`ಬಿಎಸ್‌ವೈ ಜೊತೆ ಹೊಂದಾಣಿಕೆ ಇಲ್ಲ'

ಸೋಮವಾರ, ಜೂಲೈ 15, 2019
25 °C

`ಬಿಎಸ್‌ವೈ ಜೊತೆ ಹೊಂದಾಣಿಕೆ ಇಲ್ಲ'

Published:
Updated:

ಬೆಂಗಳೂರು: `ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮಾತೃಪಕ್ಷ ಬಿಜೆಪಿಗೆ ವಾಪಸಾಗುವ ಇಂಗಿತವನ್ನು ವಿಧಾನಸಭೆಯಲ್ಲೇ ವ್ಯಕ್ತಪಡಿಸಿದ್ದಾರೆ. ಕೆಜೆಪಿ ಜೊತೆ ನಮ್ಮ ಪಕ್ಷ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆ ಉದ್ಬವಿಸುವುದಿಲ್ಲ' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸದನದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ ಕೆಜೆಪಿ ಜೊತೆ ಜೆಡಿಎಸ್ ಮೈತ್ರಿ ಪ್ರಶ್ನೆ ಉದ್ಬವಿಸುವುದಿಲ್ಲ. ಮರಳಿ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ನೀಡಿರುವ ಹೇಳಿಕೆ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.`ರಾಜ್ಯದಲ್ಲಿ ಮೊದಲಿನಿಂದಲೂ ಎಡಪಕ್ಷಗಳ ಜತೆ ನಾವು ಹೊಂದಾಣಿಕೆಯ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಪಕ್ಷಗಳು ಒಗ್ಗೂಡಬೇಕೆಂಬುದು ನಮ್ಮ ಆಶಯವಾಗಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ದೇಶದಲ್ಲಿ ಕಾಂಗ್ರೆಸ್, ಬಿಜೆಪಿಯೇತರ ಶಕ್ತಿಯ ಅಗತ್ಯವಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗ ನಿರ್ಣಾಯಕ ಪಾತ್ರ ವಹಿಸುವ ಮೂಲಕ ಸರ್ಕಾರ ರಚನೆ ಮಾಡುವ ವಿಶ್ವಾಸವಿದೆ. ಆದರೆ ಈ ಬಗ್ಗೆ ಈಗಲೇ ಹೆಚ್ಚಿನ ಮಾಹಿತಿ ನೀಡುವುದು ಸರಿಯಲ್ಲ ಎಂದರು.ತೃತೀಯ ರಂಗ ರಚನೆಗೆ ವೇದಿಕೆ ಸಿದ್ಧವಾಗುತ್ತಿದೆ. ಕಾಂಗ್ರೆಸ್, ಬಿಜೆಪಿ ಹೊರತುಪಡಿಸಿ ಉಳಿದ ಪಕ್ಷಗಳನ್ನು ಒಗ್ಗೂಡಿಸುವ ಕೆಲಸ ನಡೆದಿದೆ. ಈ ನಿಟ್ಟಿನಲ್ಲಿ ಅನೌಪಚಾರಿಕವಾಗಿ ಸಮಾಜವಾದಿ ಪಕ್ಷ, ತೆಲುಗುದೇಶಂ, ಸಿಪಿಎಂ, ಬಿಜು ಜನತಾದಳ ಸೇರಿದಂತೆ ಹಲವು ಪಕ್ಷಗಳ ಜತೆ ಚರ್ಚಿಸಲಾಗಿದೆ ಎಂದು ತಿಳಿಸಿದರು.ಸಿದ್ದರಾಮಯ್ಯಗೆ ಪತ್ರ

ರಾಜ್ಯದಲ್ಲಿನ ತೆಂಗು ಹಾಗೂ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೇ ಅವರ ನೆರವಿಗೆ ಧಾವಿಸಬೇಕು ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿ ಪತ್ರ ಬರೆದಿದ್ದಾರೆ.ತೆಂಗು ಹಾಗೂ ಅಡಿಕೆ ಬೆಳೆ ವಿವಿಧ ರೋಗಗಳಿಂದಾಗಿ ಸಂಪೂರ್ಣ ನಾಶವಾಗಿದೆ. ಸಂಕಷ್ಟದಲ್ಲಿರುವ ರೈತರ ಹಿತ ಕಾಪಾಡಲು ಸರ್ಕಾರ ತಕ್ಷಣ ಸ್ಪಂದಿಸಬೇಕು. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದವರ ಸಾಲ ಮನ್ನಾ ಮಾಡಿರುವುದು ಸ್ವಾಗತಾರ್ಹ. ಅದೇ ರೀತಿ ಅಡಿಕೆ, ತೆಂಗು ಬೆಳೆಗಾರರ ನೆರವಿಗೂ ಮುಖ್ಯಮಂತ್ರಿ ಧಾವಿಸಬೇಕು ಎಂದರು.ತೆಂಗು ಬೆಳೆ ಪುನಶ್ಚೇತನ ಯೋಜನೆ ರಾಜ್ಯದಲ್ಲಿ ಜಾರಿಯಾದರೆ ರೋಗಬಾಧೆಯಿಂದ ಕಡಿಯಲಾಗುವ ಮೊದಲ 20 ತೆಂಗಿನ ಮರಕ್ಕೆ ರೂ.13 ಸಾವಿರ, ನಂತರದ ಮರಗಳಿಗೆ ತಲಾ ರೂ.500 ಪರಿಹಾರ ದೊರೆಯಲಿದೆ. ಒಂದು ಹೆಕ್ಟೇರ್ ಪ್ರದೇಶದಲ್ಲಿ 12 ಮರಗಳಿದ್ದರೆ ಪ್ರತಿ ಮರಕ್ಕೆ ರೂ.250 ಪರಿಹಾರ ನೀಡಲಾಗುತ್ತದೆ.ಹಾಲಿ ತೋಟ ಪುನಶ್ಚೇತನಗೊಳಿಸಲು ಎರಡು ವರ್ಷಕ್ಕೊಮ್ಮೆ ಪ್ರತಿ ಹೆಕ್ಟೇರ್‌ಗೆ ರೂ.15,000 ಹಾಗೂ ಎರಡು ಹೆಕ್ಟೇರ್‌ಗಿಂತ ಹೆಚ್ಚಿದ್ದರೆ ರೂ. 7500 ದೊರೆಯಲಿದೆ. ಇದಲ್ಲದೆ ಹೊಸ ಸಸಿಗಳನ್ನು ನೆಡಲು ಪ್ರತಿ ಸಸಿಗೆ ರೂ. 20 ನೆರವು ದೊರೆಯಲಿದೆ ಎಂದು ತಿಳಿಸಿದರು.ರಾಜ್ಯದಲ್ಲಿ ಅಡಿಕೆ ಹಾಗೂ ತೆಂಗು ಬೆಳೆಗಾರರ ಪರಿಸ್ಥಿತಿ ಗಂಭೀರವಾಗಿದೆ. ಕೂಡಲೇ ರಾಜ್ಯಕ್ಕೆ ತಜ್ಞರ ತಂಡ ಕಳುಹಿಸಿ ಸೂಕ್ತ ಪರಿಹಾರ ಒದಗಿಸಲು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry