ಬಿಎಸ್‌ವೈ ಯೋಜನೆ ಮುಂದುವರಿಕೆ

7

ಬಿಎಸ್‌ವೈ ಯೋಜನೆ ಮುಂದುವರಿಕೆ

Published:
Updated:

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಎಲ್ಲಾ ಜನಪರ- ಜನಪ್ರಿಯ ಯೋಜನೆಗಳನ್ನು ಅದೇ ವೇಗದಲ್ಲಿ ಮುಂದುವರಿಸುವುದಾಗಿ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ವಾಗ್ದಾನ ಮಾಡಿದರು.

ನಗರದಲ್ಲಿ ಬುಧವಾರ ನಗರಸಭೆ ಹಮ್ಮಿಕೊಂಡಿದ್ದ  ಪೌರಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಯಡಿಯೂರಪ್ಪ ಕಂಡಿರುವ ಎಲ್ಲಾ ಕನಸುಗಳನ್ನು ನನಸು ಮಾಡಿಯೇ ತೀರುವುದಾಗಿ ಭರವಸೆ ನೀಡಿದ ಅವರು, ಪ್ರಸ್ತುತ ಯಾವುದೇ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳದೇ,  ಯಡಿಯೂರಪ್ಪ ಅವರು ಹಮ್ಮಿಕೊಂಡಿದ್ದ ಎಲ್ಲಾ ಯೋಜನೆಗಳನ್ನು ಮುಂದುವರಿಸುವುದಾಗಿ ಪ್ರಕಟಿಸಿದರು.ನಗರಸಭೆ ವಿವಿಧ ಕಾಮಗಾರಿಗಳಿಗೆ ಅನುದಾನ ನೀಡುವಂತೆ ನೀಡಿದ ಮನವಿಗೆ ಪ್ರತಿಕ್ರಿಯಿಸಿದ ಅವರು, `ನಿಮ್ಮ ಎಲ್ಲಾ ಬೇಡಿಕೆಗಳಿಗೆ ಇಂತಿಷ್ಟು ಹಣ ನೀಡುತ್ತೇನೆ ಎಂದು ವೇದಿಕೆಯಲ್ಲಿ ಘೋಷಣೆ ಮಾಡುವುದಿಲ್ಲ. ಆದರೆ, ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇನೆ~ ಎಂದು ಭರವಸೆ ನೀಡಿದರು.ಯಡಿಯೂರಪ್ಪ ಅವರು ಕಳೆದ ಮೂರು ವರ್ಷ ಜಿಲ್ಲೆಯಲ್ಲಿ, ರಾಜ್ಯದಲ್ಲಿ ಯಾರೂ ಮಾಡದ ಕೆಲಸ, ಯೋಜನೆಗಳನ್ನು ರೂಪಿಸ್ದ್ದಿದು, ಶಿವಮೊಗ್ಗ ನಗರ ಸೇರಿದಂತೆ ಎಲ್ಲೆಡೆಯೂ ಇದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಅವರು ಮಾಡಿದ್ದಾರೆ. ಅದನ್ನು ಯಾರೂ ಅಲ್ಲಗಳೆಯುವಂತಿಲ್ಲ ಎಂದರು.ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿ, `ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಗರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಗಿನ್ನಿಸ್ ದಾಖಲೆ ಸೇರುವಂತಹವು.

 

ಈ ಕ್ಷೇತ್ರದ ಶಾಸಕನಾಗಿ ನಾನು ಇಡೀ ಜನರ ಪರವಾಗಿ ಅವರಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸುತ್ತೇನೆ~ ಎಂದು ಧನ್ಯವಾದ ಸಲ್ಲಿಸಿದರು.ನಗರಸಭೆ ಇರುವವರೆಗೂ ಯಡಿಯೂರಪ್ಪ ಅವರ ಹೆಸರು ಚಿರಸ್ಥಾಯಿಯಾಗಿರುತ್ತದೆ ಎಂದು ಈಶ್ವರಪ್ಪ ಹೇಳಿದರು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿದರು.ನಗರಸಭಾ ಅಧ್ಯಕ್ಷ ಕೆ.ಎಸ್. ಗಂಗಾಧರಪ್ಪ ಮನವಿ ಸಲ್ಲಿಸಿ, ಸರ್ಕಾರದಿಂದ ಶಿವಮೊಗ್ಗ ನಗರಸಭೆಗೆ ಪಾಲಿಕೆಗಳಿಗೆ ನೀಡುವಂತೆಯೇ ಅನುದಾನ ನೀಡಬೇಕು. ಸದ್ಯಕ್ಕೆ  138 ಕೋಟಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ಶಾಸಕ ಕೆ.ಜಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಆರ್.ಕೆ. ಸಿದ್ದರಾಮಣ್ಣ, ಭಾರತಿ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, `ಸೂಡಾ~ ಅಧ್ಯಕ್ಷ ಜ್ಞಾನೇಶ್ವರ್, ಎಂಪಿಎಂ ಅಧ್ಯಕ್ಷ ಅರಗ ಜ್ಞಾನೇಂದ್ರ, ಜಿಲ್ಲಾಧಿಕಾರಿ ವಿ. ಪೊನ್ನುರಾಜ್, ಪೊಲೀಸ್ ವರಿಷ್ಠಾಧಿಕಾರಿ ರಮಣ್‌ಗುಪ್ತ ಮತ್ತಿತರರು ಉಪಸ್ಥಿತರಿದ್ದರು. ನಗರಸಭಾ ಸದಸ್ಯ ಎನ್.ಜೆ. ರಾಜಶೇಖರ್ ಸ್ವಾಗತಿಸಿದರು. ಸದಸ್ಯ ಎಂ. ಶಂಕರ್ ಸನ್ಮಾನ ಪತ್ರ ಓದಿದರು. ಸದಸ್ಯ ಚನ್ನಬಸಪ್ಪ ಕಾರ್ಯಕ್ರಮ ನಿರೂಪಿಸಿದರು.ಮಾಜಿ ಸಿಎಂ ಬಿಎಸ್‌ವೈ ಗೈರುಹಾಜರಿ

`ಕೃತಜ್ಞತಾ ಸಮರ್ಪಣಾ ಸನ್ಮಾನ~ ಸ್ವೀಕರಿಸಬೇಕಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗೈರುಹಾಜರಿ ಸಮಾರಂಭದಲ್ಲಿ ಎದ್ದು ಕಾಣುತ್ತಿತ್ತು.ಮುಖ್ಯಮಂತ್ರಿ ಆಗುವ ಕನಸು ಬಿದ್ದಿರಲಿಲ್ಲ: ಸದಾನಂದಗೌಡ

ಶಿವಮೊಗ್ಗ: 
`ನನಗೆ ಎಲ್ಲಾ ರೀತಿಯ ಕನಸುಗಳು ಬಿದ್ದಿವೆ. ಆದರೆ, ಮುಖ್ಯಮಂತ್ರಿ ಆಗುವ ಕನಸು ಮಾತ್ರ ಎಂದೂ ಬಿದ್ದಿರಲಿಲ್ಲ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಹಾಸ್ಯವಾಗಿ ಹೇಳಿದರು.`ಬಿಜೆಪಿಯ ಒಬ್ಬ ಸದಸ್ಯನಾದ ನನಗೆ ಪಕ್ಷ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಜವಾಬ್ದಾರಿ ನೀಡಿದೆ. ಆದರೆ, ಈಗ ಮುಖ್ಯಮಂತ್ರಿ ಆಗಿ ನೇರ ಬಡ್ತಿ ನೀಡಿದೆ. ಆ ಸ್ಥಾನದ ಜವಾಬ್ದಾರಿ ಅರಿವು ನನಗಿದೆ~ ಎಂದರು.`ಶಿವಮೊಗ್ಗ ಜನ ಬಹಳ ಬುದ್ಧಿವಂತರು. ತುಂಬಾ ಚೆನ್ನಾಗಿ ರಾಜಕೀಯವನ್ನೂ ಮಾಡುತ್ತಾರೆ ಎಂಬುದು ಇಲ್ಲಿಗೆ ಬಂದು ಸನ್ಮಾನ ಸ್ವೀಕರಿಸಿದಾಗಲೇ ಗೊತ್ತಾಯಿತು ಎಂದು ಹೇಳಿದ ಅವರು, ಬಿ.ಎಸ್. ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ಮುಖ್ಯಮಂತ್ರಿಯಾದ ನನ್ನ ತವರು ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಿಬಿಡುತ್ತೇನೆ ಎಂಬ ಭಯದಲ್ಲಿ ಶಿವಮೊಗ್ಗ ಜಿಲ್ಲೆಗೆ ನನ್ನನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದಾರೆ~ ಎಂದು ನಕ್ಕರು.`ಯಡಿಯೂರಪ್ಪ, ಈಶ್ವರಪ್ಪ ಮತ್ತು ಡಿ.ಎಚ್. ಶಂಕರಮೂರ್ತಿ ಈ ತ್ರಿಮೂರ್ತಿಗಳು ಅದ್ಭುತ ಮನುಷ್ಯರು ಎಂದು ಪ್ರಶಂಸಿಸಿದ ಅವರು, ನಗರಸಭೆಗೆ ಬೇಕಾದ ಅನುದಾನವನ್ನು ಯಡಿಯೂರಪ್ಪ ಅವರಿಂದ ಬರೆಸಿ, ಬರೆಸಿ ಸುಸ್ತಾಗಿಸಿದ್ದಾರೆ. ಈಗ ನನ್ನನ್ನು ಸುಸ್ತು ಮಾಡುವ ಕೆಲಸವನ್ನು ನಗರಸಭೆ ಅಧ್ಯಕ್ಷರು ಮಾಡುತ್ತಿದ್ದಾರೆ~ ಎಂದು ಸದಾನಂದಗೌಡ  ಮತ್ತೆ ನಕ್ಕರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry