ಬುಧವಾರ, ಅಕ್ಟೋಬರ್ 16, 2019
21 °C

ಬಿಎಸ್‌ವೈ ಬಿರುಸು ನಡೆ

Published:
Updated:

ಬೆಂಗಳೂರು: `ನಾನು ಬೇಕೆ ಅಥವಾ ಬೇಡವೆ ಹೇಳಿ. ನಾನಿಲ್ಲದೆ ಚುನಾವಣೆ ಎದುರಿಸಬಲ್ಲಿರಿ ಎನ್ನುವುದಾದರೆ ನನ್ನದೇನೂ ಅಭ್ಯಂತರ ಇಲ್ಲ. ನನ್ನ ದಾರಿ ನನಗೆ...~  ಬೆಂಗಳೂರು ನಗರದ ಬಿಜೆಪಿ ಶಾಸಕರನ್ನು ಹೀಗೆ ಖಡಕ್ ಆಗಿ ಕೇಳಿದ್ದಾರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.ರೇಸ್‌ಕೋರ್ಸ್ ರಸ್ತೆಯ ತಮ್ಮ ನಿವಾಸದಲ್ಲಿ ಸೋಮವಾರ ಶಾಸಕರೊಂದಿಗೆ ಮಾತುಕತೆ ನಡೆಸಿದ ಅವರು, `ಸಮೂಹ ನಾಯಕ ಇಲ್ಲದೆ ಚುನಾವಣೆ ಎದುರಿಸಲಾಗದು~ ಎಂದು ಎಚ್ಚರಿಕೆ ನೀಡಿದರು ಎಂದು ಗೊತ್ತಾಗಿದೆ.ಸಚಿವರಾದ ಎಸ್.ಸುರೇಶ್‌ಕುಮಾರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಶಾಸಕರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸತೀಶ್ ರೆಡ್ಡಿ, ಹೇಮಚಂದ್ರ ಸಾಗರ ಹೊರತುಪಡಿಸಿ ಗೃಹ ಸಚಿವ ಆರ್. ಅಶೋಕ ಸೇರಿದಂತೆ ಉಳಿದ ಎಲ್ಲ 11 ಶಾಸಕರೂ ಯಡಿಯೂರಪ್ಪ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.`ಯಾವುದೇ ಪಕ್ಷಕ್ಕೆ ಜನರನ್ನು ಸೆಳೆಯಬಲ್ಲ ನಾಯಕನ ಅಗತ್ಯ ಇದೆ. ಅದಿಲ್ಲದೆ ಏನೂ ಮಾಡಲಾಗದು. ಹೀಗಾಗಿ ನನ್ನ ಅಗತ್ಯ ಇದ್ದರೆ ನೀವು 70-80 ಮಂದಿ ಶಾಸಕರನ್ನು ಕರೆದುಕೊಂಡು ದೆಹಲಿಗೆ ಹೋಗಿ. ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕಿ~ ಎಂದೂ ಸೂಚ್ಯವಾಗಿ ಹೇಳಿ ಕಳುಹಿಸಿದ್ದಾರೆ.`ವೀರೇಂದ್ರ ಪಾಟೀಲರನ್ನು ಅಧಿಕಾರದಿಂದ ಕೆಳಗಿಳಿಸಿದ ಮೇಲೆ 20 ವರ್ಷವಾದರೂ ಕಾಂಗ್ರೆಸ್‌ಗೆ ಚೇತರಿಸಿಕೊಳ್ಳಲು ಆಗಿಲ್ಲ. ಇದನ್ನು ನೆನಪಿನಲ್ಲಿ ಇಟ್ಟುಕೊಂಡರೆ ಸಾಕು. ನಾನು ಹೆಚ್ಚಿಗೆ ಹೇಳಲು ಹೋಗುವುದಿಲ್ಲ~ ಎಂದು ತಮ್ಮನ್ನು ಬಿಟ್ಟು ರಾಜಕಾರಣ ಮಾಡಿದರೆ ಬಿಜೆಪಿಗೆ ಭವಿಷ್ಯ ಇಲ್ಲ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.