ಬಿಎಸ್‌ವೈ ಪಕ್ಷ ತೊರೆಯುವುದಿಲ್ಲ: ಡಿವಿಎಸ್

7

ಬಿಎಸ್‌ವೈ ಪಕ್ಷ ತೊರೆಯುವುದಿಲ್ಲ: ಡಿವಿಎಸ್

Published:
Updated:

ಉಪ್ಪಿನಂಗಡಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು. ಶನಿವಾರ ಕೊಯಿಲದಲ್ಲಿ ಎಂಡೋ ಪಾಲನಾ ಕೇಂದ್ರ ಉದ್ಘಾಟನೆಯ ಬಳಿಕ ಸುದ್ದಿಗಾರರೊಂದಿಗೆ  ಅವರು ಮಾತನಾಡಿದರು.`ಯಡಿಯೂರಪ್ಪ ಹುಟ್ಟು ಹೋರಾಟಗಾರ. ಕಳೆದ 40 ವರ್ಷಗಳಿಂದ ಹೋರಾಟದಿಂದಲೇ ಪಕ್ಷ ಕಟ್ಟಿ ಬೆಳೆಸಿದವರು. ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಎಲ್ಲರಿಗೂ ಪಕ್ಷ ಕಟ್ಟುವ ಹಕ್ಕಿದೆ. ಬಿಜೆಪಿ ವ್ಯಕ್ತಿಯಾಧರಿತ ಪಕ್ಷವಲ್ಲ, ಸಾಮೂಹಿಕ ನಾಯಕತ್ವದ ಪಕ್ಷ ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಈ ಬಗ್ಗೆ ಯಾರನ್ನು ಯಾರೂ ದೂಷಿಸುವಂತಿಲ್ಲ. ಬಿಜೆಪಿಯಲ್ಲಿ ಸಣ್ಣಪುಟ್ಟ ದೋಷಗಳಿರುವುದು ನಿಜ. ಆದರೆ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪರವರು ಪಕ್ಷ ಬಿಡುವ ಕಾರ್ಯ ಮಾಡುವುದಿಲ್ಲ ಎನ್ನುವ ವಿಶ್ವಾಸವಿದೆ~ ಎಂದು ಹೇಳಿದರು.ಬಿಜೆಪಿಯಲ್ಲಿ ಯಡಿಯೂರಪ್ಪ ವರ್ತನೆ ಸರಿಯಿಲ್ಲ ಎನ್ನುವ ಆರೋಪವಿದೆ, ಶಿಸ್ತಿನ ಪಕ್ಷದಲ್ಲಿ ಶಿಸ್ತು ಕ್ರಮ ಯಾಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ   ಅವರು ಎಲ್ಲರಿಗೂ ತಮ್ಮ ಹಕ್ಕು ಪ್ರತಿಪಾದಿಸುವುದಕ್ಕೆ ಅವಕಾಶವಿದೆ. ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕ, ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.ಬಿಜೆಪಿಯಿಂದ ವಲಸೆ ನಡೆಯುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿವಿಎಸ್, ನಿಷ್ಠಾವಂತ ನಾಯಕರು, ಕಾರ್ಯಕರ್ತರು ತುಂಬಿರುವ ರಾಜ್ಯಕ್ಕೆ ಮಾದರಿಯಾಗಿರುವ ದ. ಕ ಜಿಲ್ಲೆಯ ಬಿಜೆಪಿಯಲ್ಲಿ ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಇಲ್ಲಿರುವ ಬಿಜೆಪಿ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯುವವರು. ಇವರನ್ನು ಯಾರೂ ಪಕ್ಷಾಂತರ ಮಾಡಿಸಲು ಸಾಧ್ಯವಿಲ್ಲ ಎಂದರು. ಸಂಸದ ನಳಿನ್ ಕುಮಾರ್ ಕಟೀಲ್, ಜಿಪಂ. ಸದಸ್ಯ ಬಾಲಕೃಷ್ಣ ಸುವರ್ಣ ಬಾಣಜಾಲು, ಪುಲಸ್ಯಾ ರೈ, ಭಾಸ್ಕರ ಗೌಡ, ಕುಶಾಲಪ್ಪ ಗೌಡ,  ದಯಾನಂದ ಗೌಡ, ಆಶೋಕ್,  ಬಾಲಕೃಷ್ಣ ಗೌಡ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry