ಬಿಎಸ್‌ವೈ ವಿರುದ್ಧ ತನಿಖೆ: ಶನಿವಾರ ಸಿಇಸಿ ವಿಚಾರಣೆ

7

ಬಿಎಸ್‌ವೈ ವಿರುದ್ಧ ತನಿಖೆ: ಶನಿವಾರ ಸಿಇಸಿ ವಿಚಾರಣೆ

Published:
Updated:

ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವರ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿರುವ ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್‌ನ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶನಿವಾರ ವಿಚಾರಣೆ ನಡೆಸಲಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಹಿರಿಯ ಸಲಹೆಗಾರ ಎಸ್.ಆರ್. ಹಿರೇಮಠ ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಿಇಸಿ ನೋಟಿಸ್ ಜಾರಿ ಮಾಡಿದೆ. ಯಡಿಯೂರಪ್ಪ ಅವರು ಜಿಂದಾಲ್ ಸಮೂಹದಿಂದ ಹಣ ಪಡೆದ ಆರೋಪ, ಅದಾನಿ ಎಂಟರ್‌ಪ್ರೈಸಸ್ ಮತ್ತಿತರರ ಕಂಪೆನಿಗಳು ನಡೆಸಿರುವ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ನಡೆಸಬೇಕೇ, ಬೇಡವೇ ಎಂಬುದರ ಬಗ್ಗೆ ಸಿಇಸಿ ವಿಚಾರಣೆ ನಡೆಸಲಿದೆ~ ಎಂದರು.`ಯಡಿಯೂರಪ್ಪ ಅವರ ವಿರುದ್ಧದ ಪ್ರಕರಣ ಲೋಕಾಯುಕ್ತದಲ್ಲಿದೆ. ಆದರೆ, ಲೋಕಾಯುಕ್ತದ ಎಡಿಜಿಪಿ ಹುದ್ದೆಯಲ್ಲಿದ್ದ ಜೀವನ್‌ಕುಮಾರ್ ಗಾಂವ್ಕರ್ ಮತ್ತು ಡಿಐಜಿ ಹುದ್ದೆಯಲ್ಲಿದ್ದ ಪ್ರಣವ್ ಮೊಹಾಂತಿ ಅವರನ್ನು ರಾಜಕೀಯ ಅಧಿಕಾರ ದುರುಪಯೋಗ ಮಾಡಿಕೊಂಡು ವರ್ಗಾವಣೆ ಮಾಡಲಾಗಿದೆ. ಆ ನಂತರ, ಯಡಿಯೂರಪ್ಪ ವಿರುದ್ಧದ ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತದೆ ಎಂಬ ಆಶಾಭಾವ ನಮಗಿಲ್ಲ. ಆದ್ದರಿಂದ ಸಿಬಿಐ ತನಿಖೆಗೆ ಮನವಿ ಮಾಡಿದ್ದೇವೆ. ಸುಪ್ರೀಂಕೋರ್ಟ್ ಈ ಮನವಿಯನ್ನು ಪರಿಗಣಿಸುತ್ತದೆ ಎಂಬ ವಿಶ್ವಾಸವಿದೆ~ ಎಂದರು.`ತುಮಕೂರಿನ ಮಾತಾ ಮೈನಿಂಗ್ ಕಂಪೆನಿ, ಬಳ್ಳಾರಿಯ ಲತಾ ಮೈನಿಂಗ್ ಕಂಪೆನಿ, ಬಳ್ಳಾರಿ ಮೈನಿಂಗ್ ಕಾರ್ಪೊರೇಷನ್, ದಾಲ್ಮಿಯಾ ಕಂಪೆನಿ ಸೇರಿದಂತೆ ಕೆಲ ಗಣಿ ಮಾಲೀಕರ ವಿರುದ್ಧ ಈಗ ಮಾಡಿರುವ ಶಿಫಾರಸುಗಳಿಗಿಂತಲೂ ಗಂಭೀರ ಕ್ರಮ ಕೈಗೊಳ್ಳುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry