ಬಿಎಸ್‌ವೈ ಪಕ್ಷ ತ್ಯಜಿಸುವುದಿಲ್ಲ: ರವಿ

7

ಬಿಎಸ್‌ವೈ ಪಕ್ಷ ತ್ಯಜಿಸುವುದಿಲ್ಲ: ರವಿ

Published:
Updated:

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ತ್ಯಜಿಸುತ್ತಾರೆ ಎನ್ನುವ ಲೆಕ್ಕಾಚಾರ ತಪ್ಪು ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಪ್ರತಿಪಾದಿಸಿದರು.ಭಾನುವಾರ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಯಡಿಯೂರಪ್ಪ ಅವರು ಸಂದರ್ಭಕ್ಕೆ ಸರಿಯಾಗಿ ಪಟ್ಟುಗಳನ್ನು ಹಾಕುತ್ತಿರುತ್ತಾರೆ. ಆದ್ದರಿಂದ ಪಕ್ಷ ತ್ಯಜಿಸುವ ಬಗ್ಗೆ ಯಾರಾದರೂ ಲೆಕ್ಕಚಾರ ಹಾಕಿದ್ದರೆ ಅದು ತಪ್ಪು. ಯಡಿಯೂರಪ್ಪ ಯಾವುದೇ ಕಾರಣಕ್ಕೂ ಬಿಜೆಪಿ ತ್ಯಜಿಸುವುದಿಲ್ಲ. ಅವರೊಬ್ಬ ಪ್ರಭಾವಿ ರಾಜಕಾರಣಿಯಾಗಿದ್ದು, ಪಕ್ಷವನ್ನು ಬೆಳೆಸಲು ಮುಂದಾಗುತ್ತಾರೆ. ಮುಂದಿನ ಅವಧಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಶ್ರಮವಹಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪಕ್ಷದಲ್ಲಿ ಗೊಂದಲ ಇರುವುದು ನಿಜ. ಆದರೆ, ಬಿಜೆಪಿಯಲ್ಲಿ ಭಿನ್ನಮತವಾಗಲಿ, ಬಣವಾಗಲಿ ಇಲ್ಲ. ಇಲ್ಲಿರುವುದು ಕೇವಲ ಅಭಿಪ್ರಾಯ ಭೇದ. ಅಧಿಕಾರವೇ ಇಲ್ಲದ ಸಣ್ಣಪುಟ್ಟ ಸಂಸ್ಥೆಗಳಲ್ಲಿ, ಕುಟುಂಬಗಳಲ್ಲಿ ಗೊಂದಲಗಳಿರುತ್ತವೆ. ಅಧಿಕಾರವಿರುವ ರಾಜಕೀಯದಲ್ಲಿ ಗೊಂದಲವಿರುವುದು ಸಾಮಾನ್ಯ ಸಂಗತಿ. ಇದು ಕೇವಲ ಬಿಜೆಪಿಗೆ ಸೀಮಿತವಲ್ಲ. ಕಾಂಗ್ರೆಸ್, ಜೆಡಿಎಸ್ ಎಲ್ಲ ಪಕ್ಷಗಳಲ್ಲೂ ಇದು ಮಾಮೂಲಿಯಾಗಿದೆ. ಒಟ್ಟಾರೆಯಾಗಿ ರಾಜಕೀಯದಲ್ಲೇ ಗೊಂದಲವಿದೆ ಎಂದರು.ಪಕ್ಷದ ಅಧ್ಯಕ್ಷರ ಆಯ್ಕೆ ಬಗ್ಗೆ ಬಿಜೆಪಿ ಸಂಸದೀಯ ಸಮಿತಿ ನಿರ್ಧಾರ ಕೈಗೊಳ್ಳಲಿದೆ. ಯಾರು ಪಕ್ಷದ ಅಧ್ಯಕ್ಷರಾಗಬೇಕು ಎನ್ನುವುದನ್ನು ಹಿರಿಯರು ಆಯ್ಕೆ ಮಾಡುತ್ತಾರೆ ಎಂದರು.ಕಾರ್ಯಾಚರಣೆ ಸ್ಥಗಿತ ಇಲ್ಲ:

ನಕ್ಸಲರ ವಿರುದ್ಧ ಕಾರ್ಯಾಚರಣೆ ನಿಲ್ಲುವುದಿಲ್ಲ. ಶರಣಾಗುತ್ತೇವೆ ಎಂದು ಹೇಳಿ ಸರ್ಕಾರಕ್ಕೆ ಮೋಸ ಮಾಡಿರುವ ನಕ್ಸಲರ ವಿರುದ್ಧ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಸಚಿವರು ತಿಳಿಸಿದರು.ಜನರ ಬೆಂಬಲ ಇರುವವರು ಜನರ ನಡುವೆ ಹೋರಾಟ ನಡೆಸುತ್ತಾರೆ. ಜನ ಬೆಂಬಲ ಇಲ್ಲದವರು ಶಸ್ತ್ರಾಸ್ತ್ರಗಳ ಮೊರೆ ಹೋಗುತ್ತಾರೆ. ನಕ್ಸಲರು ಜನ ಬೆಂಬಲವಿಲ್ಲದವರು. ಶಸ್ತ್ರಗಳಿಂದಲೇ ಅವರು ಉತ್ತರ ಕೊಡುವುದಾದರೆ ಅವರನ್ನು ಮಟ್ಟ ಹಾಕಲು ಸರ್ಕಾರಕ್ಕೆ ಶಕ್ತಿ ಇದೆ. ಜನರಲ್ಲಿ ಭಯ ಹುಟ್ಟಿಸಿ ಸಂವಿಧಾನಕ್ಕೆ ಸವಾಲು ಹಾಕುವವರ ಪರವಾಗಿ ಕರುಣೆ ತೋರಿಸುವುದು ದೇಶದ್ರೋಹ ಆಗುತ್ತದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry