ಭಾನುವಾರ, ಮೇ 16, 2021
22 °C

ಬಿಎಸ್‌ವೈ ಪ್ರಕರಣ: ನಿಲುವು ಬದಲಿಸಿದ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದ ಸದಸ್ಯರ ಶೈಕ್ಷಣಿಕ ಸಂಸ್ಥೆಯ ಟ್ರಸ್ಟ್‌ಗೆ ಜಿಂದಾಲ್ ಸಮೂಹದಿಂದ ವಂತಿಗೆ ಸಂದಾಯ ಆಗಿರುವುದು ಮತ್ತು ಸಂದೇಹಾಸ್ಪದ ಭೂ ವ್ಯವಹಾರ ನಡೆದಿರುವ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನ ಕೇಂದ್ರ ಉನ್ನತಾಧಿಕಾರ ಸಮಿತಿಗೆ (ಸಿಇಸಿ) ಬುಧವಾರ ತಿಳಿಸಿದೆ.ಯಡಿಯೂರಪ್ಪ ಅವರ ವಿರುದ್ಧವೂ ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ಧಾರವಾಡದ ಸಮಾಜ ಪರಿರ್ವತನಾ ಸಮುದಾಯದ (ಎಸ್‌ಪಿಎಸ್) ಅರ್ಜಿಯ ಸಂಬಂಧ ಬುಧವಾರ ಸಲ್ಲಿಸಿರುವ ಹೊಸ ಪ್ರಮಾಣಪತ್ರದಲ್ಲಿ ರಾಜ್ಯ ಸರ್ಕಾರ ಈ ನಿಲುವು ಪ್ರಕಟಿಸಿದೆ. ಇದೇ ಪ್ರಕರಣದಲ್ಲಿ ಮಾರ್ಚ್ ಮೊದಲ ವಾರ ಪ್ರಮಾಣ ಪತ್ರವೊಂದನ್ನು ಸಲ್ಲಿಸಿದ್ದ ಸರ್ಕಾರ, `ಸಿಬಿಐ ತನಿಖೆಯ ಅಗತ್ಯವೇ ಇಲ್ಲ~ ಎಂದು ವಾದಿಸಿತ್ತು. ಆದರೆ, ಈಗ ತನ್ನ ನಿಲುವು ಬದಲಿಸಿದೆ.ಹಿಂದಿನ ವಿಚಾರಣೆ ವೇಳೆ ಸಿಇಸಿ ಎತ್ತಿದ್ದ 11 ಮಹತ್ವದ ಪ್ರಶ್ನೆಗಳಿಗೆ ಉತ್ತರವನ್ನು ಒಳಗೊಂಡ 27 ಪುಟಗಳ ಪ್ರಮಾಣಪತ್ರ ಮತ್ತು ಒಂಬತ್ತು ದಾಖಲೆಗಳ ಅನುಬಂಧವನ್ನು ಸರ್ಕಾರ ಸಲ್ಲಿಸಿದೆ. ಸೌತ್‌ವೆಸ್ಟ್ ಮೈನಿಂಗ್ ಕಂಪೆನಿ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧದ ಆರೋಪ, ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್ ಮತ್ತು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಒಡೆತನದ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ ನಡುವಿನ ವ್ಯವಹಾರ, ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ, ಲೋಕಾಯುಕ್ತದ ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮತ್ತಿತರ ಪ್ರಮುಖ ವಿಷಯಗಳ ಬಗ್ಗೆ ಸರ್ಕಾರ ಈ ಪ್ರಮಾಣ ಪತ್ರದಲ್ಲಿ ಸಿಇಸಿಗೆ ಉತ್ತರ ನೀಡಿದೆ. ಪ್ರಮಾಣ ಪತ್ರದ ಪ್ರತಿ `ಪ್ರಜಾವಾಣಿ~ಗೆ ಲಭ್ಯವಾಗಿದೆ.