ಭಾನುವಾರ, ಮೇ 9, 2021
27 °C

ಬಿಎಸ್‌ವೈ ವಿರುದ್ಧ ಸಿಇಸಿಗೆ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಕ್ಕಳ ಟ್ರಸ್ಟ್‌ಗಳಿಗೆ ಗಣಿ ಕಂಪೆನಿಗಳಿಂದ ಹಣ ಸಂದಾಯವಾಗಿರುವ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ದಾಖಲೆಗಳನ್ನು ಧಾರವಾಡ ಮೂಲದ ಸಮಾಜ ಪರಿವರ್ತನಾ ಸಮುದಾಯ (ಎಸ್‌ಪಿಎಸ್) ಶುಕ್ರವಾರ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಸಲ್ಲಿಸಿತು.ಎಸ್‌ಪಿಎಸ್ ಮುಖ್ಯಸ್ಥ ಎಸ್.ಆರ್. ಹಿರೇಮಠ ಅವರು ಸುಪ್ರೀಂಕೋರ್ಟ್ ನೇಮಕ ಮಾಡಿದ ಉನ್ನತಾಧಿಕಾರ ಸಮಿತಿಗೆ ದಾಖಲೆ ಸಲ್ಲಿಸಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೆಲವು ಗಣಿ ಕಂಪೆನಿಗಳಿಗೆ ಗುತ್ತಿಗೆ ನೀಡಿ ಅನುಕೂಲ ಮಾಡಿಕೊಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಗಣಿ ಕಂಪೆನಿಗಳು ಮೂರ‌್ನಾಲ್ಕು ಪಟ್ಟು ಹೆಚ್ಚಿನ ಹಣ ನೀಡಿ ಯಡಿಯೂರಪ್ಪನವರ ಮಕ್ಕಳಿಗೆ ಸೇರಿದ ಭೂಮಿ ಖರೀದಿಸಿವೆ ಎಂದು ಆರೋಪಿಸಿದರು.ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು 2006ರಲ್ಲಿ ನಗರದ ರಾಚೇನಹಳ್ಳಿಯಲ್ಲಿ 1.12 ಎಕರೆ ಭುಮಿ ವಶಪಡಿಸಿಕೊಂಡಿತ್ತು. ಆದರೆ, 2008ರಲ್ಲಿ ಸಚಿವರಾಗಿದ್ದ ಕೃಷ್ಣಯ್ಯ ಶೆಟ್ಟಿ ಅವರು ಈ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿಸಿದ್ದರು.

 

ನಂತರ ಭೂಮಿಯನ್ನು ಯಡಿಯೂರಪ್ಪ ಕುಟುಂಬದ ಸದಸ್ಯರಿಗೆ ಮಾರಾಟ ಮಾರಾಟ ಮಾಡಲಾಗಿತ್ತು. ಅದೇ ಭೂಮಿಯನ್ನು ಸೌಥ್ ವೆಸ್ಟ್ ಗಣಿ ಕಂಪೆನಿ ಅಪಾರ ಮೊತ್ತದ ಹಣ ನೀಡಿ ಖರೀದಿಸಿದೆ ಎಂದು ಹಿರೇಮಠ ಆಪಾದಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಅವರು ಸಿಇಸಿಗೆ ಸಲ್ಲಿಸಿದರು.ಡಿನೋಟಿಫಿಕೇಶನ್ ಪ್ರಕರಣ ಮತ್ತು ಗಣಿ ಹಗರಣ ಕುರಿತು ಸಿಇಸಿ ನಡೆಸುತ್ತಿರುವ ತನಿಖೆ ಅಂತಿಮ ಹಂತದಲ್ಲಿದ್ದು ಈ ಪ್ರಕರಣಗಳಿಗೆ ಸಂಬಂಧಿಸಿದ ಯಾವುದೇ ದಾಖಲೆಗಳಿದ್ದರೆ ಏ. 18ರ ಒಳಗಾಗಿ ತನಗೆ ಸಲ್ಲಿಸುವಂತೆ ಸಮಿತಿ ಸೂಚಿಸಿದೆ.ಎಸ್‌ಪಿಎಸ್ ಈ ಎಲ್ಲ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿದ್ದು ಆ ಬಗ್ಗೆ ತನಿಖೆ ನಡೆಸಿರುವ ಸಿಇಸಿ ಏ. 20ರಂದು ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ಅವರ ನೇತೃತ್ವದ ಹಸಿರು ಪೀಠದ ಎದುರು ಈ ವರದಿ ಪರಿಶೀಲನೆಗೆ ಬರಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.