`ವಿಧಾನಸೌಧದ ಮೂರನೇ ಮಹಡಿಯಲ್ಲಿ (ಮುಖ್ಯಮಂತ್ರಿ ಕಚೇರಿ ಇರುವುದು) ಏನೂ ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳು ಯಾರ ಮಾತೂ ಕೇಳುತ್ತಿಲ್ಲ. ಸದಾನಂದ ಗೌಡರು ರಿಸ್ಕ್ ತೆಗೆದುಕೊಂಡು ಏನೂ ಕೆಲಸ ಮಾಡುತ್ತಿಲ್ಲ. ಹೀಗಾದರೆ ಚುನಾವಣೆ ಎದುರಿಸುವುದು ಹೇಗೆ? ಅಧಿಕಾರಿಗಳನ್ನು ನಾನಿದ್ದಾಗ ದಬಾಯಿಸಿ ಕೆಲಸ ಮಾಡಿಸುತ್ತಿದ್ದೆ~ ಎಂದು ಶಾಸಕರನ್ನು ಉದ್ದೇಶಿಸಿ ಮಾತನಾಡುವಾಗ ಪ್ರಸ್ತಾಪಿಸಿದ್ದಾರೆ.`ಮುಖ್ಯಮಂತ್ರಿ ನಾನು ಹೇಳಿದ ಕೆಲಸಗಳನ್ನು ಮಾಡುತ್ತಿಲ್ಲ. ತಾವು ಹೇಳಿದಾಗ ಅಧಿಕಾರ ತ್ಯಜಿಸುವುದಾಗಿ ಆಣೆ ಮಾಡಿದ್ದ ಅವರು ಈಗ ಉಲ್ಟಾ ಹೊಡೆಯುತ್ತಿದ್ದಾರೆ.ಸಂಸದನ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಬೇಡ ಅಂದಿದ್ದೆ. ವಿಧಾನ ಪರಿಷತ್ ಸದಸ್ಯ ಸ್ಥಾನವೂ ಬೇಡ ಅಂದಿದ್ದೆ. ಯಾವುದೂ ಇಲ್ಲದಂತೆ ಆಗುವುದು ಬೇಡ ಅಂತ ಹೀಗೆ ಹೇಳಿದ್ದೆ. ಆದರೆ, ಅವರು ನನ್ನ ಮಾತು ಕೇಳಲಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.`ಶಾಸಕರ ಅಭಿವೃದ್ಧಿ ಕೆಲಸಕ್ಕೂ ಮತ್ತು ಪಕ್ಷ ರಾಜಕಾರಣಕ್ಕೂ ಸಂಬಂಧ ಇರಬಾರದು. ದುರ್ದೈವದಿಂದ ನಮ್ಮಲ್ಲಿ ಆ ಪರಿಸ್ಥಿತಿ ತಲೆದೋರಿದೆ. ಇಂತಹ ವ್ಯವಸ್ಥೆ ನಾನೆಲ್ಲಿಯೂ ನೋಡಿಲ್ಲ. ಇದೊಂದು ವಿಚಿತ್ರ ಸಂಗತಿ. ಎಲ್ಲದಕ್ಕೂ ಪಕ್ಷದ ಅಧ್ಯಕ್ಷರ ಕಡೆ ನೋಡಿ ಕೆಲಸ ಮಾಡುವುದು ಸರಿಯಲ್ಲ. ಅಧ್ಯಕ್ಷರ ಮೂಲಕವೇ ಅರ್ಜಿ ಬರಬೇಕು ಎನ್ನುವುದು ಕೂಡ ಸರಿಯಲ್ಲ~ ಎಂದು ಹೇಳಿದ್ದಾರೆ.`ಚುನಾವಣೆಗಳು ಹತ್ತಿರದಲ್ಲಿವೆ. ಈಗ ಒಂದೊಂದು ದಿನವೂ ಮುಖ್ಯ. ಪ್ರಬಲ ಸಮುದಾಯದ ನಾಯಕರ ಅಗತ್ಯ ಇದೆ. ಇದನ್ನು ಮನಗಂಡು ಸೂಕ್ತ ತೀರ್ಮಾನಕ್ಕೆ ಬನ್ನಿ. ವರಿಷ್ಠರನ್ನು ಮನವೊಲಿಸುವ ಕೆಲಸ ಮಾಡಿ~ ಎಂದು ಕಿವಿಮಾತು ಹೇಳಿದ್ದಾರೆ.`ನನ್ನನ್ನು ಪಕ್ಷದಿಂದ ಹೊರ ಹಾಕುವ ಹುನ್ನಾರ ನಡೆದಿದೆ. ಆ ಕೆಲಸ ಮಾಡುವವರಿಗೆ ತಕ್ಕ ಪಾಠ ಕಲಿಸುವ ಮತ್ತು ಅವರನ್ನು ಪಕ್ಷದಿಂದ ಹೊರ ಹಾಕುವ ಶಕ್ತಿ ನನಗೂ ಇದೆ. ಆದರೆ, ಅಂತಹ ಪ್ರಯತ್ನವನ್ನು ಈಗ ಮಾಡಲು ಹೋಗುವುದಿಲ್ಲ. ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ~ ಎಂದು ವಿವರಿಸಿದ್ದಾರೆ.ಒಂದು ಹಂತದಲ್ಲಿ ನಗರ ಘಟಕದ ಅಧ್ಯಕ್ಷ ಸುಬ್ಬಣ್ಣ ಮಾತನಾಡಿ, `ಸಾರ್ ನೀವು ಎಲ್ಲರನ್ನೂ ಒಂದಾಗಿ ನೋಡಬೇಕು. ಇವರು ಅನಂತಕುಮಾರ್ ಗುಂಪು, ಅವರು ಮತ್ತೊಬ್ಬರ ಗುಂಪು ಎಂದು ಪ್ರತ್ಯೇಕಿಸಬೇಡಿ. ನೀವೆಲ್ಲರೂ ನಾಯಕರು. ಒಂದಾಗಿರಬೇಕು~ ಎಂದೂ ಹೇಳಿದರು. ಇದಕ್ಕೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಲಿಲ್ಲ ಎನ್ನಲಾಗಿದೆ.`ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರುವುದು ಉತ್ತಮ~ ಎಂದೂ ಕೆಲ ಶಾಸಕರು ಯಡಿಯೂರಪ್ಪ ಅವರಿಗೆ ಸಲಹೆ ಮಾಡಿದ್ದಾರೆ. ಆಗ ಯಡಿಯೂರಪ್ಪ ಮಾತನಾಡಿ, `ಸುಮ್ಮನೆ ಮಾಡಿ ಅಂದ್ರೆ ಹೈಕಮಾಂಡ್ ಮಾಡಲ್ಲ. ಅದರ ಬದಲಿಗೆ, ಎಲ್ಲರೂ ದೆಹಲಿಗೆ ಹೋಗಬೇಕು. ಈ ಕೆಲಸ ಬೆಂಗಳೂರಿನ ಶಾಸಕರಿಂದಲೇ ಆರಂಭವಾಗಲಿ. ಬೆಂಗಳೂರಿನ ಶಾಸಕರು ನಿರ್ಧರಿಸಿದರೆ ಇಡೀ ರಾಜ್ಯದ ಶಾಸಕರು ನಿರ್ಧರಿಸಿದಂತೆ~ ಎಂದೂ ಸಲಹೆ ನೀಡಿದ್ದಾರೆ.ಪಕ್ಷ ಬಿಡಬೇಡಿ: `ಸರ್ ಎಲ್ಲವೂ ಸರಿಯಾಗುತ್ತದೆ. ಸದ್ಯಕ್ಕೆ ಪಕ್ಷ ತೊರೆಯುವ ಆತುರದ ನಿರ್ಧಾರ ಮಾತ್ರ ಬೇಡ~ ಎಂದೂ ಶಾಸಕರು ಸಲಹೆ ನೀಡಿದ್ದಾರೆ. ಹೀಗೆ ಹೇಳಿದ ತಕ್ಷಣ `ನಾನು ಬೇಕಾ ಬೇಡವಾ ಎನ್ನುವುದನ್ನು ಆದಷ್ಟು ಬೇಗ ನಿರ್ಧರಿಸಿ~ ಎಂದು ಹೇಳಿ ಎಲ್ಲರನ್ನೂ ಹೊರ ಕಳುಹಿಸಿದ್ದಾರೆ.ಸಭೆ ನಂತರ ಸಚಿವ ಅಶೋಕ ಸುದ್ದಿಗಾರರ ಜತೆ ಮಾತನಾಡಿ, `ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಯಡಿಯೂರಪ್ಪ ಜತೆ ಚರ್ಚಿಸಲಾಯಿತು. ಇದು ಬಿಟ್ಟು ಬೇರೇನೂ ಮಾತನಾಡಿಲ್ಲ. ಯಡಿಯೂರಪ್ಪನವರಿಗೆ ಸೂಕ್ತ ಸ್ಥಾನಮಾನ ಕೊಡುವ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ~ ಎಂದರು.