ಶನಿವಾರ, ಏಪ್ರಿಲ್ 17, 2021
30 °C

ಬಿಎಸ್‌ವೈ ಹೊಸ ಪಕ್ಷ ಸ್ಥಾಪನೆ ಸಂದೇಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಸಂದೇಹವಿದೆ. ಯಾಕೆಂದರೆ ಅವರಲ್ಲೇ ದ್ವಂದ್ವವಿದೆ. ಯಡಿಯೂರಪ್ಪ ತಾವಾಗಿಯೇ ಹೊರಹೋಗಲಿ ಎಂಬುದು ಬಿಜೆಪಿಯ ತಂತ್ರ. ಆದರೆ, ಜನರ ಕಣ್ಣೊರೆಸಲು ಬಿಎಸ್‌ವೈ ಬಿಜೆಪಿಯಲ್ಲೇ ಇದ್ದಾರೆ ಎಂದೆಲ್ಲಾ ಮುಖಂಡರು ಹೇಳುತ್ತಿದ್ದಾರೆ ಅಷ್ಟೆ.-ಹೀಗೆಂದು ವಿಶ್ಲೇಷಿಸಿದವರು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ.

ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಆಗಮಿಸಿದ ಅವರು ಇಲ್ಲಿನ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರಿಗೆ  ಸ್ಪಷ್ಟ ಉದ್ದೇಶ ಇಲ್ಲ. ಒಂದು ವೇಳೆ ಪಕ್ಷ ಕಟ್ಟಿದರೆ ಈ ಸರ್ಕಾರ ಅವಧಿ ಪೂರೈಸುವುದಿಲ್ಲ.ಪಕ್ಷ ಕಟ್ಟುತ್ತೇನೆ. ತಮ್ಮ ಬೆಂಬಲಿಗರು ಸರ್ಕಾರದಲ್ಲೇ ಇರುತ್ತಾರೆ ಎಂದರೆ ಏನರ್ಥ? ಅಲ್ಲಿ ಇರುವವರು ಚೆನ್ನಾಗಿ ಮೇಯಲಿ, ಎಲ್ಲ ತಿಂದು ಮುಗಿಸಿ ತಮ್ಮ ಪಕ್ಷ ಸೇರಲಿ ಎಂಬುದು ಅಲ್ಲವೆ?. ಅವರು ಪಕ್ಷ ಕಟ್ಟಿದರೆ ಕಾಂಗ್ರೆಸ್‌ಗೆ ಸ್ವಲ್ಪಮಟ್ಟಿಗೆ ಲಾಭವಾಗಬಹುದು. ಆದರೆ, ಆ ಬಗ್ಗೆ ನಾವು ಯೋಚಿಸಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಭದ್ರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಯಡಿಯೂರಪ್ಪ ಅವರನ್ನು ಕಾಂಗ್ರೆಸ್ ಸೇರಿಸಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ, ಅವರು ಫ್ಯಾಸಿಸ್ಟ್ ಮನೋಭಾವದವರು. ಅವರನ್ನು ಯಾವತ್ತೂ ಸೇರಿಸಲಾಗದು. ಹುಟ್ಟು ಸುಳಿ ಬೋಳಿಸಿದರೂ ಹೋಗದು ಎಂದು ಚುಚ್ಚಿದ ಅವರು, ಬಿಎಸ್‌ವೈ ಹಿಂದುಳಿದ ವರ್ಗಗಳ ವಿರೋಧಿ. ಅವರು ಹಿಂದುಳಿದವರ ಪರ ಮಾತನಾಡುತ್ತಾರೆ ಎಂದರೆ `ಭೂತದ ಬಾಯಲ್ಲಿ ಭಗವದ್ಗೀತೆ~ ಕೇಳಿದಂತೆ ಎಂದು ಕುಟುಕಿದರು.ಕಾಂಗ್ರೆಸ್‌ನಿಂದ ಹೋಗುವವರನ್ನು ಜೆಡಿಎಸ್ ಸೇರಿಸಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು. ಕಾಂಗ್ರೆಸ್‌ನಿಂದ ಯಾರೂ ಹೋಗುವುದಿಲ್ಲ. ಬದಲಾಗಿ ಜೆಡಿಎಸ್‌ನಿಂದಲೇ ಬರಬಹುದು. ಕಾಂಗ್ರೆಸ್ ಆಂತರಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿದೆ. ಪಕ್ಷದ ತತ್ವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಬರುವವರನ್ನು ಅವರ ಹಿನ್ನೆಲೆಯನ್ನು ಗಮನಿಸಿ ಸೇರಿಸಲಾಗುವುದು ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.