ಶುಕ್ರವಾರ, ಮಾರ್ಚ್ 5, 2021
29 °C
ಇಂದು ಪಕ್ಷದ ಕಚೇರಿಯಲ್ಲಿ ಬಿಜೆಪಿ ಪ್ರಮುಖರ ಸಮಿತಿ ಮೊದಲ ಸಭೆ

ಬಿಎಸ್‌ವೈ ತೀರ್ಮಾನದ ವಿರುದ್ಧ ಚರ್ಚೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಸ್‌ವೈ ತೀರ್ಮಾನದ ವಿರುದ್ಧ ಚರ್ಚೆ?

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಇತ್ತೀಚೆಗೆ ರಚಿಸಲಾದ ಪ್ರಮುಖರ ಸಮಿತಿಯ ಮೊದಲ ಸಭೆ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆಯಲಿದೆ.ಪ್ರಮುಖರ ಸಮಿತಿಯಲ್ಲಿ ಚರ್ಚಿಸದೆ ಪಕ್ಷದ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರ ನೇಮಕ ಮಾಡಿರುವ ಯಡಿಯೂರಪ್ಪ ಅವರ ಏಕಪಕ್ಷೀಯ ತೀರ್ಮಾನ ಹಾಗೂ ಬಿಬಿಎಂಪಿಯಲ್ಲಿ  ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.ಯಡಿಯೂರಪ್ಪ ಅವರ ‘ಏಕಪಕ್ಷೀಯ’ ತೀರ್ಮಾನಗಳನ್ನು ಪ್ರಶ್ನಿಸಲು ಸಮಿತಿಯ ಬಹುತೇಕ ಸದಸ್ಯರು ಉತ್ಸುಕರಾಗಿದ್ದಾರೆ ಎಂದು ಹೇಳಲಾಗಿದೆ.‘ಬಿಜೆಪಿ ಬಗ್ಗೆ ರಾಜ್ಯದ ಜನ ಒಲವು ತೋರಿಸುತ್ತಿದ್ದು, 2018ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಅವಕಾಶ ಇದೆ. ಅಂತಹ ಸಂಕ್ರಮಣದ ಕಾಲದಲ್ಲಿ   ಪಕ್ಷನಿಷ್ಠೆ ಇಲ್ಲದವರನ್ನು ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರಾಗಿ ನೇಮಿಸಿರುವುದು ಸರಿಯಲ್ಲ ಎಂದು ಬಲವಾಗಿ ಪ್ರತಿಪಾದಿಸಲು ಸಜ್ಜಾಗಿದ್ದೇವೆ’ ಎಂದು ಭಿನ್ನಮತೀಯರ ನೇತೃತ್ವ ವಹಿಸಿರುವ ಹಿರಿಯ ನಾಯಕರೊಬ್ಬರು  ‘ಪ್ರಜಾವಾಣಿ’ಗೆ ತಿಳಿಸಿದರು.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ  ಬ್ರಿಗೇಡ್‌ ಹೆಸರಿನಲ್ಲಿ ಕೆ.ಎಸ್‌. ಈಶ್ವರಪ್ಪ ಅವರು ಹಿಂದುಳಿದವರ ಸಂಘಟನೆಗೆ ಮುಂದಾಗಿದ್ದು, ರಾಜ್ಯದಾದ್ಯಂತ ಸಮಾವೇಶ ನಡೆಸುವ ಚಿಂತನೆಯಲಿದ್ದಾರೆ. ಪಕ್ಷದ ಸಂಘಟನೆ ಬಿಟ್ಟು ಪ್ರತ್ಯೇಕ ಸಂಘಟನೆ ಕಟ್ಟುವ ಈಶ್ವರಪ್ಪ ನಡೆ ಕೂಡ ಸಭೆಯಲ್ಲಿ ಚರ್ಚೆಗೆ ಬರಲಿದೆ ಎನ್ನಲಾಗಿದೆ. ಬಿ.ಎಸ್‌. ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಿಸಿದ ಬಳಿಕ ಪಕ್ಷದ ಸಂಘಟನೆಯ ಮೇಲುಸ್ತುವಾರಿಗಾಗಿ 12 ಸದಸ್ಯರಿರುವ ಪ್ರಮುಖರ ಸಮಿತಿ ರಚಿಸಿ ಜುಲೈ 6 ರಂದು ಅಮಿತ್‌ಷಾ ಆದೇಶ ಹೊರಡಿಸಿದ್ದರು. ಪ್ರತಿ ತಿಂಗಳು ಸಭೆ ನಡೆಸಬೇಕು ಎಂದು ಸೂಚಿಸಲಾಗಿತ್ತು. ಆದರೆ, ಈವರೆಗೂ ಸಭೆ ನಡೆದಿರಲಿಲ್ಲ.ಭಿನ್ನರ ಅಪಸ್ವರ: ಪದಾಧಿಕಾರಿಗಳ ನೇಮಕ ಮಾಡುವ ಮುನ್ನ ಹಿರಿಯ ನಾಯಕರನ್ನು ಯಡಿಯೂರಪ್ಪ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಿಗುವ  ಪ್ರಾಮುಖ್ಯ ಉಳಿದ ನಾಯಕರಿಗೆ ಸಿಗುತ್ತಿಲ್ಲ ಎಂದು ಪಕ್ಷದ ಹಿರಿಯ ನಾಯಕರು ಅಸಮಾಧಾನ ಹೊರ ಹಾಕಿದ್ದರು.2013 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿದ್ದ ಅಂದಿನ ಕೆಜೆಪಿ ಅಭ್ಯರ್ಥಿಗಳನ್ನು ಶಿವಮೊಗ್ಗ, ತುಮಕೂರು, ಚಾಮರಾಜನಗರ, ಹಾವೇರಿ ಜಿಲ್ಲೆಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಭಿನ್ನಮತ ಸ್ಫೋಟಿಸಲಿಕ್ಕೆ ಮೂಲವಾಗಿತ್ತು.ಯಡಿಯೂರಪ್ಪ ನಡೆಯ ಬಗ್ಗೆ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ  ಕೆ.ಎಸ್‌. ಈಶ್ವರಪ್ಪ, ಶಾಸಕ ಸಿ.ಟಿ. ರವಿ ಮೊದಲಾದವರು ದಿಲ್ಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಷಾಗೆ ದೂರು ನೀಡಿದ್ದರು.‘ಎಲ್ಲಾ ಭಿನ್ನತೆ ಮರೆತು 2018ರಲ್ಲಿ ಪಕ್ಷ ಅಧಿಕಾರಕ್ಕೆ ತರಲು ಮುಂದಾಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಯ್ಕೆಯ ಬಗ್ಗೆ ದಿಲ್ಲಿಯವರೆಗೆ ದೂರು ತರುವುದು ಬೇಡ’ ಎಂದು ಅಮಿತ್‌ಷಾ ಕಿವಿಮಾತು ಹೇಳಿ ಕಳಿಸಿದ್ದರು. ಆದರೂ ಭಿನ್ನಮತೀಯ ನಾಯಕರು ಪಟ್ಟು ಬಿಟ್ಟಿರಲಿಲ್ಲ.ಹೊಸದಾಗಿ ಪ್ರಮುಖರ ಸಮಿತಿ ರಚನೆಯಾದಾಗ ಶೋಭಾ ಕರಂದ್ಲಾಜೆ ಮತ್ತು ರವಿಕುಮಾರ್‌ ಅವರಿಗೆ ಪಕ್ಷದ ವರಿಷ್ಠರು ಅವಕಾಶ ಕಲ್ಪಿಸಿರಲಿಲ್ಲ. ಇದು ಯಡಿಯೂರಪ್ಪ ಅವರಿಗೆ ಆಗಿರುವ ಹಿನ್ನಡೆ ಎಂದೇ ಭಿನ್ನಮತೀಯರು ಭಾವಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಪ್ರಮುಖರ ಸಮಿತಿ ಸಭೆ ಆಯೋಜನೆಯಾಗಿದ್ದು, ಪಕ್ಷದ ವಲಯದಲ್ಲಿ ಕುತೂಹಲ ಹುಟ್ಟಿಸಿದೆ.ಸದಸ್ಯರು ಯಾರು?: ಯಡಿಯೂರಪ್ಪ, ಅನಂತಕುಮಾರ್‌, ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ್‌, ಕೆ.ಎಸ್‌. ಈಶ್ವರಪ್ಪ, ಪ್ರಹ್ಲಾದ ಜೋಶಿ, ಸಿ.ಎಂ. ಉದಾಸಿ, ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ, ನಳಿನಕುಮಾರ್ ಕಟೀಲು, ಸಿ.ಟಿ. ರವಿ ಸದಸ್ಯರು. ರಾಮಲಾಲ್‌, ಸಂತೋಷ್‌, ಮುರುಳೀಧರರಾವ್‌, ಅರುಣಕುಮಾರ್‌ ಆಹ್ವಾನಿತ ಸದಸ್ಯರು.ಪಕ್ಷದ ಮುಂದಿನ ಚಟುವಟಿಕೆ, ಸಂಘಟನೆ ಬಗ್ಗೆ ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚಿಸುತ್ತೇವೆ. ಯಾವುದೇ ರ‍್ಯಾಲಿ ಸಂಘಟಿಸುವ ಚಿಂತನೆಯಿಲ್ಲ

-ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.