ಮಂಗಳವಾರ, ಮೇ 17, 2022
26 °C

ಬಿಎಸ್‌ವೈ ವಿರುದ್ಧದ ಮತ್ತೊಂದು ಹಗರಣ: ತನಿಖೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭೂಹಗರಣಗಳ ಆರೋಪ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ವೈ.ಎಸ್.ವಿ.ದತ್ತ ಅವರು ಸಲ್ಲಿಸಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಗುತ್ತಿಗೆ ಅವ್ಯವಹಾರ ಕುರಿತ ಖಾಸಗಿ ದೂರು ಸೇರಿದಂತೆ ಆರು ಹಗರಣಗಳ ತನಿಖೆಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ  ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯವು ಬುಧವಾರ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ.ಲೋಕಾಯುಕ್ತ (ಓಂಬುಡ್ಸ್‌ಮನ್) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಹಗರಣದ ತನಿಖೆ ನಡೆಸಿ ನವೆಂಬರ್ 26 ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದರು.ತನಿಖೆ ನಡೆಸಲು ಮೂರು ತಿಂಗಳ ಕಾಲಾವಕಾಶ ನೀಡುವಂತೆ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಮಾಡಿಕೊಂಡ ಮನವಿಯನ್ನು ನ್ಯಾಯಾಧೀಶರು ನಿರಾಕರಿಸಿದರು.ಭದ್ರಾ ಮೇಲ್ದಂಡೆ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರಿಗೆ  ಹೈಕೋರ್ಟ್ ಈಗಾಗಲೇ ನಿರೀಕ್ಷಣಾ ಜಾಮೀನು ನೀಡಿದೆ.ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಕಾಮಗಾರಿ ಗುತ್ತಿಗೆ ನೀಡಲು ಖಾಸಗಿ ಸಂಸ್ಥೆಯೊಂದರಿಂದ ಯಡಿಯೂರಪ್ಪ ಅವರು 13 ಕೋಟಿ ಲಂಚ ಪಡೆದಿರುವ ಕುರಿತಂತೆ ಅವರ ವಿರುದ್ಧ ಆರು ಪ್ರಕರಣಗಳನ್ನು ದಾಖಲಿಸಲಾಗಿದೆ.ಈ ಯೋಜನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ತುಂಗಾ ನದಿಯಿಂದ ನೆರೆಯ ಶಿವಮೊಗ್ಗದ ಭದ್ರಾ ಜಲಾಶಯಕ್ಕೆ ನೀರು ಪಡೆಯಲು  ಉದ್ದೇಶಿಸಲಾಗಿದೆ.

ಭದ್ರಾ ಮೇಲ್ಡಂಡೆ ಎರಡನೇ ಹಂತದ ಯೋಜನೆಯ ಕಾಮಗಾರಿಯನ್ನು 550 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು 2006ರಲ್ಲಿ ಅಂದಾಜು ಸಿದ್ಧಪಡಿಸಲಾಗಿತ್ತು. 2008ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಾಮಗಾರಿ ಗುತ್ತಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿತ್ತು. ಆಗ 14 ಕಂಪೆನಿಗಳು ಆಸಕ್ತಿ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದವು.ಐದು ಕಂಪೆನಿಗಳು ಮಾತ್ರ ಗುತ್ತಿಗೆ ಪಡೆಯುವ ಅರ್ಹತೆ ಹೊಂದಿವೆ ಎಂದು ಸರ್ಕಾರ ಆಯ್ಕೆ ಮಾಡಿತ್ತು. ಆದರೆ 2009ರಲ್ಲಿ ನಡೆದ ಅಂತಿಮ ಟೆಂಡರ್‌ನಲ್ಲಿ ಎರಡು ಕಂಪೆನಿಗಳು ಮಾತ್ರ ಬಿಡ್ ಸಲ್ಲಿಸಿದ್ದವು.`ಆರ್‌ಎನ್‌ಎಸ್ ಜ್ಯೋತಿ ಜಾಯಿಂಟ್ ವೆಂಚರ್ ಕಂಪೆನಿ~ಯು 1,033 ಕೋಟಿ ರೂಪಾಯಿ ಮೊತ್ತಕ್ಕೆ ಬಿಡ್ ಸಲ್ಲಿಸಿತ್ತು. ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್ 1,025 ಕೋಟಿ ರೂಪಾಯಿಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಬಿಡ್‌ನಲ್ಲಿ ತಿಳಿಸಿತ್ತು. 1,006 ಕೋಟಿ ರೂಪಾಯಿಗೂ ಮುಗಿಸಲು ಸಿದ್ಧ ಎಂದು ಈ ಕಂಪೆನಿ ಹೇಳಿತ್ತು.ಆದರೆ, ಸರ್ಕಾರ ಹೆಚ್ಚು ಮೊತ್ತಕ್ಕೆ ಬಿಡ್ ಸಲ್ಲಿಸಿದ್ದ ಆರ್‌ಎನ್‌ಎಸ್- ಜ್ಯೋತಿ ಜಾಯಿಂಟ್ ವೆಂಚರ್ ಕಂಪೆನಿಗೆ ಗುತ್ತಿಗೆ ನೀಡಿತ್ತು. ಕರ್ನಾಟಕ ನೀರಾವರಿ ನಿಗಮದ ಅಧ್ಯಕ್ಷರೂ ಆಗಿದ್ದ ಯಡಿಯೂರಪ್ಪ ಅವರು, ಕಾನೂನು ಉಲ್ಲಂಘಿಸಿ ಈ ನಿರ್ಧಾರ ಕೈಗೊಂಡಿದ್ದರು. ಇದರಿಂದ ಯಡಿಯೂರಪ್ಪ ಅವರಿಗೆ ವೈಯಕ್ತಿಕವಾಗಿ ಲಾಭವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಅಲ್ಲದೇ ಗುತ್ತಿಗೆ ನೀಡಿದ ಅವಧಿಯಲ್ಲೇ ಆರ್.ಎನ್.ಶೆಟ್ಟಿ ಸಮೂಹದ ಮುರ್ಡೇಶ್ವರ ಕಂಪೆನಿಯು ಯಡಿಯೂರಪ್ಪ ಅವರ ಪುತ್ರರು ಮತ್ತು ಅಳಿಯ ಪಾಲುದಾರರಾಗಿರುವ `ಧವಳಗಿರಿ ಪ್ರಾಪರ್ಟೀಸ್ ಅಂಡ್ ಡೆವಲಪರ್ಸ್~ಗೆ 11 ಕೋಟಿ ರೂಪಾಯಿ ಮತ್ತು  ಯಡಿಯೂರಪ್ಪ ಅವರ ಪುತ್ರರು ಮತ್ತು ಶಾಸಕ ದಯಾನಂದ ಸಾಗರ್ ಪಾಲುದಾರಿಕೆಯ ಸಹ್ಯಾದ್ರಿ ಹೆಲ್ತ್‌ಕೇರ್ ಅಂಡ್ ಡಯಾಗ್ನಾಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್~ಗೆ ರೂ 2 ಕೋಟಿ ಸಂದಾಯ ಆಗಿದೆ ಎಂದು ಆರೋಪಿ ದತ್ತ ಅವರು ಜುಲೈ 27ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.