ದತ್ತ ನೇಮಕಕ್ಕೆ ವಿರೋಧ: ಸಿಐಡಿ ಡಿಜಿಪಿಯನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ರೂಪಕ್‌ಕುಮಾರ್ ದತ್ತ ಅವರನ್ನು ನೇಮಕ ಮಾಡಿ ಭಾನುವಾರ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ತರಲು ನಗರದ ಬಿಜೆಪಿ ಶಾಸಕರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.ಬಿಬಿಎಂಪಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಿಐಡಿ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಖಡಕ್ ಅಧಿಕಾರಿ ದತ್ತ ನೇಮಕ ಬೇಡವಾಗಿತ್ತು. ಅವರನ್ನು ತಕ್ಷಣವೇ ಹಿಂದಕ್ಕೆ ಪಡೆಯುವಂತೆ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಾನಮಾನ- `ಹೈಕಮಾಂಡ್ ತೀರ್ಮಾನ~

ಬೆಂಗಳೂರು: ತಮಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಪಕ್ಷದ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ನಿರ್ಧರಿಸಲಿದೆ. ಈಗ ಕೇಂದ್ರದ ಎಲ್ಲ ನಾಯಕರೂ ಐದು ರಾಜ್ಯಗಳ ಚುನಾವಣೆಯ ಒತ್ತಡದಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ಬೆಂಗಳೂರು ನಗರದ ಶಾಸಕರ ಜತೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, `ರಾಜ್ಯ ರಾಜಕಾರಣ ತಣ್ಣಗಿದೆ. ಎಲ್ಲ ಪಕ್ಷಗಳ ನಾಯಕರ ಗಮನ ಈಗ ಐದು ರಾಜ್ಯಗಳ ಚುನಾವಣೆ ಕಡೆಗೆ ಇದೆ.   ರಾಜ್ಯದಲ್ಲಿಯೂ ರಾಜಕಾರಣದ ಕಾವು ಹೆಚ್ಚಾಗಿದೆಯಲ್ಲ ಎಂದು ಕೇಳಿದ ಪ್ರಶ್ನೆಗೆ `ಹಾಗೇನೂ ಇಲ್ಲ~ ಎಂದು ನಕ್ಕರು.

`ಇದೇ 15ರ ನಂತರ ಮುಂದಿನ ನಡೆ ಏನು ಎನ್ನುವುದನ್ನು ಬಹಿರಂಗಪಡಿಸುತ್ತೇನೆ~ ಎಂದು ಹೇಳಿದ ಅವರು `ಅಗತ್ಯ ಬಿದ್ದರೆ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಲಾಗುವುದು~ ಎಂದರು. `ಅವಧಿಗೂ ಮುನ್ನವೇ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವುದಿಲ್ಲ. ಈ ವಿಷಯದಲ್ಲಿ ಅನುಮಾನ ಬೇಡ~. `ನಾಯಕತ್ವದ ವಿಚಾರದಲ್ಲಿ ಸದ್ಯದಲ್ಲೇ ಒಂದು ತೀರ್ಮಾನಕ್ಕೆ ಬರಲಾಗುವುದು~ ಎಂದು ತಿಳಿಸಿದರು.

Post Comments (+)