`ಜಿಂದಾಲ್ ಕಂಪೆನಿಯು ಮಾಜಿ ಮುಖ್ಯಮಂತ್ರಿಯವರ ಹತ್ತಿರದ ಸಂಬಂಧಿಗಳ ಸಂಸ್ಥೆಗೆ ವಂತಿಗೆ ನೀಡಿರುವುದು ಮತ್ತು ಅವರ ನಡುವೆ ಭೂಮಿಯ ಮಾರಾಟ/ಖರೀದಿ ನಡೆದಿರುವ ಬಗ್ಗೆ ಸರ್ಕಾರದ ಅಭಿಪ್ರಾಯವೇನು?~ ಎಂಬ ಪ್ರಶ್ನೆಯನ್ನು ಸಿಇಸಿ ಕೇಳಿತ್ತು. `ಸರ್ಕಾರ ಏನನ್ನೂ ಹೇಳಲು ಬಯಸುವುದಿಲ್ಲ~ ಎಂಬ ಉತ್ತರ ಪ್ರಮಾಣ ಪತ್ರದಲ್ಲಿದೆ. ಜಿಂದಾಲ್ ಕಂಪೆನಿ ಗಣಿ ಗುತ್ತಿಗೆ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿರುವ ಸಂಬಂಧದ ದಾಖಲೆಗಳನ್ನು ಇದರೊಂದಿಗೆ ಲಗತ್ತಿಸಲಾಗಿದೆ.`ಉದ್ಯಮ ಸಂಸ್ಥೆಗಳಿಂದ ಈ ಬಗೆಯ ವಂತಿಗೆ ಪಡೆಯುವುದು ಸಾಮಾನ್ಯವೇ ಅಥವಾ ಟ್ರಸ್ಟಿಗಳ ಸಂಬಂಧಿಯು ಹೊಂದಿರುವ ಅಧಿಕಾರ ಬಲದಿಂದ ನಡೆದಿದೆಯೇ~ ಎಂಬ ಮತ್ತೊಂದು ಪ್ರಶ್ನೆಯನ್ನು ಸಿಇಸಿ ಸರ್ಕಾರದ ಮುಂದಿಟ್ಟಿತ್ತು. ಇದಕ್ಕೆ ಸರ್ಕಾರ ಯಾವುದೇ ಉತ್ತರವನ್ನೂ ನೀಡಿಲ್ಲ. `ನೋ~ (ಇಲ್ಲ) ಎಂದಷ್ಟೇ ಉಲ್ಲೇಖಿಸಿದೆ. ಉದ್ಯಮಿ ಪ್ರವೀಣ್‌ಚಂದ್ರ ಅವರಿಗೆ ಗಣಿ ಗುತ್ತಿಗೆ ಮಂಜೂರು ಮಾಡಿರುವ ಆರೋಪದ ಬಗ್ಗೆಯೂ ಸರ್ಕಾರ ವಿವರಣೆ ನೀಡಿದೆ.ವರ್ಗಾವಣೆಗೆ ಸಿದ್ಧ: ನೂತನ ಲೋಕಾಯುಕ್ತರ ನೇಮಕಾತಿಯ ಬಳಿಕ ಅವರು ಬಯಸಿದಲ್ಲಿ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಚ್.ಎನ್.ಸತ್ಯನಾರಾಯಣ ರಾವ್ ಮತ್ತು ಡಿಐಜಿ ಜೆ.ಅರುಣ್ ಚಕ್ರವರ್ತಿ ಅವರನ್ನು ವರ್ಗಾವಣೆ ಮಾಡಲು ಸಿದ್ಧ ಎಂಬ ನಿಲುವನ್ನೂ ರಾಜ್ಯ ಸರ್ಕಾರ ಪ್ರಕಟಿಸಿದೆ.ಲೋಕಾಯುಕ್ತದ ಹಿರಿಯ ಅಧಿಕಾರಿಯ ವರ್ಗಾವಣೆ ಹಿಂದೆ ರಾಜಕೀಯ ಪ್ರಭಾವ ಕೆಲಸ ಮಾಡಿದೆ ಎಂದು ಎಸ್‌ಪಿಎಸ್ ಹಿರಿಯ ಸಲಹೆಗಾರ ಎಸ್.ಆರ್.ಹಿರೇಮಠ ಮಾಡಿರುವ ಆರೋಪಗಳಿಗೂ ಪ್ರಮಾಣ ಪತ್ರದಲ್ಲಿ ಸರ್ಕಾರ ಉತ್ತರ ನೀಡಿದೆ. `ಹಿಂದಿನ ಡಿಐಜಿ ಪ್ರಣವ್ ಮೊಹಾಂತಿ ಅವರು ಲೋಕಾಯುಕ್ತದಲ್ಲಿ ನಿಗದಿತ ಅವಧಿ ಪೂರೈಸಿದ್ದರು. ಆಗಿನ ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರ ಜೊತೆ ಸಮಾಲೋಚಿಸಿ ಮೊಹಾಂತಿ ಅವರನ್ನು ವರ್ಗಾವಣೆ ಮಾಡಲಾಯಿತು.

 

ಪ್ರಕರಣವೊಂದರ ತನಿಖೆ ಸಂಬಂಧ ಗಣ್ಯ ವ್ಯಕ್ತಿಯೊಬ್ಬರು ತಮ್ಮ ಜೊತೆ ದೂರವಾಣಿ ಮೂಲಕ ಮಾತನಾಡಿರುವುದನ್ನು ಹಿಂದಿನ ಎಡಿಜಿಪಿ ಜೀವನಕುಮಾರ್ ಗಾಂವ್ಕರ್ ಸರ್ಕಾರದ ಗಮನಕ್ಕೆ ತಂದಿದ್ದರು. ಅಧಿಕಾರಿಗೆ ಮುಜುಗರ ಆಗುವುದನ್ನು ತಪ್ಪಿಸಲು ಅವರನ್ನು ವರ್ಗಾವಣೆ ಮಾಡಲಾಯಿತು~ ಎಂದು ಸರ್ಕಾರ ಹೇಳಿದೆ.`ಸದಾಶಿವ ಎಂಬುವರು ನೀಡಿದ್ದ ದೂರಿನ ಸಂಬಂಧ ಸರಿಯಾದ ಕ್ರಮ ಕೈಗೊಳ್ಳದ ಆರೋಪದ ಹಿನ್ನೆಲೆಯಲ್ಲಿ ಅರುಣ್ ಚಕ್ರವರ್ತಿಯವರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಲೋಕಾಯುಕ್ತರು ಶಿಫಾರಸು ಮಾಡಿದ್ದರು. ಲೋಕಾಯುಕ್ತರ ವರದಿ ಸಂಬಂಧ ಈ ಅಧಿಕಾರಿ ಸರ್ಕಾರಕ್ಕೆ ವಿವರಣೆ ಸಲ್ಲಿಸಿದ್ದಾರೆ. ಅದನ್ನು ಪರಿಶೀಲಿಸಲಾಗುತ್ತಿದೆ~ ಎಂದು ತಿಳಿಸಿದೆ.ಸತ್ಯನಾರಾಯಣ ರಾವ್ ಅವರು ದಾವಣಗೆರೆ ಐಜಿಪಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಜಾಮೀನುರಹಿತ ವಾರೆಂಟ್ ಜಾರಿಯಲ್ಲಿ ವಿಫಲವಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಈ ಸಂಬಂಧ `ಏಕೆ ನಿಮ್ಮ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬಾರದು~ ಎಂದು ಕಾರಣ ಕೇಳಿ ರಾವ್ ಅವರಿಗೆ ನೋಟಿಸ್ ನೀಡಲಾಗಿತ್ತು.ಅವರು ನೀಡಿದ ಉತ್ತರವನ್ನು ಪರಿಗಣಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂಬ ವಿವರಣೆಯನ್ನೂ ಸರ್ಕಾರ ಸಿಇಸಿಗೆ ನೀಡಿದೆ.ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಕೆ

ಬೇಲೆಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದ ಅದಿರು ಕಳ್ಳತನ ಆಗಿರುವ ಬಗ್ಗೆ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಅದಿರು ಕಳ್ಳತನದಲ್ಲಿ ಭಾಗಿಯಾದ ಕಂಪೆನಿಗಳ ವಿರುದ್ಧ ಈಗಾಗಲೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ಷಾಮೀಲಾಗಿರುವ ಅಧಿಕಾರಿಗಳ ವಿರುದ್ಧ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ಯ ಅಡಿಯಲ್ಲಿ ಶೀಘ್ರದಲ್ಲಿ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ ಎಂಬ ವಿಷಯವನ್ನೂ ಸರ್ಕಾರ ಪ್ರಮಾಣಪತ್ರದಲ್ಲಿ ತಿಳಿಸಿದೆ.ಅದಿರು ನಾಪತ್ತೆ ಪ್ರಕರಣದಲ್ಲಿ ಬಂದರು ಸಂರಕ್ಷಣಾಧಿಕಾರಿ ಮಹೇಶ್ ಬಿಲಿಯೆ ಭಾಗಿ ಆಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಅವರ ವಿರುದ್ಧ 25 ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿದೆ. ಸಲಗಾಂವ್ಕರ್ ಗಣಿ ಕಂಪೆನಿ, ರಾಜಮಹಲ್ ಸಿಲ್ಕ್ಸ್ ಮತ್ತು ಅದಾನಿ ಎಂಟರ್‌ಪ್ರೈಸಸ್ ವಿರುದ್ಧ ಈಗಾಗಲೇ ಆರೋಪಪಟ್ಟಿ ಸಲ್ಲಿಸಲಾಗಿದೆ.ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪೆನಿ ವಿರುದ್ಧದ ಪ್ರಕರಣದ ತನಿಖೆ ಅಂತ್ಯಗೊಂಡಿದೆ. ಈ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸುವ ಸಂಬಂಧ ಹೈಕೋರ್ಟ್ ಜೊತೆ ವ್ಯವಹರಿಸುವಂತೆ ಕಾನೂನು ಇಲಾಖೆಯನ್ನು ಕೋರಲಾಗಿದೆ. ಈ ಹಂತದಲ್ಲಿ ಸುಪ್ರೀಂಕೋರ್ಟ್‌ನ ಮಧ್ಯ ಪ್ರವೇಶ ಅಗತ್ಯವಿಲ್ಲ ಎಂದು ಸಿಇಸಿಯ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಿದೆ.ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ ಮತ್ತು ಜಿಂದಾಲ್ ಸಮೂಹದ ನಡುವಿನ ಅವ್ಯವಹಾರ ಕುರಿತು ಸಿಬಿಐ ತನಿಖೆ ಪ್ರಗತಿಯಲ್ಲಿದೆ. ಅಕ್ರಮ ಗಣಿಗಾರಿಕೆ ನಡೆಸಿರುವವರಿಂದ ಲಂಚ ಪಡೆದ ಆರೋಪ ಎದುರಿಸುತ್ತಿರುವ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದು, ಉತ್ತರವನ್ನೂ ಸಲ್ಲಿಸಿದ್ದಾರೆ. ಈ ಸಂಬಂಧ ಕಾನೂನು ಇಲಾಖೆಯ ಅಭಿಪ್ರಾಯ ಕೋರಲಾಗಿದೆ ಎಂದು ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.