ಮಂಗಳವಾರ, ಮಾರ್ಚ್ 9, 2021
30 °C

ಬಿಎಸ್‌ವೈ ಭ್ರಷ್ಟಾಚಾರ ಪ್ರಸ್ತಾಪ ಮಾಡಲ್ಲ: ಗೀತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಸ್‌ವೈ ಭ್ರಷ್ಟಾಚಾರ ಪ್ರಸ್ತಾಪ ಮಾಡಲ್ಲ: ಗೀತಾ

ಬೆಂಗಳೂರು: ‘ನನ್ನ ತಂದೆ ಬಂಗಾರಪ್ಪ ಅವರ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇನೆ ವಿನಾ  ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಇರುವ ಭ್ರಷ್ಟಾಚಾರದ ಆರೋಪಗಳ ಮೇಲೆ ಅಲ್ಲ’ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ತಿಳಿಸಿದರು.ಬೆಂಗಳೂರು ಪ್ರೆಸ್‌ಕ್ಲಬ್‌ ಹಾಗೂ ವರದಿಗಾರರ ಕೂಟ ಜಂಟಿಯಾಗಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ಈ ಚುನಾವಣೆಯ ಫಲಿತಾಂಶ ಏನೇ ಬಂದರೂ ರಾಜಕೀಯದಲ್ಲಿ ಮುಂದುವರೆಯಲು ನಿರ್ಧರಿಸಿದ್ದೇನೆ. ನನ್ನ ತಂದೆ ರಾಜಕೀಯ ಜೀವನದ ಸಂಕಷ್ಟದಲ್ಲಿದ್ದಾಗ ಸಹಾಯದ ಹಸ್ತ ಚಾಚಿದ್ದು ಜೆಡಿಎಸ್‌. ಕೊನೆಗಾಲದಲ್ಲಿ ಅವರು ಇದೇ ಪಕ್ಷದಲ್ಲೇ ಇದ್ದರು. ಸಹೋದರ ಮಧು ಕೂಡ ಜೆಡಿಎಸ್‌ನಲ್ಲೇ ಇದ್ದಾರೆ. ಹೀಗಾಗಿ ಜೆಡಿಎಸ್‌ ಸೇರಿದ್ದೇನೆ’ ಎಂದು ಸ್ಪಷ್ಟಪಡಿಸಿದರು.‘ನನ್ನ ತಂದೆ ಹೆಸರನ್ನು ಉಳಿಸುವ ಸಲುವಾಗಿ ರಾಜಕೀಯಕ್ಕೆ ಬಂದಿದ್ದೇನೆ. ಅವರ ಕನಸು ಹಾಗೂ ಕೆಲಸಗಳನ್ನು ಮುಂದುವರೆಸುತ್ತೇನೆ. ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ’ ಎಂದರು.‘ಮಾರ್ಚ್‌ 24ರಂದು ನಾಮಪತ್ರ ಸಲ್ಲಿಸಿದ ನಂತರ ನೇರವಾಗಿ ಕ್ಷೇತ್ರದ ಜನರ ಮನೆಬಾಗಿಲಿಗೆ ಹೋಗುತ್ತೇನೆ. ಅವರ ಸಮಸ್ಯೆಗಳನ್ನು ಆಲಿಸುತ್ತೇನೆ. ನಂತರ ಸಮಸ್ಯೆಗಳ ಪರಿಹಾರಕ್ಕೆ ಏನು ಮಾಡಬೇಕು ಎಂದು ನಿರ್ಧರಿಸಿ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.ಸಂವಾದದ ಸಾರಾಂಶ:

*ರಾಜಕೀಯ ಪ್ರವೇಶ ನಿಮ್ಮ ಸ್ವ ಇಚ್ಛೆಯೇ ಅಥವಾ ದೇವೇಗೌಡರು ಆಡುತ್ತಿರುವ ರಾಜಕೀಯ ಚದುರಂಗದ ಆಟಕ್ಕೆ ನೀವು ದಾಳವಾಗುತ್ತಿದ್ದೀರಾ?

ನಮ್ಮ ಕುಟುಂಬದಿಂದಲೇ ಯಾರನ್ನಾದರೂ ಶಿವಮೊಗ್ಗ ಕ್ಷೇತ್ರ­ದಿಂದ ಕಣಕ್ಕಿಳಿಸಬೇಕು ಎಂದು ಮೊದಲೇ ನಿರ್ಧಾರ­ವಾ­ಗಿತ್ತು. ಆದರೆ ನನ್ನ ತಾಯಿ ಆರೋಗ್ಯ ಸರಿಯಿಲ್ಲದ ಕಾರಣ ಅವರ ಬದಲಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನನ್ನ ನಿರ್ಧಾರದ ಹಿಂದೆ ಬೇರೆ ಯಾವ ದುರುದ್ದೇಶವೂ ಇಲ್ಲ.*ನೀವು ಕ್ಷೇತ್ರದ ಜನತೆಗೆ ಅಪರಿಚಿತರು ಎನ್ನುವ ಅಭಿಪ್ರಾಯ ಇದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? 

ನಾನು ಹುಟ್ಟಿ ಬೆಳೆದಿದ್ದು ಶಿವಮೊಗ್ಗದಲ್ಲೇ. ಅದು ನನ್ನ ತವರು ಮನೆ. ಸೋದರ ಮಧು ಚುನಾವಣೆಗೆ ನಿಂತಾಗ ಅಲ್ಲಿಗೆ ಹೋಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದೇನೆ. ಕ್ಷೇತ್ರದ ಜನರೊಂದಿಗೆ ನನಗೆ ಉತ್ತಮ ಸಂಬಂಧ ಇದೆ.*ಚುನಾವಣೆಯಲ್ಲಿ ಗೆದ್ದರೆ ಶಿವಮೊಗ್ಗದಲ್ಲೇ ನೆಲೆ ನಿಲ್ಲುತ್ತೀರಾ?

ನನ್ನ ಕುಟುಂಬ ಬೆಂಗಳೂರಿನಲ್ಲೇ ಇದೆ. ಅದಕ್ಕಾಗಿ ನಾನು ಬೆಂಗಳೂರಿನಲ್ಲೇ ಇರುತ್ತೇನೆ. ಆದರೆ ಕ್ಷೇತ್ರದ ಜನತೆಗೆ ನನ್ನ ಅಗತ್ಯ ಬಿದ್ದಾಗ ನಾನೇ ಅವರ ಬಳಿ ಹೋಗುತ್ತೇನೆ. ನನ್ನ ತಂದೆ  ಬೆಂಗಳೂರಿನಲ್ಲೇ ಇದ್ದು ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದರು.  *ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ನಿಮಗೆ ಅರಿವಿದೆಯೇ?

ಕ್ಷೇತ್ರದಲ್ಲಿ ದಂಡಾವತಿ ಯೋಜನೆ, ಅಡಿಕೆ ಬೆಳೆಗಾರರ ಸಮಸ್ಯೆ, ಬಗರ್‌ ಹುಕುಂ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ನೀರಾವರಿ ಹಾಗೂ ವಿದ್ಯುತ್‌ ಸಮಸ್ಯೆ ಅತಿ ಹೆಚ್ಚಾಗಿದೆ. ಈ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. *ಈ ಚುನಾವಣೆಯಲ್ಲಿ ಇನ್ನೊಬ್ಬ ಸೋದರ ಕುಮಾರ ಬಂಗಾರಪ್ಪ ಅವರ ಸಹಾಯ ಕೇಳುತ್ತೀರಾ?

ಅವರಿಗೆ ಅವರದ್ದೇ ಆದ ಸ್ಥಾನ ಮಾನ ಇದೆ. ಅವರು ಸಹ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರಿಂದ ಸಹಾಯ ಕೇಳುವ ಅಗತ್ಯ ನನಗಿಲ್ಲ. ಬದಲಾಗಿ ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ.*ದಂಡಾವತಿ ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯ?

ದಂಡಾವತಿ ಯೋಜನೆ ಏನು ಎಂದು ಸ್ವಲ್ಪ ಮಾಹಿತಿ ಇದೆ. ಈ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಆದರೆ ಈ ಯೋಜನೆಯ ಲಾಭ ಹೆಚ್ಚಿನ ಜನರಿಗೆ ದೊರೆಯುವಂತೆ ಮಾಡಲು ಪ್ರಯತ್ನಿಸುತ್ತೇನೆ.*ಪ್ರತಿ ಸಲವೂ ಬಂಗಾರಪ್ಪ ಅವರ ಹೆಸರಿನ ಅನುಕಂಪದ ಮೇಲೆ ಚುನಾವಣೆ ಗೆಲ್ಲಲ್ಲು ಸಾಧ್ಯವೇ?

ಈ ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ. ಇದಕ್ಕೆ ಸೂಕ್ತ ಉತ್ತರ ಶಿವಮೊಗ್ಗ ಕ್ಷೇತ್ರದ ಜನತೆ ನೀಡುತ್ತಾರೆ.*ಜೆಡಿಎಸ್‌ ಪೂಜಾ ಗಾಂಧಿಗೆ  ಮಾಡಿದಂತೆ ನಿಮಗೂ ಮಾಡುವ ಸಾಧ್ಯತೆ ಇರಬಹುದು? ಆಗ ನೀವೂ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗುತ್ತೀರಾ?

ಪೂಜಾ ಗಾಂಧಿ ಅವರಿಗೆ ಏನು ತೊಂದರೆಯಾಗಿದೆ ಎಂದು ನನಗೆ ಗೊತ್ತಿಲ್ಲ. ನಾನು ಯಾವ ತಪ್ಪು ಮಾಡಿಲ್ಲ. ಹೀಗಾಗಿಯೇ ನನಗೆ ಯಾವ ತೊಂದರೆಯೂ ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಕ್ಷ ಬಿಡುವ ಪ್ರಶ್ನೆಯೇ ಬರುವುದಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.