರುವ ಅನ್ಯಾಯವನ್ನು ತೋರಿಸಬಹುದು ಎಂದು ಕುಮಾರಸ್ವಾಮಿ ಹೇಳಿದರು.ಪಕ್ಷದ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮಧು ಬಂಗಾರಪ್ಪ ಅವರನ್ನು ನೇಮಕ ಮಾಡಿದ ಕಾರಣಕ್ಕೆ ಮುನಿಸಿಕೊಂಡು ಬೆಂಗಳೂರಿನಲ್ಲಿ ಸಭೆ ನಡೆಸಿರುವ ರಾಜೇಶ್ ಗುಂಡೂರಾವ್ ಪಕ್ಷ ಬಿಟ್ಟು ಬೇರೆಡೆ ತೆರಳುವುದೂ ಸೇರಿದಂತೆ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲು ಸ್ವತಂತ್ರರು.  ಪಕ್ಷದ ಬೆಂಗಳೂರು ವಿಭಾಗದ ಉಪಾಧ್ಯಕ್ಷರಾಗಿ ರಾಜೇಶ್ ಎಷ್ಟರಮಟ್ಟಿಗೆ ಪಕ್ಷ ಸಂಘಟಿಸಿದ್ದಾರೆ ಎಂಬುದು ಗೊತ್ತಿದೆ ಎಂದು ಅವರು ಹೇಳಿದರು.`ಮುಖ್ಯಮಂತ್ರಿ ಸ್ಥಾನಕ್ಕೆ ಮಗನ ಹೊರತುಪಡಿಸಿ ಪಕ್ಷದ ಹಿರಿಯರ ಹೆಸರು ಸೂಚನೆಗೆ ದೇವೇಗೌಡರು ಮುಂದಾಗಲಿ~ ಎಂದು ಹೇಳಿಕೆ ನೀಡಿರುವ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ `ಹುಳಿ ಹಿಂಡುವ ಕೆಲಸ ಬಿಡಲಿ~ ಎಂದು ಕುಮಾರಸ್ವಾಮಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry