ಬಿಎಸ್‌ವೈ ವರ್ತನೆಗೆ ಜೇಟ್ಲಿ ಅಸಮಾಧಾನ

7

ಬಿಎಸ್‌ವೈ ವರ್ತನೆಗೆ ಜೇಟ್ಲಿ ಅಸಮಾಧಾನ

Published:
Updated:

ಬೆಂಗಳೂರು: ರಾಷ್ಟ್ರೀಯ ಸೀನಿಯರ್ ಹಾಕಿ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯ ವೀಕ್ಷಣೆಗೆ ಸೋಮವಾರ ಸಂಜೆ ನಗರಕ್ಕೆ ಬಂದ ಬಿಜೆಪಿಯ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರು ರಾಜ್ಯ ಬಿಜೆಪಿಯಲ್ಲಿನ ಪ್ರಸಕ್ತ ವಿದ್ಯಮಾನಗಳ ಕುರಿತು ಪಕ್ಷದ ಮುಖಂಡರಿಂದ ಮಾಹಿತಿ ಪಡೆದರು.ಜೇಟ್ಲಿ ಜತೆ ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರೂ ಬಂದಿದ್ದಾರೆ. ಉಪ ಮುಖ್ಯಮಂತ್ರಿ ಆರ್.ಅಶೋಕ ಈ ಇಬ್ಬರೂ ಮುಖಂಡರನ್ನು ವಿಮಾನ ನಿಲ್ದಾಣದಿಂದ ಕರೆತಂದರು. ಬಳಿಕ ಹೋಟೆಲ್ ಅಶೋಕದಲ್ಲಿ ನಡೆದ ಮಾತುಕತೆಯಲ್ಲಿ ಅಶೋಕ ಸೇರಿದಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್, ಮುಖಂಡ ಎಂ.ಪಿ.ಕುಮಾರ್ ಭಾಗವಹಿಸಿದ್ದರು.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಮುಖಂಡರ ವಿರುದ್ಧವೇ ಬಹಿರಂಗ ಹೇಳಿಕೆ ನೀಡುತ್ತಿರುವ ಬಗ್ಗೆ ಜೇಟ್ಲಿ ಅಸಮಾಧಾನ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ. `ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಸಮಾಧಾನ ಮಾಡುವ ಸ್ಥಿತಿಯಲ್ಲಿ ನಾನು ಇಲ್ಲ~ ಎಂದು ಜೇಟ್ಲಿ ಅವರು ಅಸಹಾಯಕತೆ ತೋಡಿಕೊಂಡಿದ್ದಾರೆ. `ಅವರು (ಯಡಿಯೂರಪ್ಪ) ಯಾವ ತೀರ್ಮಾನ ಬೇಕಾದರೂ ತೆಗೆದುಕೊಳ್ಳಲಿ. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಇನ್ನು ಮುಂದೆ ವರಿಷ್ಠರಿಂದ ನಡೆಯುವುದಿಲ್ಲ~ ಎಂದು ಜೇಟ್ಲಿ ಹೇಳಿದರು ಎಂದು ಮೂಲಗಳು ತಿಳಿಸಿವೆ.ಈ ನಡುವೆ ಯಡಿಯೂರಪ್ಪ ಸುದ್ದಿಗಾರರ ಜತೆ ಮಾತನಾಡಿ, `ಜೇಟ್ಲಿ ಅವರನ್ನು ಭೇಟಿ ಮಾಡುವುದಿಲ್ಲ. ಹಾಗೊಂದು ವೇಳೆ ಭೇಟಿ ಮಾಡುವುದಿದ್ದರೆ ದೆಹಲಿಗೆ ಹೋಗಿ ಭೇಟಿ ಮಾಡುವೆ~ ಎಂದು ಹೇಳಿದರು.`ಆರ್ಟ್ ಆಫ್ ಲಿವಿಂಗ್~ನಲ್ಲಿ ನಡೆದ ಕಾರ್ಯಕ್ರಮ ಮುಗಿಸಿಕೊಂಡು ಯಡಿಯೂರಪ್ಪ ಸೋಮವಾರ ರಾತ್ರಿ ಶಿವಮೊಗ್ಗಕ್ಕೆ ರೈಲಿನಲ್ಲಿ ಪ್ರಯಾಣಿಸಿದರು. ಅದೇ ರೈಲಿನಲ್ಲಿ ಈಶ್ವರಪ್ಪ ಅವರೂ ಶಿವಮೊಗ್ಗಕ್ಕೆ ತೆರಳಿದರು.ಪಕ್ಷದ ಕಚೇರಿಗೆ: ಜೇಟ್ಲಿ ಅವರು ಮಂಗಳವಾರ ಬೆಳಿಗ್ಗೆ ಪಕ್ಷದ ಕಚೇರಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಪಕ್ಷದ ಮುಖಂಡರ ಜತೆ ಅಲ್ಲಿ ಔಪಚಾರಿಕವಾಗಿ ಮಾತುಕತೆ ನಡೆಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry