ಬಿಎಸ್‌ವೈ, ಕೃಷ್ಣಯ್ಯ ನ.3ರವರೆಗೆ ಬಂಧನ

7

ಬಿಎಸ್‌ವೈ, ಕೃಷ್ಣಯ್ಯ ನ.3ರವರೆಗೆ ಬಂಧನ

Published:
Updated:

ಬೆಂಗಳೂರು: ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಎರಡು ಮತ್ತು ಮೂರನೇ ಖಾಸಗಿ ದೂರುಗಳಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ನವೆಂಬರ್ 3ರವರೆಗೆ ವಿಸ್ತರಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ.

ಇಬ್ಬರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಂಧನದ ಅವಧಿ ಮುಗಿದ ಹಿನ್ನೆಲೆಯಲ್ಲಿ ಶನಿವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, 13 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶ ನೀಡಿದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಯಡಿಯೂರಪ್ಪ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಕರೆತಂದಿರಲಿಲ್ಲ. ವಿಚಾರಣೆ ಆರಂಭವಾಗುತ್ತಿದ್ದಂತೆ ಈ ಸಂಬಂಧ ವಿವರಣೆ ನೀಡಿದ ಕಾರಾಗೃಹದ ಅಧಿಕಾರಿಗಳು, ವೈದ್ಯರು ನೀಡಿರುವ ಪತ್ರವನ್ನು ಸಲ್ಲಿಸಿದರು. ವಿಶ್ರಾಂತಿ ಪಡೆಯುವಂತೆ ವೈದ್ಯರು ಯಡಿಯೂರಪ್ಪ ಅವರಿಗೆ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣ ನೀಡಿದರು.

ಕೃಷ್ಣಯ್ಯ ಶೆಟ್ಟಿ ಹಾಜರು: ಕೃಷ್ಣಯ್ಯ ಶೆಟ್ಟಿ ಅವರನ್ನು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಬೆಳಿಗ್ಗೆ 11 ಗಂಟೆಗೆ ವಿಚಾರಣೆ ಆರಂಭವಾಗುತ್ತಿದ್ದಂತೆ ಅವರು ಕಟಕಟೆಗೆ ಬಂದರು. ಅರ್ಧ ಗಂಟೆಗೂ ಹೆಚ್ಚು ಕಾಲ ವಿಚಾರಣೆಗಾಗಿ ಕಟಕಟೆಯಲ್ಲಿದ್ದರು.

ಸಾಮಾನ್ಯ ಕೈದಿಗಳನ್ನು ಕರೆತರುವ ಕಾರಾಗೃಹದ ವಾಹನದಲ್ಲೇ ಕೃಷ್ಣಯ್ಯ ಶೆಟ್ಟಿ ಅವರನ್ನೂ ಕರೆತರಲಾಗಿತ್ತು. ಕಾರಾಗೃಹಕ್ಕೆ ಹೋದ ದಿನದಿಂದಲೂ ಮುಖ ಕ್ಷೌರ ಮಾಡದ ಹಿನ್ನೆಲೆಯಲ್ಲಿ ಅವರು ಗಡ್ಡಧಾರಿಯಾಗಿದ್ದರು. ಬಂಧನದಿಂದಾಗಿ ಸೊರಗಿದಂತೆ ಕಂಡುಬಂದ ಅವರು, ಖಿನ್ನರಾಗಿದ್ದರು.

ನ್ಯಾಯಾಲಯದ ಕಲಾಪ ಮುಗಿಸಿ ಹೊರಬರುತ್ತಿದ್ದಂತೆ ಮಾಲೂರಿನಿಂದ ಬಂದ ಹಲವರು ಕೃಷ್ಣಯ್ಯ ಶೆಟ್ಟಿ ಅವರನ್ನು ಮಾತನಾಡಿಸಲು ಮುಗಿಬಿದ್ದರು. ಅವರಲ್ಲಿ ಕೆಲವರು ನೋಡಿದ ತಕ್ಷಣವೇ ಅಳಲು ಪ್ರಾರಂಭಿಸಿದರು. ಅದನ್ನು ಕಂಡ ಶೆಟ್ಟರ ಕಣ್ಣಲ್ಲೂ ನೀರು ಬಂತು. ಅಷ್ಟರಲ್ಲಿ ಪೊಲೀಸರು ಅವರನ್ನು ವಾಹನದತ್ತ ಕರೆದೊಯ್ದರು. ಬಳಿಕ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

ಪಾಸ್‌ಪೋರ್ಟ್ ವಶಕ್ಕೆ: ಎರಡೂ ಪ್ರಕರಣಗಳಲ್ಲಿ ಜಾಮೀನು ಪಡೆದಿರುವ 22 ಆರೋಪಿಗಳು ಶನಿವಾರದ ವಿಚಾರಣೆ ವೇಳೆ ಹಾಜರಿದ್ದರು. ಯಡಿಯೂರಪ್ಪ ಅವರ ಪುತ್ರರಾದ ಸಂಸದ ಬಿ.ವೈ.ರಾಘವೇಂದ್ರ, ಬಿ.ವೈ. ವಿಜಯೇಂದ್ರ, ಅಳಿಯ ಆರ್.ಎನ್.ಸೋಹನ್‌ಕುಮಾರ್, ಶಾಸಕ ಡಾ.ಡಿ.ಹೇಮಚಂದ್ರ ಸಾಗರ್, ಉದ್ಯಮಿಗಳಾದ ಪ್ರವೀಣ್‌ಚಂದ್ರ, ಉಗೇಂದರ್, ನಮ್ರತಾ ಶಿಲ್ಪಿ ಇತರರು ನ್ಯಾಯಾಲಯಕ್ಕೆ ಸಲ್ಲಿಸಬೇಕಿದ್ದ ಬಾಕಿ ಭದ್ರತೆ ಒದಗಿಸಿದರು.

ಜಾಮೀನು ಪಡೆದಿರುವ ಆರೋಪಿಗಳಲ್ಲಿ ಪಾಸ್‌ಪೋರ್ಟ್ ಹೊಂದಿರುವವರು ಅದನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕೆಂಬ ಷರತ್ತು ವಿಧಿಸಲಾಗಿತ್ತು. ಹೇಮಚಂದ್ರ ಸಾಗರ್ ಅವರು ಶುಕ್ರವಾರವೇ ನ್ಯಾಯಾಲಯಕ್ಕೆ ಹಾಜರಾಗಿ ಪಾಸ್‌ಪೋರ್ಟ್ ಒಪ್ಪಿಸಿದ್ದರು. ಯಡಿಯೂರಪ್ಪ ಅವರ ಪುತ್ರರು, ಅಳಿಯ ಮತ್ತು ಪ್ರಕರಣದಲ್ಲಿ ಆರೋಪಿಗಳಾಗಿರುವ ಉದ್ಯಮಿಗಳು ಶನಿವಾರ ಪಾಸ್‌ಪೋರ್ಟ್‌ಗಳನ್ನು ಒಪ್ಪಿಸಿದರು.

ಪಾಸ್‌ಪೋರ್ಟ್ ಹೊಂದಿರುವ ಎಲ್ಲ ಆರೋಪಿಗಳೂ ಅವುಗಳನ್ನು ವಕೀಲರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿದರು. ಅವುಗಳನ್ನು ಪರಿಶೀಲಿಸಿದ ನ್ಯಾಯಾಧೀಶರು, ವಶಪಡಿಸಿಕೊಳ್ಳುವಂತೆ ನ್ಯಾಯಾಲಯದ ಅಧಿಕಾರಿಗಳಿಗೆ ಆದೇಶಿಸಿದರು. ಬಳಿಕ ಎಲ್ಲ ಪಾಸ್‌ಪೋರ್ಟ್‌ಗಳನ್ನೂ ಪ್ರತ್ಯೇಕ ಲಕೋಟೆಯಲ್ಲಿ ಹಾಕಿ ಮೊಹರು ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry