ಬಿಎಸ್‌ವೈ ಬಂಧನ: ಸಿಬಿಐ ಇಂಗಿತ

7

ಬಿಎಸ್‌ವೈ ಬಂಧನ: ಸಿಬಿಐ ಇಂಗಿತ

Published:
Updated:
ಬಿಎಸ್‌ವೈ ಬಂಧನ: ಸಿಬಿಐ ಇಂಗಿತ

ಬೆಂಗಳೂರು: ಜಿಂದಾಲ್ ಸಮೂಹದ ಸೌತ್‌ವೆಸ್ಟ್ ಮೈನಿಂಗ್ ಕಂಪೆನಿ ಜೊತೆಗಿನ ಸಂಶಯಾಸ್ಪದ ಭೂ ವ್ಯವಹಾರ ಮತ್ತು ದೇಣಿಗೆ ಪಡೆದಿರುವ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ ಎಂದಿರುವ ಸಿಬಿಐ, ಬಂಧನದ ಸಾಧ್ಯತೆಯನ್ನು ಹೊರಗೆಡವಿದೆ.ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಮತ್ತು ಅಳಿಯ ಆರ್.ಎನ್.ಸೋಹನ್‌ಕುಮಾರ್ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಗೆ ಸಿಬಿಐ ಶುಕ್ರವಾರ ಆಕ್ಷೇಪಣೆ ಸಲ್ಲಿಸಿದೆ. ಪ್ರಕರಣದ ತನಿಖಾಧಿಕಾರಿ ಬಿಸ್ವಜಿತ್ ದಾಸ್ ಸಹಿ ಮಾಡಿರುವ ಆರು ಪುಟಗಳ ಆಕ್ಷೇಪಣೆಯಲ್ಲಿ, `ಯಡಿಯೂರಪ್ಪ ಅವರನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸುವುದು ಅನಿವಾರ್ಯ~ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. `ಇದು ಒಂದು ಗಂಭೀರ ಪ್ರಕರಣ. ಈ ಪ್ರಕರಣದಲ್ಲಿ ದೊಡ್ಡ ಮೊತ್ತದ ಹಣಕಾಸಿನ ವ್ಯವಹಾರವೂ ಒಳಗೊಂಡಿದೆ. ಇಲ್ಲಿ ಯಡಿಯೂರಪ್ಪ ಅವರಿಗೆ ಮಾತ್ರವೇ ತಿಳಿದಿರುವಂತಹ ಕೆಲವು ಮಾಹಿತಿಯನ್ನೂ ತನಿಖಾ ತಂಡ ಹೊರ ತೆಗೆಯಬೇಕಾಗುತ್ತದೆ. ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸುವುದರಿಂದ ಮಾತ್ರವೇ ಅದು ಸಾಧ್ಯವಾಗುತ್ತದೆ~ ಎಂದು ಸಿಬಿಐ ಆಕ್ಷೇಪಣೆಯಲ್ಲಿ ತಿಳಿಸಿದೆ.`ಯಡಿಯೂರಪ್ಪ ಅವರು ನಿಕಟಪೂರ್ವ ಮುಖ್ಯಮಂತ್ರಿ. ಈ ಪ್ರಕರಣದಲ್ಲಿ ಸಾಕ್ಷಿಗಳಾಗಿರುವ ಅನೇಕ ಅಧಿಕಾರಿಗಳು ಆರೋಪಿಯ ಅಧೀನದಲ್ಲಿ ಕರ್ತವ್ಯ ನಿರ್ವಹಿಸಿದವರು. ಈಗಲೂ ಯಡಿಯೂರಪ್ಪ ಅವರು ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ.ಆರೋಪಿಗೆ ನಿರೀಕ್ಷಣಾ ಜಾಮೀನು ದೊರೆತಲ್ಲಿ ಅಧಿಕಾರಿಗಳು ಮುಕ್ತವಾಗಿ ಸಾಕ್ಷ್ಯ ಹೇಳದಿರಬಹುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಬೇಕಿದೆ. ಅದು ಕೂಡ ಸಾಧ್ಯ ಆಗದೇ ಇರಬಹುದು~ ಎಂದು ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿದೆ.`ಯಡಿಯೂರಪ್ಪ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 409ರ (ವಿಶ್ವಾಸದ್ರೋಹ) ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಈ ಆರೋಪ ಸಾಬೀತಾದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ವಿಶೇಷ ಸಂದರ್ಭಗಳಲ್ಲಿ ಮಾತ್ರವೇ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸೌಲಭ್ಯ ಒದಗಿಸಬಹುದು. ಆದರೆ, ಈ ಪ್ರಕರಣದಲ್ಲಿ ಯಡಿಯೂರಪ್ಪ ಮತ್ತು ಇತರೆ ಆರೋಪಿಗಳು ಈ ಸೌಲಭ್ಯಕ್ಕೆ ಅರ್ಹರಲ್ಲ~ ಎಂದು ಸಿಬಿಐ ಪ್ರತಿಪಾದಿಸಿದೆ.ಖುದ್ದು ಹಾಜರಿಗೆ ಅರ್ಜಿ:
ನಿರೀಕ್ಷಣಾ ಜಾಮೀನು ಅರ್ಜಿಯಾದ ಹಿನ್ನೆಲೆಯಲ್ಲಿ ಆರೋಪಿಗಳ ಅನುಪಸ್ಥಿತಿ ಯಲ್ಲೇ ಈವರೆಗೂ ವಿಚಾರಣೆ ನಡೆಯುತ್ತಿತ್ತು. ಆದರೆ, ಶುಕ್ರವಾರ ಪ್ರತ್ಯೇಕ ಅರ್ಜಿ ಸಲ್ಲಿಸಿರುವ ಸಿಬಿಐ, ವಿಚಾರಣೆ ವೇಳೆ ಹಾಜರಿರುವಂತೆ ಎಲ್ಲ ಆರೋಪಿಗಳಿಗೂ ಆದೇಶಿಸಲು ಕೋರಿದೆ.`ಅಪರಾಧ ದಂಡ ಪ್ರಕ್ರಿಯಾ ಸಂಹಿತೆಗೆ (ಸಿಆರ್‌ಪಿಸಿ) ಇತ್ತೀಚೆಗೆ ತಂದಿರುವ ತಿದ್ದುಪಡಿ ಪ್ರಕಾರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ವೇಳೆಯೂ ಆರೋಪಿಗಳ ಹಾಜರಿ ಅಗತ್ಯ. ಆ ಪ್ರಕಾರ ಯಡಿಯೂರಪ್ಪ, ಅವರ ಪುತ್ರರು ಮತ್ತು ಅಳಿಯನಿಗೆ ವಿಚಾರಣೆ ವೇಳೆ ಹಾಜರಿರುವಂತೆ ಆದೇಶಿಸಬೇಕು~ ಎಂದು ಮನವಿ ಮಾಡಿದೆ.ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವೆಂಕಟ ಸುದರ್ಶನ್ ಅವರು ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದರು. ಮೊದಲು ಆಕ್ಷೇಪಣಾ ಹೇಳಿಕೆ ಸಲ್ಲಿಸಿದ ಸಿಬಿಐ, ನಂತರ ಆರೋಪಿಗಳ ಖುದ್ದು ಹಾಜರಿ ಕೋರಿ ಅರ್ಜಿ ಸಲ್ಲಿಸಿತು. ಖುದ್ದು ಹಾಜರಿ ಕೋರಿದ ಅರ್ಜಿಗೆ ಆಕ್ಷೇಪಣಾ ಹೇಳಿಕೆ ಸಲ್ಲಿಸುವಂತೆ ಯಡಿಯೂರಪ್ಪ ಪರ ವಕೀಲರಿಗೆ ಸೂಚಿಸಿದ ನ್ಯಾಯಾಧೀಶರು, ಮಂಗಳವಾರಕ್ಕೆ ವಿಚಾರಣೆ ಮುಂದೂಡಿದರು.

ಸುಪ್ರೀಂಕೋರ್ಟ್ ಆದೇಶದಂತೆ ಈ ಪ್ರಕರಣದಲ್ಲಿ ಯಡಿಯೂರಪ್ಪ ಮತ್ತು ಇತರರ ವಿರುದ್ಧ ಮೇ 15ರಂದು ಸಿಬಿಐ ಪ್ರಥಮ ಮಾಹಿತಿ ವರದಿ ದಾಖಲಿಸಿತ್ತು. ಮೇ 16ರಂದು ಆರೋಪಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.ಅದೇ ದಿನ ಯಡಿಯೂರಪ್ಪ, ಅವರ ಪುತ್ರರು ಮತ್ತು ಅಳಿಯ ನಿರೀಕ್ಷಣಾ ಜಾಮೀನು ಕೋರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಸಿಬಿಐ ಕೋರಿಕೆಯಂತೆ ಅರ್ಜಿಯ ವಿಚಾರಣೆಯನ್ನು ಸಿಬಿಐ ನ್ಯಾಯಾಲಯಕ್ಕೆ ವರ್ಗಾಯಿಸಿ ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry