ಬಿಎಸ್‌ವೈ ಬಂಧನದಿಂದ ಮುಜುಗರ

7

ಬಿಎಸ್‌ವೈ ಬಂಧನದಿಂದ ಮುಜುಗರ

Published:
Updated:

ಬೆಂಗಳೂರು: `ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಂಧನದಿಂದ ಬಿಜೆಪಿಗೆ ಮಾತ್ರ ಮುಜುಗರವಾಗಿಲ್ಲ. ಈ ಪ್ರಕರಣದಿಂದ ಸಮಾಜಕ್ಕೇ ಮುಜುಗರ ಉಂಟಾಗಿದೆ~ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಹೇಳಿದರು.ಇಲ್ಲಿನ ರಾಷ್ಟ್ರೀಯ ನರವಿಜ್ಞಾನ ಮತ್ತು ಮಾನಸಿಕ ಆರೋಗ್ಯ ಸಂಸ್ಥೆಯ (ನಿಮ್ಹಾನ್ಸ್) ಆವರಣದಲ್ಲಿ `ವಾಸನ್ ಐ ಕೇರ್ ಆಸ್ಪತ್ರೆ~ಯು `ಶ್ರೇಷ್ಠ ಶಿಕ್ಷಕ ಪ್ರಶಸ್ತಿ~ ಪುರಸ್ಕೃತ ಅಧ್ಯಾಪಕರಿಗೆ ಭಾನುವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.`ನಮ್ಮನ್ನು ರಾಜಕೀಯವಾಗಿ ಬೆಳೆಸಿದ ನಾಯಕ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವುದು ನೋವಿನ ವಿಚಾರ. ರಾಜಕೀಯ ಕ್ಷೇತ್ರ ಕೂಡ ಪವಿತ್ರವಾದುದು ಎಂದು ಜನತೆಗೆ ತೋರಿಸುವ ಜವಾಬ್ದಾರಿ ಇಂದು ನಮ್ಮ ಮೇಲಿದೆ~ ಎಂದು ಹೇಳಿದರು.ಇದಕ್ಕೂ ಮೊದಲು ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ರಾಜಕಾರಣಿಗಳು ಇಂದು ಹಾಸ್ಯಾಸ್ಪದ ವ್ಯಕ್ತಿಗಳಾಗಿ ಕಾಣುತ್ತಿರಬಹುದು. ಆದರೆ ಅವರೇ ದೇಶದ ನೀತಿ ನಿರೂಪಕರು. ಸಮಾಜದ ಸಮಸ್ಯೆಗಳನ್ನು ಪರಿಹರಿಸುವವರೂ ಅವರೇ~ ಎಂದು ಹೇಳಿದರು.`ರಾಜಕಾರಣಿಗಳು ಇಂದು ಭ್ರಷ್ಟರಾಗಿರಬಹುದು. ಆದರೆ ಅವರನ್ನು ಭ್ರಷ್ಟರನ್ನಾಗಿ ರೂಪಿಸಿದ್ದು ಯಾರು?~ ಎಂದು ಪ್ರಶ್ನಿಸಿದ ಸಚಿವರು, `ಇಂದಿನ ರಾಜಕಾರಣಿಗಳಲ್ಲಿ ಮೌಲ್ಯಗಳು ಕುಸಿಯುತ್ತಿರುವ ರೀತಿಯಲ್ಲೇ ಶಿಕ್ಷಕರಲ್ಲೂ ಶ್ರೇಷ್ಠ ಮೌಲ್ಯಗಳು ಕುಸಿಯುತ್ತಿವೆ~ ಎಂದರು.`ಪತ್ರಿಕೆ ನೋಡಿ ಖುಷಿಯಾಯ್ತು!~: `ಇಂದಿನ (ಭಾನುವಾರ) ಪತ್ರಿಕೆಗಳ ಮುಖಪುಟದಲ್ಲಿ ದುಃಖದ ಸುದ್ದಿ ಇತ್ತೆಂಬುದು ನಿಜ. ಆದರೆ ಪತ್ರಿಕೆಗಳಲ್ಲಿ ಪ್ರಕಟವಾದ ಒಂದು ಸುದ್ದಿ ನೋಡಿ ಖುಷಿಯಾಯಿತು.ಭಾರತದ ಅರ್ಥ ವ್ಯವಸ್ಥೆ ಇತರ ದೇಶಗಳು ಅನುಸರಿಸಲು ಯೋಗ್ಯವಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹೇಳಿರುವುದು ನಮ್ಮ ಪಾಲಿಗೆ ಹೆಮ್ಮೆಯ ಸಂಗತಿ~ ಎಂದು ಅಭಿಪ್ರಾಯಪಟ್ಟರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಉಪಮೇಯರ್ ಎಸ್. ಹರೀಶ್, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಮತ್ತಿತರರು ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry