ಶನಿವಾರ, ಜನವರಿ 18, 2020
25 °C

ಬಿಎಸ್‌ವೈ ಬಾಯಿ ಮುಚ್ಚಿಸಿ, ಇಲ್ಲ ಕ್ರಮ ಕೈಗೊಳ್ಳಿ: ಶಿವಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಪುನಃ ಮುಖ್ಯಮಂತ್ರಿಯಾಗಲು ಹಪಹಪಿಸುತ್ತಿರುವ ಅವರು, ಪಕ್ಷವನ್ನು ಹಾಳುಗೆಡವುತ್ತಿದ್ದಾರೆ~ ಎಂದು ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಿ.ಬಿ.ಶಿವಪ್ಪ ಇಲ್ಲಿ ಆರೋಪಿಸಿದರು.`ಯಡಿಯೂರಪ್ಪನವರ ಬಾಯಿ ಮುಚ್ಚಿಸಿ, ಇಲ್ಲವೇ ಅವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಿ~ ಎಂದು ಬಿಜೆಪಿ ವರಿಷ್ಠರಿಗೆ ಶೀಘ್ರದಲ್ಲಿಯೇ ಮನವಿ ಮಾಡಲಾಗುವುದು~ ಎಂದು ಅವರು ವಿವರಿಸಿದರು.`ಹಿರಿಯರ ವೇದಿಕೆ~ ಕಟ್ಟಿಕೊಂಡು ಕಾರ್ಯಕರ್ತರನ್ನು ದಾರಿ ತಪ್ಪಿಸುತ್ತಿರುವುದಾಗಿ ಪಕ್ಷದ ಅಧ್ಯಕ್ಷರು ನೀಡಿರುವ ನೋಟಿಸ್‌ಗೆ ತಾವು ನೀಡಿರುವ ಉತ್ತರದ ಬಗ್ಗೆ ತಿಳಿಸುವ ಸಂಬಂಧ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.`ಮುಖ್ಯಮಂತ್ರಿಯಾಗಿದ್ದವರೊಬ್ಬರು ಇದೇ ಮೊದಲ ಬಾರಿಗೆ ಜೈಲು ಸೇರಿದ್ದು ದುರ್ದೈವ. ಜನರ ದೃಷ್ಟಿಯಲ್ಲಿ ಕುಗ್ಗಿರುವ ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಶ್ರಮಿಸುತ್ತಿರುವ ನನಗೆ, ನೋಟಿಸ್ ನೀಡಿರುವ ಹಿಂದಿನ ಒಳಮರ್ಮ ತಿಳಿಯುತ್ತಿಲ್ಲ.~`ವೇದಿಕೆ ಕಟ್ಟಿಕೊಂಡು ಪಕ್ಷದ ಪರವಾಗಿ ಕೆಲಸ ಮಾಡುವ ನನಗೆ ನೋಟಿಸ್, ಪಕ್ಷ ವಿರೋಧಿ ಕೆಲಸ ಮಾಡುವವರಿಗೆ ನಾಯಕಪಟ್ಟ. ಇದ್ಯಾವ ನ್ಯಾಯ~ ಎಂದು ಅವರು ಪ್ರಶ್ನಿಸಿದರು.

ಕಮಲದ ಆಪರೇಷನ್: `ಆಪರೇಷನ್ ಕಮಲ ಯಾವಾಗ ಆರಂಭಗೊಂಡಿತೋ, ಆಗ ಕಮಲದ ಆಪರೇಷನ್ ಆಗಿದೆ. ಆಪರೇಷನ್ ಕಮಲ ಮೂಲಕ ಬಿಜೆಪಿ ಸೇರಿರುವ ಯಾರೂ ಈ ಪಕ್ಷದ ತತ್ವ-ಸಿದ್ಧಾಂತ ನೋಡಿ ಬಂದಿಲ್ಲ. ತಮ್ಮ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಬಹುದು ಎಂದು ಆಡಳಿತ ಪಕ್ಷಕ್ಕೆ ಸೇರಿದ್ದಾರೆ ಅಷ್ಟೇ. ನಾಳೆ ಬೇರೆ ಪಕ್ಷ ಆಡಳಿತಕ್ಕೆ ಬಂದರೆ ಅಲ್ಲಿ ಹೋಗುತ್ತಾರೆ. ಇದು ಗೊತ್ತಿಲ್ಲದೇ ಎಲ್ಲರೂ ತಮ್ಮ ಹಿಂದೆ ಇದ್ದಾರೆ ಎನ್ನುವ ಭ್ರಮೆಯಲ್ಲಿ ಯಡಿಯೂರಪ್ಪ ಇದ್ದಾರೆ~ ಎಂದು ಲೇವಡಿ ಮಾಡಿದರು.ಯಡಿಯೂರಪ್ಪ ಎಲ್ಲಿಗೆ ಹೋದರೂ ಅವರ ಹಿಂದೆ ಜನ ಈಗಲೂ ಇರುತ್ತಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಪ್ಪ, `ಹಣ ಕೊಟ್ಟು ಜನ ಖರೀದಿ ಮಾಡುವುದು ದೊಡ್ಡ ಕೆಲಸವಲ್ಲ. ನಮ್ಮ ಹಿಂದೆ ಕಡಿಮೆ ಜನ ಇದ್ದರೂ ಅವರು ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾದವರು. ಸಂಖ್ಯೆ ಇಲ್ಲಿ ಮುಖ್ಯವಾಗುವುದಿಲ್ಲ. ಮಹಾಭಾರತದಲ್ಲಿ ಕೌರವರ ಹಿಂದೆಯೇ ಹೆಚ್ಚಿಗೆ ಜನ ಇದ್ದರು. ಆದರೆ ಗತಿ ಏನಾಯಿತು~ ಎಂದು ಕೇಳಿದರು.`ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪ್ರೋತ್ಸಾಹಿಸಿ ನೆರವು ನೀಡುವ ಬದಲು ತಮಗೇ ಸಿಎಂ ಪಟ್ಟ ಬೇಕು ಎಂದು ಯಡಿಯೂರಪ್ಪ ಒದ್ದಾಡುತ್ತಿರುವುದು ನಗೆಪಾಟಲು~ ಎಂದು ಶಿವಪ್ಪ ತಿಳಿಸಿದರು. ವೇದಿಕೆ ಪ್ರಧಾನ ಕಾರ್ಯದರ್ಶಿ ವಿನಯಚಂದ್ರ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)