ಶುಕ್ರವಾರ, ಜೂನ್ 18, 2021
20 °C

ಬಿಎಸ್‌ವೈ ಕುಟುಂಬಕ್ಕೆ 339 ಕೋಟಿ ಗಣಿ ಕಪ್ಪ:ಎಸ್.ಆರ್. ಹಿರೇಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕುಟುಂಬ ಗಣಿ ಉದ್ಯಮಿಗಳಿಂದ 339 ಕೋಟಿ ರೂಪಾಯಿ ಲಂಚ ಪಡೆದಿರುವುದಕ್ಕೆ ಸಂಬಂಧಿಸಿದ 117 ಪುಟಗಳ ದಾಖಲೆಯನ್ನು ತಾವು ಸಿಇಸಿಗೆ ಸಲ್ಲಿಸಿರುವುದಾಗಿ ಧಾರವಾಡದ ಸಮಾಜ ಪರಿವರ್ತನಾ ಸಂಸ್ಥೆ ಮುಖ್ಯಸ್ಥ ಎಸ್.ಆರ್. ಹಿರೇಮಠ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಇಸಿ ಇದೇ 20ರಂದು ಬೇಲೆಕೇರಿ ಅದಿರು ಕಳವು ಹಾಗೂ ವಿದೇಶಕ್ಕೆ ಸಾಗಣೆಗೆ ಸಂಬಂಧಿಸಿದಂತೆ ಆದೋನಿ ಎಂಟರ್‌ಪ್ರೈಸಸ್ ಹಾಗೂ ಜಿಂದಾಲ್ ಸ್ಟೀಲ್ಸ್ ಸಂಸ್ಥೆಗಳನ್ನು ಪ್ರತಿವಾದಿಗಳಾಗಿಸಿ ವಿಚಾರಣೆಗೆ ಕರೆದಿದ್ದು, ಈ ಸಂದರ್ಭದಲ್ಲಿ ಸದರಿ ಕಂಪೆನಿಗಳ ಜತೆ ಯಡಿಯೂರಪ್ಪ ಕುಟುಂಬದ ಹಣಕಾಸು ನಂಟಿನ ಕುರಿತು ತನಿಖೆ ನಡೆಸಿ ಸುಪ್ರೀಂ ಕೋರ್ಟಿಗೆ ವರದಿ ನೀಡಲಿದೆ ಎಂದರು.ರಾಜ್ಯದಲ್ಲಿ ಗಣಿ ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸಮಾಜ ಪರಿವರ್ತನಾ ಸಂಸ್ಥೆ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದು, ಈ ಬಗ್ಗೆ ಕೋರ್ಟ್ ಸಿಇಸಿಯ ವರದಿ ಕೇಳಿದೆ. ಸಿಇಸಿ ವರದಿ ನೀಡುತ್ತಿದ್ದಂತೆಯೇ ಪ್ರಕರಣದ ತನಿಖೆಯನ್ನು ನ್ಯಾಯಾಲಯ ಸಿಬಿಐ ತನಿಖೆಗೆ ವಹಿಸುವ ವಿಶ್ವಾಸ ತಮಗಿದೆ ಎಂದರು.ಮಾಜಿ ಸಚಿವ ಬಿ.ಶ್ರೀರಾಮುಲು ಬಿಜೆಪಿಗೆ ಪಕ್ಷದ ಸಂಘಟನೆಗಾಗಿ ರೂ 200 ಕೋಟಿ ಹಾಗೂ ಯಡಿಯೂರಪ್ಪ ಅವರಿಗೆ ಪ್ರತಿ ತಿಂಗಳು ರೂ 10 ಕೋಟಿ ನೀಡಿರುವುದಾಗಿ ಹೇಳಿದ್ದು, ಈ ಹಣದ ಮೂಲವನ್ನು ಶ್ರೀರಾಮುಲು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.ಆಂದ್ರ ಪ್ರದೇಶದ 6 ಗಣಿಗಾರಿಕೆ ಕಂಪೆನಿಗಳಿಗೆ ಸುಪ್ರೀಂ ಕೋರ್ಟ್ ನಿಷೇಧ ವಿಧಿಸಿದ್ದು, ಅದರಲ್ಲಿ ನಾಲ್ಕು ಕಂಪೆನಿಗಳು ಬಳ್ಳಾರಿಯ ರೆಡ್ಡಿ ಸಹೋದರರಿಗೆ ಸೇರಿವೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.